ಲಾಹೋರ್:ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಆಟಗಾರರಿಗೆ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಕೇಂದ್ರ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಆಟಗಾರರು ಒಂದು ವೇಳೆ ಫಿಟ್ನೆಸ್ ಟೆಸ್ಟನಲ್ಲಿ ವಿಫಲವಾದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ. ಈ ಕುರಿತು ಮಂಡಳಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬರುವ ೬ ಮತ್ತು ೭ನೇ ಜನವರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಾಲ್ಕು ಹಂತಗಳಲ್ಲಿ ಫಿಟ್ನೆಸ್ಟ್ ಟೆಸ್ ನಡೆಸಲಾಗುತ್ತಿದ್ದು, ಇದರಲ್ಲಿ ಪಾಕ್ ತಂಡದ ಸ್ಟ್ರೆಂಥ್ ಹಾಗೂ ಕಂಡೀಷನಿಂಗ್ ತರಬೇತುದಾರರಾಗಿರುವ ಯಾಸಿರ್ ಮಲಿಕ್ ಆಟಗಾರರ ಫಿಟ್ನೆಸ್ ಪರೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಫಿಟ್ನೆಸ್  ಟೆಸ್ಟ್ ಒಟ್ಟು ಐದು ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದ್ದು, ಇವುಗಳಲ್ಲಿ ಫ್ಯಾಟ್, ಸ್ಟ್ರೆಂಥ್, ಎಂಡ್ಯೂರೆನ್ಸ್, ಸ್ಪೀಡ್ ಎಂಡ್ಯೂರೆನ್ಸ್ ಹಾಗೂ ಕ್ರಾಸ್ ಫಿಟ್ ಶಾಮೀಲಾಗಿದ್ದು, ಎಲ್ಲ ವಿಭಾಗಗಳಿಗೆ ಸಮನಾದ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ.


ಮಂಡಳಿ ಬಿಡುಗಡೆಗೊಳಿಸಿರುವ ಹೇಳಿಕೆ ಪ್ರಕಾರ " ಈ ಫಿಟ್ನೆಸ್ ಟೆಸ್ಟ್ ಗೆ ನಿಗದಿಪಡಿಸಲಾಗಿರುವ ಕನಿಷ್ಠ ಅರ್ಹತೆಯನ್ನು ಪಡೆಯಲು ವಿಫಲವಾಗುವ ಆಟಗಾರರ ಮೂಲ ವೇತನದ ಶೇ. ೧೫ರಷ್ಟು ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು  ಮತ್ತು  ಈ ಆಟಗಾರರು ಕನಿಷ್ಠ ಅರ್ಹತೆ ಪಡೆಯುವವರೆಗೆ ಇದು ಜಾರಿಯಲ್ಲಿರಲಿದೆ" ಎನ್ನಲಾಗಿದೆ.


ಅಷ್ಟೇ ಅಲ್ಲ " ನಿರಂತರವಾಗಿ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲರಾಗುವ ಆಟಗಾರರನ್ನು ಕೇಂದ್ರೀಯ ಒಪ್ಪಂದದ ಪಟ್ಟಿಯಿಂದ ಕೈಬಿಡಲಾಗುವುದು" ಎಂದೂ ಕೂಡ ಹೇಳಿಕೆಯಲ್ಲಿ ಹೇಳಲಾಗಿದೆ.