Sachin Tendulkar vs Vinod Kambli: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ಹಠಾತ್ ಅನಾರೋಗ್ಯದ ಕಾರಣ ಅವರನ್ನು ಥಾಣೆಯ ಪ್ರಗತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂತ್ರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಿನೋದ್‌ ಕಾಂಬ್ಳಿಯವರ ಸ್ಥಿತಿ ನೋಡಿ ಅವರ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಆಸ್ಪತ್ರೆಯಿಂದಲೇ ತನ್ನ ಬಗ್ಗೆ ಕಾಳಜಿ ವಹಿಸಿದ ಬಾಲ್ಯದ ಗೆಳೆಯ ಸಚಿನವ ತೆಂಡೂಲ್ಕರ್‌ ಅವರಿಗೆ ವಿನೋದ್‌ ಕಾಂಬ್ಳಿ ಕೃತಜ್ಞತೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕ್ರಿಕೆಟ್‌ ದೇವರು ಖ್ಯಾತಿಯ ಮಾಸ್ಟರ್‌ ಬ್ಲ್ಯಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮತ್ತು ವಿನೋದ್‌ ಕಾಂಬ್ಳಿ ಬಾಲ್ಯದಿಂದಲೂ ಗೆಳೆಯರು. ಒಟ್ಟಿಗೆ ಕ್ರಿಕೆಟ್ ಆಡುತ್ತಾ ಬೆಳೆದ ಇವರು ಒಬ್ಬನೇ ಗುರುವಿನ ಇಬ್ಬರು ಶಿಷ್ಯಂದಿರು. ಕೋಚ್ ರಮಾಕಾಂತ್ ಅಜ್ರೇಕರ್ ಗರಡಿಯಲ್ಲಿ ಪಳಗಿ ಹತ್ತು ಹಲವು ದಾಖಲೆಗಳನ್ನು ಜೊತೆಯಾಗಿಯೇ ನಿರ್ಮಿಸಿದವರು. ಇವರಿಬ್ಬರ ರೈಟ್ ಹ್ಯಾಂಡ್-ಲೆಫ್ಟ್ ಹ್ಯಾಂಡ್ ಕಾಂಬಿನೇಶನ್ ಬೌಲರ್‌ಗಳಿಗೆ ತಲೆನೋವಿನ ವಿಷಯವಾಗಿತ್ತು. ಎಲ್ಲವೂ ಸರಿಯಾಗಿದ್ದರೆ ವಿನೋದ್ ಕಾಂಬ್ಳಿ ಇಂದು ಕ್ರಿಕೆಟ್‌ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದರು. ಸಚಿನ್ ತೆಂಡೂಲ್ಕರ್‌ಗೆ ಸರಿಸಮನಾಗಿ ಬೆಳೆದು ನಿಲ್ಲುತ್ತಿದ್ದರು. ಆದರೆ ಕ್ರಿಕೆಟಿಗನೊಬ್ಬ ಹೇಗೆ ಬೆಳೆಯಬೇಕು? ತನಗೆ ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಸಚಿನ್ ಉದಾಹರಣೆಯಾದರೆ, ಕಾಂಬ್ಳಿ ಕ್ರಿಕೆಟಿಗನೊಬ್ಬ ಹೇಗಿರಬಾರದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ. ಇವರಿಬ್ಬರ ಬಗ್ಗೆ ರಾಹುಲ್ ಹಜಾರೆ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದ ಬರಹವನ್ನು ಇಲ್ಲಿ ನೀಡುತ್ತಿದ್ದೇವೆ... 


ಇದನ್ನೂ ಓದಿ: ಅಂತೂ ಇಂತೂ... ಕೊನೆಗೂ ವಾಮಿಕಾ ಮತ್ತು ಅಕಾಯ್‌ ಫೋಟೋ ತೋರಿಸಿದ ಅನುಷ್ಕಾ! ಎಷ್ಟೊಂದು ಕ್ಯೂಟ್‌ ಆಗಿದ್ದಾರೆ ಕೊಹ್ಲಿಯ ಕಂದಮ್ಮಗಳು! ಫೋಟೋ ನೋಡಿ


ಸಚಿನ್-ಕಾಂಬ್ಳಿ ಇಬ್ಬರ ಸ್ನೇಹ, ಸಾಧನೆ ಮತ್ತು ಜೀವನ ರೂಪಿಸಿಕೊಂಡ ರೀತಿ ಬಹಳಷ್ಟು ಚರ್ಚೆಯಾಗುತ್ತಿದೆ. ಸಚಿನ್ ಸಿಕ್ಕ ಅವಕಾಶಗಳನ್ನು ಸದುಪಯೋಗಪಡೆಸಿಕೊಂಡು ಪ್ರತಿದಿನವೂ ಶ್ರಮ ಹಾಕಿ ಹೊಸತನಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಿ ತಾನು ಕರಿಯರ್ ಆರಂಭಿಸಿದ ನಂತರ ಹುಟ್ಟಿದ ಮಕ್ಕಳೊಂದಿಗೂ ಆಡುವಷ್ಟು ಫಿಟ್ ಆಗಿ ಸಾಧನೆಯ ಪಥದಲ್ಲಿ ಮುಂದುವರೆಯುತ್ತಾ ಹೋದರು. ಪ್ರತಿ ರಂಗವೂ ಯಶಸ್ಸನ್ನು ಹಾಗೇ ಕರುಣಿಸಿಬಿಡುವುದಿಲ್ಲ. ಅದು ನಮ್ಮಿಂದ ಶಿಸ್ತು, ತ್ಯಾಗ ಮತ್ತು ಕಮಿಟ್‌ಮೆಂಟ್‌ ಬೇಡುತ್ತದೆ. ಅದೇ ರೀತಿ ವಿನೋದ್ ಕಾಂಬ್ಳಿಯವರಿಗೂ ಅವಕಾಶ ಸಿಕ್ಕಿತು. ಹಲವಾರು ಬಾರಿ ಸೋತಾಗಲೂ ಮತ್ತೆ ಮತ್ತೆ ಅವಕಾಶ ಸಿಕ್ಕಿತು. ಸಾಧನಾ ಶಿಖರ ಏರಿದಾಗ ಶಿಸ್ತನ್ನು ಮರೆತು ಬಿಟ್ಟು ವಿವಿಧ ನಶೆಗಳಿಗೆ ಒಳಗಾದರು. ಇವತ್ತೇನೂ ಬದುಕು ಕಟ್ಟಿಕೊಳ್ಳಲು ಅವಕಾಶದ ಕೊರತೆಗಳಿಲ್ಲ. ಐಪಿಎಲ್ ಬಂದು ಎಂಟ್ಹತ್ತು ತಂಡಗಳಾಗಿವೆ. ಚಿಕ್ಕಪುಟ್ಟ ರಾಷ್ಟ್ರಗಳ ತಂಡಗಳಿಗೆ ಈಗಾಗಲೇ ಸಾಧನೆಗೈದ ತಂಡಗಳ‌ ಹಿರಿಯ ಆಟಗಾರರು ಕೋಚ್ ಆಗಿ ಬರಲಿ‌ ಎಂದು ಆಹ್ವಾನ ನೀಡುತ್ತಿದ್ದಾರೆ.‌


ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್‌ ಆದ ಬೆನ್ನಲ್ಲೆ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರಿಷಬ್‌ ಪಂತ್‌!


ಈಗ ವಿಷಯ ಅದಲ್ಲ.. ವಿನೋದ್‌ ಕಾಂಬ್ಳಿ ಜೊತೆಗೆ ಬಾಲ್ಯದ ಗೆಳೆಯ ನಿರ್ದಯಿಯಾಗಿ ವರ್ತಿಸಿದ ಅಂಥ ಕೆಲವರು ಎದ್ದು ಕೂತಿದ್ದಾರೆ. ಹಸಿದವನಿಗೆ ದುಡ್ಡಿನ ಬದಲು ಕೆಲಸ ಕೊಡು ಎಂಬಂತೆ ಸಚಿನ್ ತನ್ನದೊಂದು ಸಂಸ್ಥೆಗೆ ಕಾಂಬ್ಳಿಯವರನ್ನು ಉಸ್ತುವಾರಿಯಾಗಿಸಿದ್ದರು. ಅಲ್ಲಿಯೂ ಅದೇ ಅಶಿಸ್ತು. ಕಾಂಬ್ಳಿಯವರೇ ಒಪ್ಪಿಕೊಂಡಂತೆ ಸಚಿನ್ ಅವರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಎರಡು ಶಸ್ತ್ರ ಚಿಕಿತ್ಸೆಯ ಅಷ್ಟೂ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರತಿ ಬಾರಿ ಬದುಕು ಸುಧಾರಿಸಿ ದಡ ತಲುಪುತ್ತಿದ್ದಂತೆ ಮತ್ತೆ ಮತ್ತೆ ಸುಳಿಯೆಡೆಗೆ ಹೋಗುವವರನ್ನು ಎಷ್ಟು ಬಾರಿ ಕಾಪಾಡಲು ಸಾಧ್ಯ? ಶ್ರೀಮಂತರು, ಉಳ್ಳವರು ಬಡವರಿಗೆ ದಾನ ಮಾಡಬೇಕು ಎಂಬ ಕಾನ್ಸೆಪ್ಟ್ ಇದೇ ನೋಡಿ, ಇದು ಬೇರೆಯದ್ದೇ ಆಯಾಮ ಪಡೆದಿದೆ. ಪ್ರತಿ ಕುಟುಂಬದಲ್ಲೂ ಇಂಥ ಕೆಲವು ಸಂಬಂಧಿಗಳಿರ್ತಾರೆ. ಪ್ರತಿ ಸ್ನೇಹಿತರ ಬಳಗದಲ್ಲಿ ಇಂಥ ಒಬ್ಬಿಬ್ಬರಿರ್ತಾರೆ. ಉಳಿದವರು ಶ್ರಮ ವಹಿಸಿ ಮುಂದೆ ಹೋಗಿ ದುಡಿದು ಗಳಿಸಿದ ನಂತರ ತಮ್ಮ‌ ಬಡತನಕ್ಕೆ ಅವರ ಕಷ್ಟದ ದುಡಿಮೆಯ ದುಡ್ಡು ಕೊಡಲಿ ಎಂಬ ಧೋರಣೆಯವರು. 


ಒಂದು ಎರಡು ಬಾರಿ ಕಷ್ಟಕ್ಕಾಗಲಿ ಅನ್ನೋದು ಬೇರೆಯ ವಿಚಾರ, ಬದುಕಿನುದ್ದಕ್ಕೂ ಕೊಡುತ್ತಲೇ ಇರಲಿ ಎಂಬಂತೆ ಬಯಸೋದು! ಹೋದರೆ ಹೋಗಲಿ ಇವರು ಕೊಟ್ಟ ದುಡ್ಡಲ್ಲಿ ಅವರದ್ದ್ಯಾವುದೋ ವೈದ್ಯಕೀಯ ಅನಿವಾರ್ಯತೆಗೋ ಸಾಲ ತೀರಿಸಲೋ ಬಳಕೆಯಾಗುತ್ತೆ ಅಂದುಕೊಂಡರೆ ಪರವಾಗಿಲ್ಲ‌. ಕೆಲವರು ಇವರಿಂದ ದುಡ್ಡು ಪಡೆದು ಅತ್ತ ದುಂದಿಗೆ, ಶೋಕಿಗೆ ಖರ್ಚು ಮಾಡುವ ಹೀನರಿದ್ದಾರೆ. ಮತ್ತೆ ಅದನ್ನು ಕೇಳಿದಾಗ ನಮ್ಮ ಜೀವನ ನಮ್ಮಿಷ್ಟ ಎಂಬ ಉಡಾಫೆಯ ಉತ್ತರವನ್ನೋ, ಕಷ್ಟ ಅಂತ ಕೂತರೆ ನಾವು ನಮ್ಮ ಮಕ್ಕಳು ಇಂಥದ್ದನ್ನೆಲ್ಲಾ ಕಾಣೋದು ಯಾವಾಗ ಎಂಬ ಉತ್ತರವನ್ನೋ ಕೊಟ್ಟು ಬಿಡುತ್ತಾರೆ. ಅದು ಉಳ್ಳವರ ಸಹಾಯ ಮಾಡುವ ಪ್ರವೃತ್ತಿಯನ್ನೇ ಕೊಂದು ಹಾಕಿ ಬಿಡುತ್ತೆ. ಸಹಾಯ ಮಾಡಿದವರನ್ನೇ ಮುಂದೊಂದು ದಿನ ಕೀಳಾಗಿ ಕಾಣುವ ಪ್ರಯತ್ನಕ್ಕೂ ಇಳಿಯುತ್ತಾರೆ. 


ಇಲ್ಲಿ ಕಾಂಬ್ಳಿಯವರು ಈ ಕೆಲಸಕ್ಕಿಳಿದಿಲ್ಲ. ಅವರಿಗೆ ಸಚಿನರ ಬಗ್ಗೆ ಕೃತಜ್ಞತೆ ಇದೆ. ಬದುಕು ಹೀಗಾಯ್ತಲ್ಲ ಎಂಬ ವಿಷಾದವೂ ಇದೆ. ಆದರೆ ಸೋಷಿಯಲ್ ಮೇಡಿಯಾದಲ್ಲಿ ಸಚಿನ್ ಏನೂ ಮಾಡಲಿಲ್ಲ ಎಂಬ ಮಾತು ಮತ್ತು ಸಚಿನ್ ಕಾಂಬ್ಳಿಯ ಬದುಕಿನ ಅಷ್ಟೂ ಅನಾಹುತಗಳನ್ನು ಸರಿಪಡೆಸಿ ಮತ್ತೆ ಮತ್ತೆ ದಡ ಸೇರಿಸುತ್ತಲೇ ಇರುವ ಜವಾಬ್ದಾರಿ ಹೊರಬೇಕೆನ್ನುವ ಚರ್ಚೆಗಳಾಗುತ್ತಿದೆ ನೋಡಿ. ಈ ಭಂಡ ವಾದಕ್ಕೆ ಇದೆಲ್ಲಾ ಬರೆಯಬೇಕಾಯಿತು. ಕಾಂಬ್ಳಿ ಸ್ವಲ್ಪ ದಿನ ಕಳೆದು ಮರಳಿ ಸುಂದರ ಬದುಕಿಗೆ ಬರಬಹುದು. ಯಾಕೆಂದರೆ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಸಹಾಯ ಮಾಡಿದವರ ಬಗ್ಗೆ ಕೃತಜ್ಞತೆಯೂ ಇದೆ. ಯಾರೋ ಒಬ್ಬರು ಸಹಾಯ ಮಾಡುತ್ತಲೇ ಇರಬೇಕು ಅನ್ನುವ ಧೋರಣೆಯುಳ್ಳವರು ಯಾವತ್ತೂ ದಡ ಸೇರುವುದಿಲ್ಲ. ಬದುಕಲ್ಲಿ ಗೆಲ್ಲುವುದಿಲ್ಲ. ಅವರು ಮತ್ತೆ ಮತ್ತೆ ಸಹಾಯ ಮಾಡುವವರನ್ನು ಬದಲಾಯಿಸುತ್ತಾ ಎಲ್ಲರನ್ನೂ ದೂಷಿಸುತ್ತಾ ಸಾಗುತ್ತಾರೆ. ಬದುಕು ಯಾವತ್ತೂ ಅಪೂರ್ಣವಾಗಿಯೇ ಇರುತ್ತೆ.


✍ ರಾಹುಲ್ ಹಜಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.