ಕೊಲ್ಕತಾ: ಕೌಟುಂಬಿಕ ದೌರ್ಜನ್ಯದಡಿಯಲ್ಲಿ ಆರೋಪ ಎದುರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಪತ್ನಿ ಹಸಿನ್ ಜಹಾನ್ ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ಶಮಿ ಮತ್ತು ಅವರ ಸಹೋದರ ಹಸಿದ್ ಅಹ್ಮದ್ ವಿರುದ್ಧ ಕೋಲ್ಕತಾ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದ್ದು, ಶರಣಾಗಲು ಮತ್ತು ಜಾಮೀನು ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ. 


ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ (ಕೌಟುಂಬಿಕ ಹಿಂಸೆ) ಮತ್ತು 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪೊಲೀಸರು ಬೌಲರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸುಮಾರು ಆರು ತಿಂಗಳ ಬಳಿಕ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.


ಈ ಬೆನ್ನಲ್ಲೇ ಮಂಗಳವಾರ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಶಮಿ ಪತ್ನಿ ಜಹಾನ್, "ತಾವೊಬ್ಬ ಶ್ರೇಷ್ಠ ಆಟಗಾರ ಎಂಬುದು ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುತ್ತಿದೆ ಎಂದು ಶಮಿ ಭಾವಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿದೆ, ಶಮಿ ತಮ್ಮನ್ನು ತಾವು ತುಂಬಾ ಶಕ್ತಿಶಾಲಿ, ದೊಡ್ಡ ಕ್ರಿಕೆಟಿಗ ಎಂದೇ ಭಾವಿಸುತ್ತಾರೆ. ಆದರೆ, ನಾನು ನ್ಯಾಯಾಂಗ ವ್ಯವಸ್ಥೆಗೆ ಕೃತಜ್ಞಳಾಗಿದ್ದೇನೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.


ಇದೇ ವೇಳೆ, ಉತ್ತರ ಪ್ರದೇಶ ಪೊಲೀಸರನ್ನು ದೂಷಿಸುವಾಗ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಜಹಾನ್ ಧನ್ಯವಾದ ಅರ್ಪಿಸಿದ್ದಾರೆ. "ನಾನು ಪಶ್ಚಿಮ ಬಂಗಾಳದಿಂದ ಬಂದಿರದಿದ್ದರೆ, ಮಮತಾ ಬ್ಯಾನರ್ಜಿ ನಮ್ಮ ಸಿಎಂ ಆಗಿರದಿದ್ದರೆ, ನಾನು ಇಲ್ಲಿ ಸುರಕ್ಷಿತವಾಗಿ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಉತ್ತರಪ್ರದೇಶದ ಅಮ್ರೋಹಾ ಪೊಲೀಸರು ನನಗೆ ಮತ್ತು ನನ್ನ ಮಗಳಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರು. ಆದರೆ, ದೇವರ ಅನುಗ್ರಹದಿಂದ ಅದು ಯಶಸ್ವಿಯಾಗಲಿಲ್ಲ" ಎಂದು ಜಹಾನ್ ಹೇಳಿದ್ದಾರೆ.


ಶಮಿ ಮೂಲತಃ ಅಮ್ರೋಹಾದವರಾಗಿದ್ದು, 2018 ರಲ್ಲಿ ಶಮಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಜಹಾನ್ ದೂರು ದಾಖಲಿಸಿದ್ದರು. ಅಲ್ಲದೆ, ಶಮಿ ವಿರುದ್ಧ ಹಲ್ಲೆಯಿಂದ ಹಿಡಿದು ಕೊಲೆ ಯತ್ನದವರೆಗೆ ಹಲವಾರು ಆರೋಪಗಳನ್ನು ಹೊರಿಸಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ಕ್ರಿಕೆಟಿಗ ಶಮಿ ನಿರಾಕರಿಸಿದ್ದರು.