VIDEO: ಕ್ಯಾಚ್ ತರಬೇತಿ ವೇಳೆ ಹರಿದ ಶಾನ್ ಪೋಲಕ್ ಪ್ಯಾಂಟ್... ಮುಂದೇನಾಯ್ತು?
ನವದೆಹಲಿ: ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಒಂದಲ್ಲಾ ಒಂದು ರಿತುಯ ವಿಚಿತ್ರ ಘಟನೆಗಳು ನಡೆದಿರುವ ಬಗ್ಗೆ ಕೇಳಿದ್ದೀರಿ, ಹಾಗೆಯೇ ನೋಡಿದ್ದೀರಿ ಸಹ. ಈಗ ಅಂತಹದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ನಡೆದಿದೆ.
ಸೆಂಚುರಿಯನ್ ನಲ್ಲಿ ನಡೆಯುತ್ತಿದ್ದ ಪಂದ್ಯದ ವಿರಾಮ ವೇಳೆ ಮಾಜಿ ಆಟಗಾರರು ಕ್ರಿಕೆಟ್ ಎಕ್ಸ್ಪರ್ಟ್ ಆಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಶಾನ್ ಪೋಲಕ್ ಅವರು ಯಾವ ರೀತಿ ಕ್ಯಾಚ್ ಹಿಡಿಯಬೇಕು ಎಂಬ ಬಗ್ಗೆ ಮಾತನಾಡುತ್ತಿದ್ದರು. ಹಾಗೆಯೇ ಅದರ ಕ್ಯಾಚ್ ಹಿಡಿಯುವುದು ಹೇಗೆ ಎಂದು ತೋರಿಸಲು ಬಗ್ಗಿದ ಕೂಡಲೇ ಪ್ಯಾಂಟ್ ಹರಿದುಹೋಯಿತು. ಈ ಸಂದರ್ಭದಲ್ಲಿ ಪೋಲಾಕ್ ಅವರ ಜೊತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಗ್ರಿಮ್ಮ್ ಸ್ಮಿತ್ ಕೂಡ ಇದ್ದರು.
ಪ್ಯಾಂಟ್ ಹರಿದ ಕೂಡಲೇ ತಬ್ಬಿಬ್ಬಾದ ಪೋಲಕ್ ತಮ್ಮ ಎರಡೂ ಕೈಗಳಿಂದ ತಮ್ಮ ಹಿಂಭಾಗ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಬಳಿಕ ಬಟ್ಟೆ ಬದಲಿಸಲು ತೆರಳುವಾಗ ಪ್ಯಾಂಟ್ ಹರಿದಿರುವುದು ಕ್ಯಾಮರಾಗಳ ಕಣ್ಣಿಗೆ ಬೀಳಬಾರದೆಂದು ಕೈ ಮುಚ್ಚಿಕೊಂಡೇ ನಡೆದರು. ಆದರೆ ಪೋಲಕ್ ಕ್ಯಾಚ್ ವಿವರಣೆ ನೀಡುತ್ತಿದ್ದುದು ಟಿವಿಗಳಲ್ಲಿ ನೇರ ಪ್ರಸಾರವಾಗುತ್ತಿತ್ತು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಘಟನೆ ಬಳಿಕ ಟ್ವೀಟ್ ಮಾಡಿರುವ ಪೋಲಾಕ್, ತಮ್ಮ ಹರಿದ ಪ್ಯಾಂಟ್ ಫೋಟೋ ಹಾಕಿ, ಮುಂದೆಂದೂ ಸ್ಯೂಟ್ ಪ್ಯಾಂಟ್ ಧರಿಸಿ ಕ್ಯಾಚ್ ಹಿಡಿಯುವ ಸಾಹಸ ಮಾಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.