ಸಿಡ್ನಿ ಟೆಸ್ಟ್: ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಇನ್ನೊಂದೇ ದಿನ ಬಾಕಿ..!
ಇಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ನಾಲ್ಕನೇ ದಿನದಾಟದಲ್ಲಿ ಭಾರತ ತಂಡವು ಆಸಿಸ್ ತಂಡದ ವಿರುದ್ದ ಮೇಲುಗೈ ಸಾಧಿಸಿದೆ.
ಸಿಡ್ನಿ: ಇಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ನಾಲ್ಕನೇ ದಿನದಾಟದಲ್ಲಿ ಭಾರತ ತಂಡವು ಆಸಿಸ್ ತಂಡದ ವಿರುದ್ದ ಮೇಲುಗೈ ಸಾಧಿಸಿದೆ.
ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಚೇತೆಶ್ವರ್ ಪೂಜಾರ್ (193) ಹಾಗೂ ರಿಷಬ್ ಪಂತ್ (159) ಅವರ ಭರ್ಜರಿ ಶತಕದ ಬ್ಯಾಟಿಂಗ್ ನಿಂದಾಗಿ 622 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸಿಸ್ ತಂಡವು 300 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಈಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ.
ಆ ಮೂಲಕ ಈಗ ಇನ್ನು 316 ರನ್ ಗಳ ಹಿನ್ನಡೆ ಅನುಭವಿಸುವುದರ ಮೂಲಕ ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದೆ. ಆಸಿಸ್ ತಂಡದ ಪರ ಮಾರ್ಕಸ್ ಹ್ಯಾರಿಸ್ ಅವರು (79) ಅರ್ಧಶತಕವನ್ನು ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನೂ ಕೂಡ ಅರ್ಧಶತಕವನ್ನು ಗಳಿಸಲಿಲ್ಲ.
ಭಾರತದ ಪರ ಕುಲದೀಪ ಯಾದವ್ ಐದು ಹಾಗೂ ಮೊಹಮ್ಮದ್ ಶಮಿ ಎರಡು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆಸಿಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಈಗಾಗಲೇ ಸರಣಿಯಲ್ಲಿ 2-1 ರ ಮುನ್ನಡೆಯನ್ನು ಕಾಯ್ದುಕೊಂಡಿರುವ ಭಾರತ ತಂಡವು ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಮಾಡಿಕೊಂಡರು ಕೂಡ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.