ದುಬೈ : ಪೆಪ್ಸಿಕೋ ಕಂಪನಿಯ ಚೇರ್ಮನ್ ಹಾಗೂ ಸಿಇಒ ಇಂದ್ರಾ ನೂಯಿ ಅವರು ಐಸಿಸಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಜೂನ್ ತಿಂಗಳಿನಲ್ಲಿ ಅವರು ಅಧಿಕೃತವಾಗಿ ಐಸಿಸಿ ಬೋರ್ಡ್ ಸೇರಲಿದ್ದಾರೆ. ಎರಡು ವರ್ಷಗಳ ಅವಧಿಗೆ ಐಸಿಸಿ ಸ್ವತಂತ್ರ ನಿರ್ದೇಶಕಿಯಾಗಿ ಇಂದ್ರಾ ನೂಯಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಅಧಿಕಾರ ಅವಧಿ ಗರಿಷ್ಠ 6 ವರ್ಷಗಳವರೆಗೂ ಇರಲಿದೆ ಎಂದು ಐಸಿಸಿ ಆಡಳಿತ ಹೇಳಿದೆ. 


ಈ ಕುರಿತು ಸಂತಸ ವ್ಯಕ್ತಪಡಿಸಿರುವ ನೂಯಿ, ಐಸಿಸಿಯ ಈ ಸ್ಥಾನಕ್ಕೆ ನೇಮಕವಾದ ಮೊದಲ ಮಹಿಳೆಯಾಗಲು ನಾನು ರೋಮಾಂಚನಗೊಂಡಿದ್ದೇನೆ. ಮಂಡಳಿಯಲ್ಲಿ ನನ್ನ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ. ವಿಶ್ವದಾದ್ಯಂತ ಐಸಿಸಿಯ ಪಾಲುದಾರರು ಮತ್ತು ಕ್ರಿಕೆಟಿಗರು ನಮ್ಮ ಕ್ರೀಡೆಯಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಂಡು, ನಮ್ಮ ಅಭಿಮಾನಿಗಳಿಗೆ ಪ್ರತಿ ಚೆಂಡು ಮತ್ತು ಹೊಡೆತವನ್ನು ಅನುಸರಿಸಲು ನೂತನ ಕಾರಣವನ್ನು ನೀಡುವಂತಾಗಬೇಕು" ಎಂದು ಹೇಳಿದರು.


ಕಳೆದ ಜೂನ್ ತಿಂಗಳಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಹಿಳಾ ನಿರ್ದೇಶಕಿ ಆಯ್ಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇಂದ್ರಾ ನೂಯಿ ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆ, ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದಾರೆ. ಪೆಪ್ಸಿಕೋ ಚೇರ್ಮನ್ ಇಂದ್ರಾ ನೂಯಿ ಅವರಿಗೆ ಹಾರ್ದಿಕ ಸ್ವಾಗತ ಎಂದು ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ತಿಳಿಸಿದ್ದಾರೆ.