ಡ್ಯೂಟಿಗಿಳಿದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ಭೇಷ್ ಎಂದ ICC
ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರನ್ನು ICC ಬೆನ್ನುತಟ್ಟಿದೆ. 2007 ರ ಟಿ-20 ವರ್ಲ್ಡ್ ಕಪ್ ಹಿರೋ ಆಗಿದ್ದ ಜೋಗಿಂದರ್, 2020ರಲ್ಲಿ ರಿಯಲ್ ವರ್ಲ್ಡ್ ಕಪ್ ಹಿರೋ ಆಗಿದ್ದಾರೆ ಎಂದು ಶ್ಲಾಘಿಸಿದ ICC.
ನವದೆಹಲಿ: 2007ರ ಟಿ-20 ವರ್ಲ್ಡ್ ಕಪ್ ಗೆಲುವಿನಲ್ಲಿ ಕೊನೆಯ ಓವರ್ ಎಸೆದ ಜೋಗಿಂದರ್ ಶರ್ಮಾ ಕೊರೊನಾ ವೈರಸ್ ಹಿನ್ನೆಲೆ ದೇಶ ಸೇವೆಗೆ ಇಳಿದಿದ್ದಾರೆ. ಸದ್ಯ ಜೋಗಿಂದರ್ ಶರ್ಮಾ ಹರ್ಯಾಣಾ ಪೋಲೀಸ್ ವಿಭಾಗದಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜೋಗಿಂದರ್ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದನ್ನು ಪರಿಗಣಿಸಿರುವ ICC ಭೇಷ್ ಎಂದು ಜೋಗಿಂದರ್ ಬೆನ್ನುತಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಶನಿವಾರ ಟ್ವೀಟ್ ಮಾಡಿರುವ ICC, "2007 ರ ಟಿ-20 ವರ್ಲ್ಡ್ ಕಪ್ ಹಿರೋ ಆಗಿದ್ದ ಜೋಗಿಂದರ್, 2020ರಲ್ಲಿ ರಿಯಲ್ ವರ್ಲ್ಡ್ ಕಪ್ ಹಿರೋ ಆಗಿದ್ದಾರೆ. ಕ್ರಿಕೆಟ್ ಬಳಿಕ ಭಾರತದ ಜೋಗಿಂದರ್ ಶರ್ಮಾ ಜಾಗತಿಕ ಆರೋಗ್ಯ ಸಂಕಷ್ಟದ ನಡುವೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ" ಎಂದು ಹೇಳಿದೆ.
ಸದ್ಯ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ವ್ಯಕ್ತಿ ಕೆಲಸವಿಲ್ಲದೇ ತಮ್ಮ ಮನೆಯಿಂದ ಆಚೆಗೆ ಬಂದರೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಈ ವರ್ಷ ನಡೆಯಬೇಕಿರುವ IPL ಟೂರ್ನಿಯನ್ನು ಸಹ ಮುಂದೂಡಲಾಗಿದೆ.
ಕೊರೊನಾ ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ
ಭಾರತದಲ್ಲಿ ಇದೀಗ ಕೊರೊನಾ ವೈರಸ್ ವೇಗವಾಗಿ ತನ್ನ ಕಾಲುಗಳನ್ನು ಚಾಚಲು ಆರಂಭಿಸಿದೆ. ಸದ್ಯ ಭಾರತದಲ್ಲಿ ಕೊರೊನಾ ವೈರಸ್ ನಿಂದ ಪೀಡಿತರ ಸಂಖ್ಯೆ 1000 ಗಡಿ ದಾಟಿದ್ದು, 20 ಜನರು ಈ ಮಾರಕ ಕಾಯಿಲೆಗೆ ಪ್ರಾಣ ತ್ಯಜಿಸಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಈ ಈ ಮಾರಕ ಸೋಂಕಿಗೆ ಅತಿ ಹೆಚ್ಚು ಜನ ಗುರಿಯಾಗಿದ್ದಾರೆ. ದೇಶದ ಒಟ್ಟು 27 ರಾಜ್ಯಗಳನ್ನು ಕೊರೊನಾ ವೈರಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.