ನವದೆಹಲಿ: ಅಡಿಲೇಡ್‍ನ ಓವಲ್ ಮೈದಾನದಲ್ಲಿ ಗುರುವಾರ ನಡೆದ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಟಿ-20 ವಿಶ್ವಕಪ್ ಅಭಿಯಾನದಿಂದ ಹೊರಬಿದ್ದಿದ್ದು, ಗಂಟುಮೂಟೆ ಕಟ್ಟಿ ತವರಿಗೆ ಮರಳಿದೆ. ಭಾರತದ ಹೀನಾಯ ಸೋಲಿನ ನಂತರ ಹಲವು ಕ್ರಿಕೆಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಶೀಘ್ರವೇ ಹಲವು ಕ್ರಿಕೆಟಿಗರು ನಿವೃತ್ತಿಯಾಗುವ ಸಾಧ್ಯತೆ ಇದ್ದು, ತಂಡಕ್ಕೆ ಹೊಸ ನಾಯಕನ ಎಂಟ್ರಿಯಾಗಲಿದೆ ಎಂದು ಹೇಳಿದ್ದಾರೆ. ನಿನ್ನೆ(ನ.10) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡದ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಆರಂಭಿಕರಾದ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ವೈಫಲ್ಯದಿಂದ ತಂಡವು ಆಂಗ್ಲರಿಗೆ ಸವಾಲಿನ ಮೊತ್ತ ನೀಡುವಲ್ಲಿ ವಿಫಲವಾಯಿತು.


ಭಾರತದ ಪರ ವಿರಾಟ್ ಕೊಹ್ಲಿ(50), ಹಾರ್ದಿಕ್ ಪಾಂಡ್ಯ(63) ಭರ್ಜರಿ ಅರ್ಧಶತಕ ಬಾರಿಸಿದರು. ಸುಲಭ ಗುರಿ ಬೆನ್ನತ್ತಿದ ಆಂಗ್ಲರು ಭಾರತೀಯ ಬೌಲರ್‍ಗಳನ್ನು ಮನಬದಂತೆ ದಂಡಿಸಿದರು. ಪರಿಣಾಮ ಇಂಗ್ಲೆಂಡ್ 16 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟರು. ಜೋಸ್ ಬಟ್ಲರ್(ಅಜೇಯ 80) ಮತ್ತು ಅಲೆಕ್ಸ್ ಹೇಲ್ಸ್(86) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ವಿಕೆಟ್‍ಗೆ ದಾಖಲೆಯ ಜೊತೆಯಾಟವಾಡಿದರು.  


ಇದನ್ನೂ ಓದಿ: ಟೀಂ ಇಂಡಿಯಾದ ಸುಟ್ಟಗಾಯಕ್ಕೆ ಉಪ್ಪು ಎರಚಿದ ಪಾಕ್ ಪ್ರಧಾನಿ!


ಪಂದ್ಯದ ನಂತರ ಮಾತನಾಡಿದ ಸುನಿಲ್ ಗವಾಸ್ಕರ್, ‘ಟೀಂ ಇಂಡಿಯಾದಲ್ಲಿ ಶೀಘ್ರವೇ ಮಹತ್ವದ ಬದಲಾವಣೆಗಳಾಗಲಿವೆ. ವಿಶ್ವಕಪ್ ನಂತರ ಭಾರತದ ಹಲವಾರು ಕ್ರಿಕೆಟಿಗರು ನಿವೃತ್ತಿ ಹೊಂದಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳಬಹುದು’ ಅಂತಾ ಹೇಳಿದ್ದಾರೆ.


ಹಲವರು ನಿವೃತ್ತಿ ಸಾಧ್ಯತೆ


‘ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾದ ಹಲವು ಹಿರಿಯ ಕ್ರಿಕೆಟಿಗರು ನಿವೃತ್ತಿಯಾಗಬಹುದು. 30 ವರ್ಷ ಮೇಲ್ಪಟ್ಟ ಹಲವು ಆಟಗಾರರು ಇದೀಗ  ನಿವೃತ್ತಿಯ ಬಗ್ಗೆ ಯೋಚಿಸುತ್ತಿರಬಹುದು. ಶೀಘ್ರವೇ ತಂಡದಲ್ಲಿ ಹಲವು ಬದಲಾವಣೆಯಾಗಲಿದೆ’ ಅಂತಾ ಗವಾಸ್ಕರ್ ಹೇಳಿದ್ದಾರೆ.   


‘ಆರ್.ಅಶ್ವಿನ್, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಕೆ.ಎಲ್.ರಾಹುಲ್ ಕಳಪೆ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಟಿ-20 ತಂಡದಲ್ಲಿ ಹೊಸಬರಿಗೆ ಅವಕಾಶ ನೀಡಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.


ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ನಾಯಕ


ಕೆಲವು ಆಟಗಾರರ ನಿವೃತ್ತಿ ಬಳಿಕ ಹೊಸಬರು ತಂಡದಲ್ಲಿ ಸ್ಥಾನ ಪಡೆಯಬಹುದು. ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ನಾಯಕ ಆಗಲಿದ್ದಾರೆ. ಐಪಿಎಲ್‍ನಲ್ಲಿ ಗುಜರಾತ್‌ ಟೈಟಾನ್ಸ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನಾಯಕನಾದ ಮೊದಲಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪಾಂಡ್ಯ ಯಶಸ್ವಿಯಾಗಿದ್ದಾರೆ. ಹೀಗಾಗಿ ಭಾರತ ತಂಡವನ್ನು ಆತನೇ ಮುನ್ನೆಡೆಸಲಿದ್ದಾನೆಂದು’ ಗವಾಸ್ಕರ್ ಹೇಳಿದ್ದಾರೆ.  


ಇದನ್ನೂ ಓದಿ: ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ ನಿವೃತ್ತಿ..! ರಾಹುಲ್ ದ್ರಾವಿಡ್ ಹೇಳಿದ್ದೇನು?


ಟೀಂ ಇಂಡಿಯಾದ ಕಳಪೆ ಪ್ರದರ್ಶನ


ಇಂಗ್ಲೆಂಡ್ ವಿರುದ್ಧದ ಸಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯಂತ ಕಳೆಪೆ ಪ್ರದರ್ಶನ ತೋರಿತು. ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದರೂ ಭಾರತೀಯ ಬೌಲರ್‍ಗಳಿಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ‍್ಯವಾಗಲಿಲ್ಲ. ಅನುಭವಿ ಆಟಗಾರರಿದ್ದರೂ ತಂಡ ಬೌಲಿಂಗ್‍ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಸೇರಿದಂತೆ ಎಲ್ಲಾ ಬೌಲರ್‍ಗಳು ಸಹ ಸಂಪೂರ್ಣ ವಿಫಲವಾದರು. ಭಾರತದ ವಿರುದ್ಧ ಸುಲಭವಾಗಿ ಗೆದ್ದ ಇಂಗ್ಲೆಂಡ್ ಫೈನಲ್ ಪ್ರವೇಶಿಸಿತು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.