ಭಾರತ ತನ್ನ ದೇಶೀಯ ನಿರ್ಮಾಣದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ನಿರ್ಮಿಸಲು ಪ್ರಯತ್ನ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕಾದ ವಾಯುಪಡೆಯ ಮಲ್ಟಿ ರೋಲ್ ಎಫ್-35ಎ ಲೈಟ್ನಿಂಗ್ 2 ಹಾಗೂ ಎಫ್-35ಎ ವಿಮಾನಗಳು ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು ಭಾರತದ ರಕ್ಷಣಾ ವೀಕ್ಷಕರಲ್ಲಿ ಸಂಚಲನ ಉಂಟು ಮಾಡಿದೆ. ನಿಶ್ಚಲ ವೀಕ್ಷಣೆ ಹಾಗೂ ಹಾರಾಟ ಸಾಮರ್ಥ್ಯ ಪ್ರದರ್ಶನ ಎರಡು ಹಂತಗಳಲ್ಲೂ ಈ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ರ ತನಕ ನಡೆದ ಪ್ರದರ್ಶನದಲ್ಲಿ ಎಲ್ಲರ ಕಣ್ಮನ ಸೆಳೆದಿದೆ.


COMMERCIAL BREAK
SCROLL TO CONTINUE READING

ಎಫ್-35 ಆಗಮನದ ಮೂಲಕ ಅಮೆರಿಕಾ ಭಾರತದ ಎಂಆರ್‌ಸಿಎ ಗುತ್ತಿಗೆಯ ಮೇಲೆ ಕಣ್ಣಿಟ್ಟಿದೆಯೇ?


ಅಮೆರಿಕಾದ ಅಲಾಸ್ಕಾದ ಈಲ್‌ಸನ್ ವಾಯುನೆಲೆಯಲ್ಲಿ ಇರುವ ಎಫ್-35 ಲೈಟ್ನಿಂಗ್ 2 ಯುದ್ಧ ವಿಮಾನ ನಿಲುಗಡೆಯಲ್ಲಿರುವ ಸಂದರ್ಭದಲ್ಲಿ ಅದನ್ನು ಸಾರ್ವಜನಿಕ ವೀಕ್ಷಣೆಗೆ ಅನುಮತಿ ಕಲ್ಪಿಸಲಾಗಿದೆ. ಪ್ರಸ್ತುತ ಭಾರತೀಯ ರಕ್ಷಣಾ ವಿಜ್ಞಾನಿಗಳು ದೇಶೀಯವಾಗಿ ನಿರ್ಮಾಣಗೊಳಿಸುವ, ಶತ್ರುಗಳ ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸ್ಟೆಲ್ತ್ ಸಾಮರ್ಥ್ಯ ಹೊಂದಿರುವ, ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಎಂಬ ಐದನೇ ತಲೆಮಾರಿನ ಯುದ್ಧ ವಿಮಾನದ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಮಾನವು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಓ) ಅಂಗಸಂಸ್ಥೆಯಾದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಈ ವಿಮಾನದ ವಿನ್ಯಾಸದ ಪರೀಕ್ಷೆ ಪೂರ್ಣಗೊಳಿಸಿದೆ.


ಇದನ್ನೂ ಓದಿ: ಯಮಾಹಾ 2023 ನ್ಯೂ ಬೈಕ್‌ ಸಿರೀಸ್‌ ರಿಲೀಸ್‌.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!


ಅಮೆರಿಕಾದ ಎಫ್-35 ವಿಮಾನಗಳು ಯಲಹಂಕ ವಾಯುನೆಲೆಗೆ ಬಂದಿರುವುದು ಕೇವಲ ಔಪಚಾರಿಕತೆ ಮಾತ್ರವಲ್ಲ ಎಂದು ಹಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ಇದು ಅಮೆರಿಕಾ ತನ್ನ ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪ್ರದರ್ಶಿಸಿ, ಆ ಮೂಲಕ ಭಾರತೀಯ ವಾಯುಪಡೆ ಉದ್ದೇಶಿಸಿರುವ 114 ಬಹುಪಾತ್ರಗಳ ಯುದ್ಧ ವಿಮಾನಗಳ (ಎಂಆರ್‌ಸಿಎ) ಗುತ್ತಿಗೆ ಪಡೆಯಲು ಉದ್ದೇಶಿಸಿದೆ ಎಂದು ಭಾವಿಸುತ್ತಾರೆ. ಅಮೆರಿಕಾದ ಪ್ರಮುಖ ಏರೋಸ್ಪೇಸ್ ಮಾರಾಟಗಾರ ಸಂಸ್ಥೆಯಾಗಿರುವ ಲಾಕ್‌ಹೀಡ್‌ ಮಾರ್ಟಿನ್ ಈಗ ಭಾರತೀಯ ವಾಯುಪಡೆಯ ವಿಶ್ಲೇಷಕರು ಹಳೆಯದಾಗಿದೆ ಎಂದು ಭಾವಿಸುತ್ತಿರುವ ಎಫ್-21 ವಿಮಾನವನ್ನು ಮಾರಾಟ ನಡೆಸುತ್ತಿದೆ. ಎಫ್-21 ವಿಮಾನ ಪಾಕಿಸ್ತಾನಿ ವಾಯುಸೇನೆ ಹಲವಯ ದಶಕಗಳ ಕಾಲ ಉಪಯೋಗಿಸಿ, ನೈಪುಣ್ಯ ಸಾಧಿಸಿರುವ ಎಫ್-16 ಬ್ಲಾಕ್ 50/52 ಯುದ್ಧ ವಿಮಾನದಿಂದ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಹೊಂದಿದ ಆವೃತ್ತಿ ಎನ್ನಲಾಗಿದೆ.


ಎಫ್-35 ಒಳಭಾಗ: ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನದ ತಂತ್ರಜ್ಞಾನದ ಒಳನೋಟ


ಎಫ್-35 ಯುದ್ಧ ವಿಮಾನ ಅಮೆರಿಕಾದ ಯುದ್ಧ ವಿಮಾನ ತಂತ್ರಜ್ಞಾನದಲ್ಲೇ ಅತ್ಯಾಧುನಿಕ ಯುದ್ಧ ವಿಮಾನ ಎಂದು ಹೇಳಲಾಗಿದೆ. ಎಫ್-35 ಅಮೆರಿಕಾದ ಬಳಿ ಇರುವುದರಲ್ಲಿ ಅತ್ಯಂತ ಆಧುನಿಕವಾದ, ಮಾರಕವಾದ ಆಯುಧ ವ್ಯವಸ್ಥೆಗಳನ್ನು ಹೊಂದಿದೆ. ಎಫ್-35 ವಿಮಾನವನ್ನು ಶತ್ರುವಿನ ಅತ್ಯಂತ ಬಲಿಷ್ಠವಾದ ವಾಯು ರಕ್ಷಣಾ ವ್ಯವಸ್ಥೆಯನ್ನೂ ಭೇದಿಸಿ, ಶತ್ರುವನ್ನು ಮಣಿಸಲು ಅಭಿವೃದ್ಧಿಪಡಿಸಲಾಗಿದೆ. ಅಮೆರಿಕಾದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಏರೋ ಇಂಡಿಯಾ ಪ್ರದರ್ಶನಕ್ಕೆ ಎಫ್-35 ಆಗಮಿಸಿರುವುದು ಭಾರತ ಮತ್ತು ಅಮೆರಿಕಾ ನಡುವಿನ ನಿಕಟ ಸಹಭಾಗಿತ್ವವನ್ನು ಸಂಕೇತಿಸುತ್ತದೆ ಎಂದಿದ್ದಾರೆ.


ಎಫ್-35 ವಿಮಾನ 43,000 ಪೌಂಡ್‌ಗಳಷ್ಟು ಥ್ರಸ್ಟ್ (ಒತ್ತಡ) ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಇಂಜಿನ್, ಮೂರು ಹಂತಗಳ ಫ್ಯಾನ್, ಆರು ಹಂತಗಳ ಕಂಪ್ರೆಸರ್, ಒಂದು ಆ್ಯನುಲರ್ ಕಂಬಸ್ಟರ್, ಒಂದು ಹಂತದ ಅತ್ಯಧಿಕ ಒತ್ತಡದ ಟರ್ಬೈನ್, ಹಾಗೂ ಎರಡು ಹಂತಗಳ ಕಡಿಮೆ ಒತ್ತಡದ ಟರ್ಬೈನ್‌ಗಳನ್ನು ಹೊಂದಿದೆ. ಎಫ್-35 ವಿಮಾನ ಯೋಜನೆಯನ್ನು ಪೆಂಟಗನ್‌ನ ಎಫ್-35 ಜಾಯಿಂಟ್ ಪ್ರೋಗ್ರಾಮ್ ಆಫೀಸ್ ನಿರ್ವಹಿಸುತ್ತಿದ್ದು, ಅಮೆರಿಕಾದ ವಾಯುಪಡೆ, ಮರೀನ್ ಕಾರ್ಪ್ಸ್, ಹಾಗೂ ನೌಕಾಪಡೆಗಳು ಇದನ್ನು ಪಡೆದುಕೊಂಡು ಬಳಸುತ್ತಿವೆ. ಅದರೊಡನೆ ಈ ಯೋಜನೆಯಲ್ಲಿ ಎಂಟು ಅಂತಾರಾಷ್ಟ್ರೀಯ ಕಾರ್ಯಕ್ರಮ ಸಹಯೋಗಿಗಳಿದ್ದು, ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್, ಇಟಲಿ, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ನಾರ್ವೇ, ಡೆನ್ಮಾರ್ಕ್ ಹಾಗೂ ಕೆನಡಾಗಳಾಗಿವೆ. ಅದರೊಡನೆ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಪೋಲೆಂಡ್, ಬೆಲ್ಜಿಯಂ, ಹಾಗೂ ಸಿಂಗಾಪುರಗಳನ್ನೊಳಗೊಂಡ ಆರು ವಿದೇಶಿ ಮಿಲಿಟರಿ ವ್ಯಾಪಾರ ಗ್ರಾಹಕರಿದ್ದು, ಈ ರಾಷ್ಟ್ರಗಳು ಎಫ್-35 ಖರೀದಿಸಿ, ಬಳಸುತ್ತಿವೆ. ಎಫ್-35 ವಿಮಾನ ಯೋಜನೆ 45 ರಾಜ್ಯಗಳು ಮತ್ತು ಪೋರ್ಟೋ ರಿಕೊಗಳ 1,800 ದೇಶೀಯ ಪೂರೈಕೆದಾರರನ್ನು ಒಳಗೊಂಡಿದ್ದು, ಉತ್ತಮ ಗುಣಮಟ್ಟದ ಉಪಕರಣಗಳು, ರೇಡಾರ್ ಹಾಗೂ ವಿಮಾನದ ಫ್ಯುಯೆಲ್‌ಸೇಜ್ ಗಳನ್ನು ಪೂರೈಸುತ್ತಿವೆ.


ತೊಂದರೆ ಹೊಂದಿರುವ ಯೋಜನೆ: ಎಫ್-35 ವಿವಾದಗಳು ಮತ್ತು ತಾಂತ್ರಿಕ ಸಮಸ್ಯೆಗಳು!


ಇತ್ತೀಚಿನ ಬೆಳವಣಿಗೆ ಒಂದರಲ್ಲಿ, ಅಮೆರಿಕಾ ಎಫ್-35 ಯುದ್ಧ ವಿಮಾನದ ಉಪಕರಣಗಳಲ್ಲಿ ಚೀನಾದ ಬಿಡಿಭಾಗಗಳು ಕಂಡುಬಂದ ಕಾರಣ ವಿಮಾನದ ಪೂರೈಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಯುದ್ಧ ವಿಮಾನದಲ್ಲಿ ಬಳಸಲಾಗುವ ಟರ್ಬೋಮೆಷಿನ್ ಅನ್ನು ಹನಿವೆಲ್ ಇಂಟರ್‌ನ್ಯಾಷನಲ್ ಐಎನ್‌ಸಿ ಉತ್ಪಾದಿಸುತ್ತಿದ್ದು, ಒಟ್ಟಾರೆ ನಿರ್ಮಾಣವನ್ನು ಲಾಕ್‌ಹೀಡ್‌ ಮಾರ್ಟಿನ್ ನಡೆಸುತ್ತಿದೆ. ಹನಿವೆಲ್ ಸಂಸ್ಥೆ ಲಾಕ್‌ಹೀಡ್‌ ಜೊತೆ ಸಂವಹನ ನಡೆಸಿ, ಎಫ್-35 ಯುದ್ಧ ವಿಮಾನದ ಅಲಾಯ್‌ನಲ್ಲಿ ಬಳಸಲಾಗುವ ಅಯಸ್ಕಾಂತವನ್ನು ಚೀನಾದಿಂದ ಪಡೆಯಲಾಗಿದೆ ಎಂದು ತಿಳಿಸಿತು. ಅದನ್ನು ಐದನೇ ವರ್ಗದ ಉಪಗುತ್ತಿಗೆದಾರರು ಪೂರೈಸಿದ್ದರು. ಅಮೆರಿಕಾದ ರಕ್ಷಣಾ ಖರೀದಿಯ ನಿಯಮವನ್ನು ಇದು ಉಲ್ಲಂಘಿಸಿದ ಕಾರಣ, ಎಫ್-35 ಜಂಟಿ ಯೋಜನಾ ಕಚೇರಿ ನೂತನ ವಿಮಾನಗಳನ್ನು ಪಡೆಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ವಿಶೇಷ ಲೋಹಗಳಿಗೆ ಕುರಿತಾದ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ.


ಈ ಸಮಸ್ಯೆಯ ಹೊರತಾಗಿಯೂ, ಲಾಕ್‌ಹೀಡ್‌ ಮಾರ್ಟಿನ್ ಸಂಸ್ಥೆ ಎಫ್-35 ಯುದ್ಧ ವಿಮಾನದ ಸುರಕ್ಷತೆಯ ಕುರಿತು ಭರವಸೆ ನೀಡಿದ್ದು, ವಿಮಾನಗಳನ್ನು ಪೂರೈಸುವ ಕುರಿತು ಅಮೆರಿಕಾದ ರಕ್ಷಣಾ ಇಲಾಖೆಯೊಡನೆ ಕಾರ್ಯಾಚರಿಸುತ್ತಿದೆ. ಆದರೆ ಡಿಸೆಂಬರ್ 15, 2022ರಂದು ಒಂದು ಎಫ್-35ಬಿ ಯುದ್ಧ ವಿಮಾನ ಹಾರಾಟದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸುವಂತಾಯಿತು. ಅದರ ಪರಿಣಾಮವಾಗಿ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರ ಜಿಗಿಯಬೇಕಾಯಿತು. ಅಮೆರಿಕಾದ ನೌಕಾಪಡೆ ಈ ಅವಘಡದ ವಿಚಾರಣೆ ನಡೆಸಿದಾಗ, ಪ್ರಾಟ್ & ವಿಟ್ನಿ ನಿರ್ಮಾಣದ ಎಫ್135 ಇಂಜಿನ್ ವಿಫಲವಾಗಿದ್ದು ತಿಳಿದುಬಂತು.


ಎಫ್-35ಎ ಲೈಟ್ನಿಂಗ್ 2 ಹಾಗೂ ಎಫ್-35ಎ ವಿಮಾನಗಳು ಬೆಂಗಳೂರು ಏರೋ ಇಂಡಿಯಾ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು ಭಾರತದ ಮಲ್ಟಿ ರೋಲ್ ಯುದ್ಧ ವಿಮಾನದ ಖರೀದಿಯ ಗುತ್ತಿಗೆಯೆಡೆ ಎಲ್ಲರ ಗಮನ ಹರಿಯುವಂತೆ ಮಾಡಿದೆ. ಎಫ್-35 ವಿಮಾನದ ಸುಧಾರಿತ ಸಾಮರ್ಥ್ಯಗಳು ಹಾಗೂ ಅದರ ತಾಂತ್ರಿಕ ಮೇಲುಗೈಯ ಕಾರಣದಿಂದ ಈ ಗುತ್ತಿಗೆಯನ್ನು ಗೆಲ್ಲಲು ಅಮೆರಿಕಾ ಪ್ರಯತ್ನ ನಡೆಸಲಿದೆ ಎಂದು ಹಲವರು ಭಾವಿಸುವಂತೆ ಮಾಡಿದೆ.


ಇದನ್ನೂ ಓದಿ: WhatsAppನಿಂದ ಬಂಬಾಟ್ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ಒಂದೇ ಕ್ಲಿಕ್ ನಲ್ಲಿ 100 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಕಳುಹಿಸಿ


ಎಫ್-35 ವಿಮಾನದ ಇತ್ತೀಚಿನ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ, ಎಫ್-35 ವಿಮಾನ ಅಮೆರಿಕಾದ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ಶತ್ರುಗಳ ಎಂತಹ ವಾಯುರಕ್ಷಣೆಯನ್ನೂ ಭೇದಿಸಬಲ್ಲ ಆಯುಧಗಳನ್ನು ಹೊಂದಿರುವ ವಿಮಾನವಾಗಿದೆ. ಭಾರತ ಈಗ ತನ್ನ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾದ ಅಡ್ವಾನ್ಸ್ಡ್ ಮೀಡಿಯಂ ಏರ್‌ಕ್ರಾಫ್ಟ್ ಅಭಿವೃದ್ಧಿ ಪಡಿಸುತ್ತಿರುವ ಸಂದರ್ಭದಲ್ಲಿ, ಭಾರತ ಮತ್ತು ಅಮೆರಿಕಾಗಳ ನಡುವಿನ ನಿಕಟ ಬಾಂಧವ್ಯವನ್ನು ಅವಲೋಕಿಸಿದಾಗ ಏರೋ ಇಂಡಿಯಾ ಪ್ರದರ್ಶನದಲ್ಲಿ ಎಫ್-35 ಕಾಣಿಸಿಕೊಂಡಿರುವುದು ಕೇವಲ ಕಾಕತಾಳೀಯ ಎನ್ನಲೂ ಸಾಧ್ಯವಿಲ್ಲ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.