ನವದೆಹಲಿ: ಕನ್ನಡಿಗ ಎ.ಬಿ.ಬೆಳ್ಳಿಯಪ್ಪ ಸೇರಿ ಭಾರತದ ಅಗ್ರ ಮೂರು ಓಟಗಾರರು ಅಪೋಲೋ ಟೈಯರ್ಸ್‌ ನವದೆಹಲಿ ಮ್ಯಾರಥಾನ್‌ನಲ್ಲಿ ಪೋಡಿಯಂ ಫಿನಿಶ್ ಮಾಡಿದ್ದಲ್ಲದೇ 2023ರ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಝೂ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಅರ್ಹತೆ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ, ಮಾನ್ ಸಿಂಗ್ ಹಾಗೂ ಕಾರ್ತಿಕ್ ಕುಮಾರ್ ಮೂವರೂ ಏಷ್ಯಾಡ್ ಅರ್ಹತಾ ಗುರಿಯಾದ 2 ಗಂಟೆ 15 ನಿಮಿಷಗಳೊಳಗೆ ಓಟ ಪೂರೈಸಿದರು.


ಇದನ್ನೂ ಓದಿ: T20 World Cup: ವನಿತಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ: 6 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಆಸೀಸ್ ಮಹಿಳಾ ಪಡೆ


ಕಳೆದ ತಿಂಗಳಷ್ಟೇ ತಮ್ಮ ವೈಯಕ್ತಿಕ ಶ್ರೇಷ್ಠ 2 ಗಂಟೆ 16.58 ನಿಮಿಷಗಳ ಸಾಧನೆ ಮಾಡಿದ್ದ ಮಾನ್ ಸಿಂಗ್, ಭಾನುವಾರ 2 ಗಂಟೆ 14.13 ನಿಮಿಷಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ಗೆಲ್ಲುವುದರ ಜೊತೆ 1.5 ಲಕ್ಷ ರುಪಾಯಿ ಬಹುಮಾನ ಮೊತ್ತವನ್ನೂ ಬಾಚಿಕೊಂಡರು.


ಕರ್ನಾಟಕದ ಬೆಳ್ಳಿಯಪ್ಪ 2 ಗಂಟೆ 14.15 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸಿ ಕೇವಲ 2 ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನದಿಂದ ವಂಚಿತರಾದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ತಾರಾ ಓಟಗಾರನಿಗೆ ಬೆಳ್ಳಿ ಪದಕ ಒಲಿಯಿತು.


ಕಾರ್ತಿಕ್ ಕುಮಾರ್ 2 ಗಂಟೆ 14.19 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಮೊದಲ ಸ್ಥಾನಕ್ಕೂ ಮೂರನೇ ಸ್ಥಾನಕ್ಕೂ ಕೇವಲ 6 ಸೆಕೆಂಡ್‌ಗಳ ಅಂತರವಿದ್ದಿದ್ದು ಸ್ಪರ್ಧೆ ಎಷ್ಟು ತೀವ್ರವಾಗಿತ್ತು ಎನ್ನುವುದಕ್ಕೆ ಇದೇ ಉದಾಹರಣೆ.


ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಗಾವಟೆ ಚಿನ್ನದ ಪದಕ ಗೆದ್ದರು. ಆದರೆ ಹಾಂಗ್ಝೂ ಏಷ್ಯನ್ ಗೇಮ್ಸ್‌ಗೆ ಟಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. 2 ಗಂಟೆ 53.04 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದರು. ಏಷ್ಯಾಡ್‌ಗೆ ಅರ್ಹತೆ ಪಡೆಯಲು 2 ಗಂಟೆ 47 ನಿಮಿಷಗಳ ಗುರಿ ನಿಗದಿ ಮಾಡಲಾಗಿತ್ತು. ಇನ್ನು ಅಶ್ವಿನಿ ಜಾಧವ್ (2 ಗಂಟೆ 53.06 ನಿಮಿಷ) ಹಾಗೂ ಜಿಗ್ಮೆತ್ ಡೊಲ್ಮಾ(2 ಗಂಟೆ 56.41 ನಿಮಿಷ) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.


“ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆ ನಮ್ಮ ಅಥ್ಲೀಟ್‌ಗಳಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಬೇಕಿದ್ದ ವೇದಿಕೆ ಹಾಗೂ ಉತ್ತಮ ವಾತಾವರಣವನ್ನು ನೀಡಿದೆ. ನಮ್ಮ ಮೂವರು ಎಲೈಟ್ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿರುವುದು ಬಹಳ ಖುಷಿಯ ವಿಚಾರ” ಎಂದು ರೇಸ್ ನಿರ್ದೇಶಕರಾಗಿರುವ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯ ನಾಗರಾಜ್ ಅಡಿಗ ಹೇಳಿದರು.


“ಓಟಗಾರರ ಉತ್ಸಾಹ ನೋಡಿ ನಾನು ಬೆರಗಾಗಿದ್ದೇನೆ. ಭಾರತದ ಅಥ್ಲೀಟ್‌ಗಳು ಏಷ್ಯಾಡ್ ಅರ್ಹತಾ ಗುರಿ ತಲುಪಲಿದ್ದಾರೆ ಎನ್ನುವ ವಿಷಯ ತಿಳಿದು ನಾನು ಉತ್ಸುಕಗೊಂಡೆ. ಅವರನ್ನು ಹುರಿದುಂಬಿಸುವುದನ್ನು ಬಿಟ್ಟು ಬೇರೇನೂ ಮಾಡಲು ನನಗೆ ಸಾಧ್ಯವಾಗಲಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ” ಎಂದು ಅಡಿಗ ಅವರು ಹೇಳಿದರು.


“ದೇಶದಲ್ಲಿರುವ ಓಟಗಾರರ ಸಮೂಹದಿಂದ ಅಪೋಲೋ ಟಯರ್ಸ್‌ ನವದೆಹಲಿ ಮ್ಯಾರಥಾನ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಬಹಳ ಸಂತೋಷವಾಗುತ್ತಿದೆ. ನಮ್ಮ ಮೂವರು ಪುರುಷ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್ ಅರ್ಹತಾ ಗುರಿ ತಲುಪಿರುವುದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ” ಎಂದು ಅಪೋಲೋ ಟಯರ್ಸ್‌ ಸಂಸ್ಥೆಯ ಏಷ್ಯಾ ಪೆಸಿಫಿಕ್, ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾ ಅಧ್ಯಕ್ಷ ಸತೀಶ್ ಶರ್ಮಾ ಹೇಳಿದರು.


16000ಕ್ಕೂ ಅಧಿಕ ಓಟಗಾರರು ನಾಲ್ಕು ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಇದರೊಂದಿಗೆ ನವದೆಹಲಿ ಮ್ಯಾರಥಾನ್ ದೇಶದಲ್ಲಿ ಅತಿಹೆಚ್ಚು ಓಟಗಾರರನ್ನು ಆಕರ್ಷಿಸಿದ ಮ್ಯಾರಥಾನ್‌ಗಳಲ್ಲಿ ಒಂದೆನಿಸಿತು. ಎಲೈಟ್ ಓಟಗಾರರು ಬೆಳಗ್ಗೆ 5 ಗಂಟೆಗೆ ಸ್ಪರ್ಧೆ ಆರಂಭಿಸಿದರು. ಡೇವಿಡ್ ರುಧಿಶಾ ಹಾಗೂ ಇತರ ಗಣ್ಯರು ಓಟಕ್ಕೆ ಚಾಲನೆ ನೀಡಿದರು.


ಫಲಿತಾಂಶಗಳು:


  • ಮ್ಯಾರಥಾನ್(ಎಲೈಟ್)


ಪುರುಷರು: 1. ಮಾನ್ ಸಿಂಗ್(2:14.13), 2.ಎ.ಬಿ ಬೆಳ್ಳಿಯಪ್ಪ (2:14:15), 3.ಕಾರ್ತಿಕ್ ಕುಮಾರ್(2:14.19)


ಮಹಿಳೆಯರು: 1.ಜ್ಯೋತಿ ಗಾವಟೆ(2.53:04), 2. ಅಶ್ವಿನಿ ಜಾಧವ್(2:53.06), 3. ಜಿಗ್ಮೆತ್ ಡೊಲ್ಮಾ(2.56:41)


  • ಹಾಫ್ ಮ್ಯಾರಥಾನ್


ಪುರುಷರು: ೧.ಕಿರಣ್ ಮಾತ್ರೆ(೧:೦೫.೫೭), ನಾನೋ ಗುಟಾ(೧:೦೬.೦೩), ೩.ತೀರ್ಥ ಪನ್(೧:೦೬.೨೧)


ಮಹಿಳೆಯರು: ೧.ನೀತು ಕುಮಾರಿ(೧:೧೭.೧೪), ೨.ಬಿಸ್ಲೆ ಬಿಕಾಯೆ(೧:೧೮.೨೬), ೩.ಉಜಲ(೧:೨೧.೩೧)


ಇದನ್ನೂ ಓದಿ:  W,1,W,W,W,W,W...6 ಬಾಲ್’ಗೆ 5 ವಿಕೆಟ್ ಕಳೆದುಕೊಂಡ ಆಸೀಸ್: ಎಂದಾದರೂ ಕಂಡಿದ್ದೀರಾ ಇಂಥಾ ಪಂದ್ಯ!


  • ೧೦ಕೆ


ಪುರುಷರು: ೧.ರಿಶಿಪಾಲ್ ಸಿಂಗ್(೩೨.೫೬), ೨.ಅಬ್ದಿಸಾ ವೊಲ್ಡೆ(೩೨.೫೭), ೩.ಸನ್ನಿ ಕುಮಾರ್(೩೪.೧೪)


ಮಹಿಳೆಯರು: ೧.ಏಕ್ತಾ ರಾವತ್(೩೮.೧೨), ೨.ರೊಜಿ(೩೮.೧೩), ೩.ಪ್ರೀತಿ(೩೯.೨೨)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.