ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ ಲೀಗ್ ಪಂದ್ಯಗಳು ಮುಕ್ತಾಯವಾಗಿವೆ. ಪ್ರಸಕ್ತ ಟೂರ್ನಿಯಲ್ಲಿ ಹೊಸ ತಂಡಗಳಾಗಿ ಸೇರಿಕೊಂಡಿದ್ದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟಿವೆ. ಇದರ ಜೊತೆಗೆ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಳೆದ 15 ವರ್ಷಗಳಿಂದ ಪ್ರಶಸ್ತಿ ಗೆಲುವಿಗೆ ಹರಸಾಹಸ ಪಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿವೆ.


COMMERCIAL BREAK
SCROLL TO CONTINUE READING

5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ. ಎಲ್ಲಾ ವಿಭಾಗಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ ಪರಿಣಾಮ ರೋಹಿತ್ ಶರ್ಮಾ ಪಡೆ ಹೀನಾಯ ಸೋಲುಗಳಿಂದಾಗಿ ಕಂಗೆಟ್ಟು ಹೋಯಿತು. ಸತತ 8 ಲೀಗ್ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಕೆಟ್ಟ ಇತಿಹಾಸ ಸೃಷ್ಟಿಸಿತು. ಪ್ರಸಕ್ತ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆ ಸ್ಥಾನ ಅಲಂಕರಿಸಿತು.


ಇದನ್ನೂ ಓದಿ: ಎಷ್ಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದೆ ಗೊತ್ತಾ RCB: ʼಈ ಸಲ ಕಪ್‌ ನಮ್ದೇʼ ಆಗುತ್ತಾ?


ಇನ್ನು 4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸಹ ಈ ಬಾರಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಆಡಿದ 14 ಪಂದ್ಯಗಳಲ್ಲಿ ಸಿಎಸ್‍ಕೆ ಕೂಡ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ‍್ಯವಾಯಿತು. ನಾಯಕತ್ವ ಬದಲಾದವರೂ ಚೆನ್ನೈ ಲಕ್ ಬದಲಾಗಲಿಲ್ಲ. ಹೊಸ ತಂಡಗಳ ಪೈಕಿ ಬಲಿಷ್ಠ ತಂಡವೆನಿಸಿಕೊಂಡಿರುವ ಗುಜರಾತ್ ಟೈಟಾನ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆಡಿದ 14 ಪಂದ್ಯಗಳ ಪೈಕಿ 10 ಗೆಲುವು ಸಾಧಿಸಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.


ಅದರಂತೆ ರಾಜಸ್ಥಾನ್ ರಾಯಲ್ಸ್ ಕೂಡ ಮತ್ತೊಮ್ಮೆ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ಭರವಸೆ ಮೂಡಿಸಿದೆ. ಆಡಿದ 14 ಪಂದ್ಯಗಳ ಪೈಕಿ 9 ಗೆಲುವು ಸಾಧಿಸಿದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ 2ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಬಲಿಷ್ಠವಾಗಿರುವ ಈ ತಂಡ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇನ್ನು ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಕೂಡ ದೊಡ್ಡ ನಿರೀಕ್ಷೆ ಮೂಡಿಸಿದೆ. ಹೊಸ ತಂಡವಾದರೂ ಚೊಚ್ಚಲ ಟೂರ್ನಿಯಲ್ಲಿಯೇ ಲಕ್ನೋ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‍ಗೆ ಲಗ್ಗೆ ಇಟ್ಟಿದೆ.


ಇದನ್ನೂ ಓದಿ: IPL 2022: ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಹೇಗಿರುತ್ತದೆ..?


ಇನ್ನು ಈ ಬಾರಿ ಲಕ್ ಮೂಲಕ ಪ್ಲೇ ಆಫ್‍ಗೆ ಪ್ರವೇಶ ಪಡೆದ ಫಾಫ್ ಡು ಪ್ಲೇಸಿಸ್ ನೇತೃತ್ವದ ಆರ್‌ಸಿಬಿ ಸಹ ಚೊಚ್ಚಲ ಟ್ರೋಫಿ ಎತ್ತಿಹಿಡಿಯಲು ಹವಣಿಸುತ್ತಿದೆ. ಲೀಗ್ನ 69ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 5 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದ್ದು, ಆರ್‌ಸಿಬಿಗೆ ಲಾಭವಾಯಿತು. ಅದೃಷ್ಟದ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವ ಮೂಲಕ ಬಹುವರ್ಷಗಳ ಅಭಿಮಾನಿಗಳ ಕನಸನ್ನು ಈಡೇರಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ.  


ನಾಳೆ ಅಂದರೆ ಮಂಗಳವಾರ ಸಂಜೆ 7.30ಕ್ಕೆ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸಲಿದ್ದಾರೆ. ಮೇ 25ಕ್ಕೆ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಹೊರಬೀಳಲಿದ್ದಾರೆ. ಗೆದ್ದವರು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತವರ ಜೊತೆಗೆ ಮೇ 27ರಂದು ಸೆಣಸಾಡಲಿದ್ದಾರೆ. ಅಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.