`ಜೀವಮಾನ ಸಾಧನೆ ಪ್ರಶಸ್ತಿ`ಗೆ ಭಾಜನರಾದ ಪ್ರಕಾಶ್ ಪಡುಕೋಣೆ
ಭಾರತದ ಮಾಜಿ ಹಾಗೂ ಕರ್ನಾಟಕದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರಧಾನ ಮಾಡಲು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ತೀರ್ಮಾನಿಸಿದೆ.
ನವ ದೆಹಲಿ: 1980 ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ನಲ್ಲಿ ಗೆದ್ದ ಮೊದಲ ಭಾರತೀಯ, ಕರ್ನಾಟಕದ ಹಿರಿಯ ಹಾಗೂ ಪ್ರಸಿದ್ದ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ ನೀಡಲು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಿಮಾಂತ ಬಿಸ್ವಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿಯು $ 10 ಲಕ್ಷ ಮೊತ್ತವನ್ನು ಹೊಂದಿದೆ ಎಂದು ತಿಳಿಸಿದ ಬಿಸ್ವಾ, ಈ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಕಾಶ್ 1962ರಲ್ಲಿ ಕರ್ನಾಟಕ ರಾಜ್ಯದ ಜೂನಿಯರ್ ಚಾಮ್ಪಿಂಶಿಪ್ ನಲ್ಲಿ ಮೊದಲ ಸುತ್ತಿನಲ್ಲಿ ಸೋತರು. ಆದಾಗ್ಯೂ, ಎರಡು ವರ್ಷಗಳ ನಂತರ ಅವರು ರಾಜ್ಯದ ಜೂನಿಯರ್ ಪ್ರಶಸ್ತಿ ಗೆದ್ದರು.
ಬ್ಯಾಡ್ಮಿಂಟನ್ ನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಪಡುಕೋಣೆ 1991 ರಲ್ಲಿ ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತರಾದರು. 1993 ರಿಂದ 1996 ರವರೆಗೂ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.