ವಿಶ್ವಕಪ್ನಲ್ಲಿ ಮೂರನೇ ಶತಕ ಬಾರಿಸಿ ದಾಖಲೆ ಬರೆದ ಶಿಖರ್ ಧವನ್
ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಬಳಿಕ ವಿಶ್ವಕಪ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನವದೆಹಲಿ: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ವಿಶ್ವಕಪ್ ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಬಳಿಕ ವಿಶ್ವಕಪ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತೀಯ ತಂಡದ ಆಟಗಾರ ಶಿಖರ್ ಧವನ್(33) ತನ್ನ 17ನೇ ಏಕದಿನ ಅಂತಾರಾಷ್ಟ್ರೀಯ(ODI)ಪಂದ್ಯವಾದ ಲಂಡನ್ನಿನ ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವ ಕಪ್ 2019 ಪಂದ್ಯಾವಳಿಯಲ್ಲಿ ಶತಕ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 1992-2011ರ ನಡುವೆ ನಡೆದ ವಿಶ್ವ ಕಪ್ ಪಂದ್ಯಗಳಲ್ಲಿ ಆರು ಶತಕಗಳನ್ನು ಗಳಿಸಿದ್ದರೆ, ಸೌರವ್ ಗಂಗೂಲಿ ಮೂರು ಶತಕ ಗಳಿಸಿದ್ದರು.
ವಿಶ್ವಕಪ್ 2019ರ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 8 ರನ್ ಗಳಿಗೆ ಔಟಾಗಿದ್ದ ಧವನ್, ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 95 ಬಾಲ್ ಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ ಪಂದ್ಯಗಳಲ್ಲಿ ತ್ರಿಶತಕ ಗಳಿಸಿದ ಕೀರ್ತಿ ಪಡೆದರು.
ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ದುಕೊಂಡ ಭಾರತ ತಂಡದ ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದ ಶಿಖರ್ ಧವನ್ ಗೆ ರೋಹಿತ್ ಶರ್ಮಾ(57) ಸಾಥ್ ನೀಡಿದರು. ಆರಂಭದಲ್ಲಿಯೇ ಈ ಜೋಡಿ 127 ರನ್ ಗಳಿಸುವ ಮೂಲಕ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು.
ಒಟ್ಟಾರೆಯಾಗಿ, ಧವನ್ 129 ಏಕದಿನ ಪಂದ್ಯಗಳಲ್ಲಿ ಒಟ್ಟು 5,363 ರನ್ ಗಳಿಸಿದ್ದಾರೆ.