ಅತ್ಯಾಚಾರ ಆರೋಪ: ಖ್ಯಾತ ಕ್ರಿಕೆಟರ್ ಅಮಾನತು ಮಾಡಿದ ಕ್ರಿಕೆಟ್ ಮಂಡಳಿ..!
Sri Lankan cricket board suspends Danushka Gunathilaka: ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿ ಹಿನ್ನೆಲೆ ಅಲ್ಲಿನ ಪೊಲೀಸರು ಧನುಷ್ಕಾ ಗುಣತಿಲಕರನ್ನು ಬಂಧಿಸಿದ್ದಾರೆ.
ನವದೆಹಲಿ: ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ರಾಷ್ಟ್ರೀಯ ತಂಡದ ಆಟಗಾರ ದನುಷ್ಕ ಗುಣತಿಲಕರನ್ನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಗುಣತಿಲಕರನ್ನು ಬಂಧಿಸಿದ ನಂತರ ಮಂಡಳಿಯು ಈ ನಿರ್ಧಾರ ತೆಗೆದುಕೊಂಡಿದೆ. 31 ವರ್ಷದ ಗುಣತಿಲಕರನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ನ.2ರಂದು ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಎಲ್ಲ ಪ್ರಕಾರದ ಕ್ರಿಕೆಟ್‌ಗಳಿಂದ ಅಮಾನತು!
‘ಶ್ರೀಲಂಕಾ ಕ್ರಿಕೆಟ್‌ನ (SLC) ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ತಂಡದ ಆಟಗಾರ ದನುಷ್ಕ ಗುಣತಿಲಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‍ಗಳಿಂದ ಅಮಾನತುಗೊಳಿಸಲು ನಿರ್ಧರಿಸಿದೆ ಮತ್ತು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ’ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಗುಣತಿಲಕರನ್ನು ಬಂಧಿಸಿದ ಬಳಿಕ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.
‘ಇದಲ್ಲದೆ ಶ್ರೀಲಂಕಾ ಕ್ರಿಕೆಟ್ ಈ ಆಪಾದಿತ ಅಪರಾಧದ ತನಿಖೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಆಸ್ಟ್ರೇಲಿಯಾದ ನ್ಯಾಯಾಲಯದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಆಟಗಾರನನ್ನು ಶಿಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ: T20 World Cup Money Prize: ವಿಶ್ವಕಪ್ ಗೆದ್ದವರ ಪಾಲಾಗಲಿರುವ ಮೊತ್ತವೆಷ್ಟು? ರನ್ನರ್ ಅಪ್ ಗೂ ಸಿಗಲಿದೆಯೇ ಬಹುಮಾನ?
ತನಿಖೆಗೆ ಮಂಡಳಿ ನೆರವಾಗಲಿದೆ
ಆಟಗಾರನ ನಡವಳಿಕೆಯ ವಿಚಾರವಾಗಿ ಶೂನ್ಯ-ಸಹಿಷ್ಣು ನೀತಿಯನ್ನು ಅಳವಡಿಸಿಕೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯಾದ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಮಂಡಳಿ ಸಿದ್ಧವಿದೆ ಎಂದು ತಿಳಿಸಿದೆ.
ಗುಣತಿಲಕ ಇಲ್ಲದೆ ತವರಿಗೆ ಮರಳಿದ ಲಂಕಾ ತಂಡ!
ಶನಿವಾರದಂದು ಟಿ-20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಶ್ರೀಲಂಕಾ ತಂಡವು ದನುಷ್ಕ ಗುಣತಿಲಕ ಇಲ್ಲದೆ ಆಸ್ಟ್ರೇಲಿಯಾದಿಂದ ನಿರ್ಗಮಿಸಿತು. ಸ್ಥಳೀಯ ನ್ಯಾಯಾಲಯ ಸೋಮವಾರ ಗುಣತಿಲಕರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಸ್ಥಳೀಯ ನ್ಯಾಯಾಲಯದ ಸರ್ರೆ ಹಿಲ್ಸ್ ಇಲಾಖೆಯಲ್ಲಿ ವಿಡಿಯೋ ಲಿಂಕ್ ಮೂಲಕ ಗುಣತಿಲಕ ವಿಚಾರಣೆಗೆ ಹಾಜರಾಗಿದ್ದರು. ವರದಿಯ ಪ್ರಕಾರ, ವರ್ಚುವಲ್ ವಿಚಾರಣೆಗೆ ಹಾಜರಾದಾಗ ಗುಣತಿಲಕ ಕೈಕೋಳ ಹಾಕಿದ್ದರು, ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಜಾಮೀನು ನೀಡಿಲ್ಲ
ವಿಚಾರಣೆ ವೇಳೆ ಗುಣತಿಲಕ ಪರ ವಕೀಲ ಆನಂದ್ ಅಮರನಾಥ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮ್ಯಾಜಿಸ್ಟ್ರೇಟ್ ರಾಬರ್ಟ್ ವಿಲಿಯಮ್ಸ್ ಜಾಮೀನು ನೀಡಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ‘ನಾವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನೋಡುತ್ತಿದ್ದೇವೆ ಮತ್ತು ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಲಾಗುವುದು’ ಎಂದು ಅಮರನಾಥ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ‘ICC Men's Player of the Month’ ಎನಿಸಿಕೊಂಡ ಕಿಂಗ್ ಕೊಹ್ಲಿ: ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದ ವಿರಾಟ್
ನಮೀಬಿಯಾ ವಿರುದ್ಧ ಮೊದಲ ಸುತ್ತಿನಲ್ಲಿ ಆಡಿದ್ದ ದನುಷ್ಕ ಗುಣತಿಲಕ ಖಾತೆ ತೆರೆಯದೆ ಔಟಾಗಿದ್ದರು. ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದರು. ಶ್ರೀಲಂಕಾ ತಂಡವು ಸೂಪರ್ 12ರ ಹಂತಕ್ಕೆ ಅರ್ಹತೆ ಗಳಿಸಿತ್ತು, ಆದರೆ ಗ್ರೂಪ್-1 ರಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಟೂರ್ನಿಯಿಂದ ನಿರ್ಗಮಿಸಿತು.
ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯ
ಸ್ಥಳೀಯ ಮಾಧ್ಯಮಗಳ ಪ್ರಕಾರ, ದನುಷ್ಕ ಗುಣತಿಲಕ ಮತ್ತು ಮಹಿಳೆ ಕಳೆದ ಹಲವು ದಿನಗಳಿಂದ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಅತ್ಯಾಚಾರ ಆರೋಪ ಕೇಳಿಬಂದ ಬೆನ್ನಲ್ಲಿಯೇ ಸ್ಥಳೀಯ ಕಾಲಮಾನ ನಸುಕಿನ 1 ಗಂಟೆಗೆ ಸಿಡ್ನಿಯ ಹೋಟೆಲ್‌ನಿಂದ ಆಟಗಾರನನ್ನು ಬಂಧಿಸಲಾಯಿತು. ಆ ಸಮಯದಲ್ಲಿ ಶ್ರೀಲಂಕಾ ತಂಡವು ತವರಿಗೆ ತೆರಳಲು 6 ಗಂಟೆಯ ವಿಮಾನವನ್ನು ಹಿಡಿಯಲು ಏರ್‍ಪೊರ್ಟ್‍ಗೆ ಹೊರಡಲು ಸಿದ್ಧತೆ ನಡೆಸಿತ್ತು.
ವಿವಾದ V/s ಗುಣತಿಲಕ
2018ರಲ್ಲಿ ತಂಡದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಂಡಳಿಯು ಗುಣತಿಲಕರನ್ನು 6 ತಿಂಗಳ ಕಾಲ ನಿಷೇಧಿಸಿತ್ತು. ಅದೇ ವರ್ಷದಲ್ಲಿ ಗುಣತಿಲಕ ಅವರ ಅಪರಿಚಿತ ಸ್ನೇಹಿತ ನಾರ್ವೇಜಿಯನ್ ಮಹಿಳೆಯ ಮೇಲೆ ಅತ್ಯಾಚಾರದ ಆರೋಪದ ನಂತರ ಅಮಾನತುಗೊಂಡರು. 2017ರಲ್ಲಿ ಅಭ್ಯಾಸದ ಅವಧಿಗೆ ಹಾಜರಾಗದ ಮತ್ತು ಕ್ರಿಕೆಟ್ ಪರಿಕರಗಳಿಲ್ಲದೆ ಪಂದ್ಯಕ್ಕೆ ಆಗಮಿಸಿದ್ದಕ್ಕಾಗಿ ಮಂಡಳಿಯು ಗುಣತಿಲಕರನ್ನು 6 ಸೀಮಿತ ಓವರ್‌ಗಳ ಪಂದ್ಯಗಳಿಗೆ ಅಮಾನತುಗೊಳಿಸಿತು. ಶ್ರೀಲಂಕಾ ಪರ 8 ಟೆಸ್ಟ್‌ಗಳು, 47 ಏಕದಿನ ಮತ್ತು 46 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗುಣತಿಲಕ ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.