ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತದ ಹಾದಿ: ಜಾಗತಿಕವಾಗಿ ನಡೆಯಲಿದೆ ಮರುಬಳಕೆಯ ರಾಕೆಟ್ ಅಭಿವೃದ್ಧಿ
ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಜಪಾನಿನ ಪಾತ್ರ ಬಹುತೇಕ 1970ರಲ್ಲಿ ಆರಂಭಗೊಂಡಿತು. ಆಗ ಜಪಾನ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಕಳುಹಿಸಿದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜಪಾನ್ ಆಗ ಸೋವಿಯತ್ ಒಕ್ಕೂಟ, ಅಮೆರಿಕಾ, ಮತ್ತು ಫ್ರಾನ್ಸ್ ಬಳಿಕ ಈ ಸಾಧನೆ ನಡೆಸಿದ ರಾಷ್ಟ್ರವಾಗಿತ್ತು.
2023ನೇ ಇಸವಿಯಲ್ಲಿ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆ ಪಾರಮ್ಯ ಮೆರೆದಿತ್ತು. ಆದರೆ, 2024ರಲ್ಲಿ ಜಾಗತಿಕ ಬಾಹ್ಯಾಕಾಶ ಉಡಾವಣಾ ಚಿತ್ರಣದಲ್ಲಿ ಬಹಳಷ್ಟು ಹೆಚ್ಚಿನ ಚಟುವಟಿಕೆಗಳು ಕಂಡುಬರುವ ಸಾಧ್ಯತೆಗಳಿದ್ದು, ಚೀನಾ, ಭಾರತ ಮತ್ತು ಜಪಾನ್‌ಗಳ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಸಕ್ರಿಯವಾಗಿ ಬಾಹ್ಯಾಕಾಶ ಉಡಾವಣೆಗಳಲ್ಲಿ ಭಾಗವಹಿಸಲಿವೆ.
ಚೀನಾದ ಸ್ಟಾರ್ಟಪ್ ಸಂಸ್ಥೆಯಾದ ಲ್ಯಾಂಡ್‌ಸ್ಕೇಪ್ ಟೆಕ್ನಾಲಜಿ 2025ರ ವೇಳೆಗೆ ಸ್ಪೇಸ್ ಎಕ್ಸ್ ಮಾದರಿಯಲ್ಲಿ ಮರುಬಳಕೆ ಮಾಡಬಲ್ಲ ರಾಕೆಟ್‌ಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಇದೇ ವೇಳೆಗೆ ಭಾರತವೂ ಸಹ 2025ರಲ್ಲಿ ನಡೆಸಲು ಉದ್ದೇಶಿಸಿರುವ ಮಾನವ ಸಹಿತ ಗಗನಯಾತ್ರೆಗೆ ಪೂರ್ವಭಾವಿ ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ.
ಜಪಾನ್ ಈ ತಿಂಗಳಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆ ಇಳಿಸಿದ ಐದನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಹೆಬ್ಬಯಕೆ ಹೊಂದಿದೆ. ಭಾರತದ ಚಂದ್ರಯಾನ-3 ಯೋಜನೆ ಆಗಸ್ಟ್ 23, 2023ರಂದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದ ಸಾಧನೆಯ ಬಳಿಕ ಜಪಾನ್ ಈ ಪ್ರಯತ್ನ ನಡೆಸಲಿದೆ. ಭಾರತ ಈಗಾಗಲೇ ಚಂದ್ರಯಾನ-3 ಯೋಜನೆಯಲ್ಲಿ ಬಳಸಿದ ಪ್ರೊಪಲ್ಷನ್ ಮಾಡ್ಯುಲ್ ಅನ್ನು ಭೂಮಿಯ ಕಕ್ಷೆಗೆ ಮರಳಿ ತಂದಿದೆ ಎನ್ನಲಾಗಿದ್ದು, ಈ ಯಶಸ್ವಿ ಪ್ರಯತ್ನ ಭವಿಷ್ಯದಲ್ಲಿ ಚಂದ್ರನ ಮಾದರಿಗಳನ್ನು ಭೂಮಿಗೆ ತರಲು ಸೂಕ್ತ ವೇದಿಕೆಯಾಗಲಿದೆ.
ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಜಪಾನಿನ ಪಾತ್ರ ಬಹುತೇಕ 1970ರಲ್ಲಿ ಆರಂಭಗೊಂಡಿತು. ಆಗ ಜಪಾನ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಕಳುಹಿಸಿದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜಪಾನ್ ಆಗ ಸೋವಿಯತ್ ಒಕ್ಕೂಟ, ಅಮೆರಿಕಾ, ಮತ್ತು ಫ್ರಾನ್ಸ್ ಬಳಿಕ ಈ ಸಾಧನೆ ನಡೆಸಿದ ರಾಷ್ಟ್ರವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಚೀನಾ ಮತ್ತು ಭಾರತ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಪ್ರಮುಖ ಶಕ್ತಿಗಳಾಗಿ ಹೊರಹೊಮ್ಮಿವೆ. ಚೀನಾ 2030ರ ವೇಳೆಗೆ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕಳುಹಿಸುವ ತನ್ನ ಗುರಿಯನ್ನು ಘೋಷಿಸಿದೆ. ಇದೇ ವೇಳೆ, ಭಾರತವೂ ಸಹ 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, 2040ರ ವೇಳೆಗೆ ಚಂದ್ರನ ಮೇಲೆ ತನ್ನ ಮೊದಲ ಗಗನಯಾತ್ರಿಯನ್ನು ಕಳುಹಿಸುವ ಬಯಕೆ ಹೊಂದಿದೆ.
ನೊಮುರಾ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಬಿಸಿನೆಸ್ ಕನ್ಸಲ್ಟೆಂಟ್ ಆಗಿರುವ ಶೋಗೋ ಯಕಾಮೆ ಅವರ ಪ್ರಕಾರ, ಜಪಾನ್‌ಗೆ ಚೀನಾದ ಬದಲು ಭಾರತವೇ ಬಾಹ್ಯಾಕಾಶ ವಲಯದಲ್ಲಿ ಹೆಚ್ಚಿನ ಸ್ಪರ್ಧೆ ಒಡ್ಡುವ ರಾಷ್ಟ್ರವಾಗಲಿದೆ. ಇದಕ್ಕೆ ಭಾರತದ ವಾಣಿಜ್ಯಿಕ ಬಾಹ್ಯಾಕಾಶ ವಲಯದ ಸಾಮರ್ಥ್ಯ, ಗುಣಲಕ್ಷಣಗಳು ಕಾರಣವಾಗಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಜಪಾನಿನ ಅತ್ಯಂತ ಮಹತ್ವಾಕಾಂಕ್ಷಿ ಚಂದ್ರ ಅನ್ವೇಷಣಾ ಯೋಜನೆ ಜನವರಿ 20ರಂದು ನಡೆಯುವ ನಿರೀಕ್ಷೆಗಳಿವೆ. ಈ ಯೋಜನೆ, ಜಗತ್ತಿನ ಪ್ರಪ್ರಥಮ 'ಪಿನ್ ಪಾಯಿಂಟ್' ನಿಖರತೆಯ ಚಂದ್ರನ ಮೇಲಿನ ಲ್ಯಾಂಡಿಂಗ್ ನಡೆಸಲು ಅವಶ್ಯಕವಾದ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ದ ಮೂನ್ (ಎಸ್ಎಲ್ಐಎಂ) ಅನ್ನು ಒಳಗೊಂಡಿದೆ. ಈ ಸ್ಲಿಮ್ ಉದ್ದೇಶಿತ ಪ್ರದೇಶದ ನೂರು ಮೀಟರ್ ನಿಖರತೆಯಲ್ಲಿ ಲ್ಯಾಂಡಿಂಗ್ ನಡೆಸುವ ನಿರೀಕ್ಷೆಗಳಿವೆ. ಜಪಾನ್ ತನ್ನ ಲ್ಯಾಂಡಿಂಗ್ ಪ್ರಕ್ರಿಯೆಗೆ ಚಂದ್ರನ ಸಮಭಾಜಕ ಪ್ರದೇಶಕ್ಕಿಂತ ಸ್ವಲ್ಪ ದಕ್ಷಿಣದಲ್ಲಿರುವ ಸೀ ಆಫ್ ನೆಕ್ಟರ್ ಬಳಿಯ ಶಿಯೋಲಿ ಕುಳಿಯ ಸಮೀಪದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ.
ಅತ್ಯಂತ ನಿಖರವಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸಲು ಜಪಾನಿನ ಸ್ಲಿಮ್ ಬಾಹ್ಯಾಕಾಶ ನೌಕೆ ರೇಡಾರ್ ಆಲ್ಟಿಮೀಟರ್ ಮತ್ತು ದೃಷ್ಟಿ ಆಧಾರಿತ ನ್ಯಾವಿಗೇಶನ್ (ಸಂಚರಣ) ವ್ಯವಸ್ಥೆಯ ಸಂಯೋಜನೆಯನ್ನು ಬಳಸುತ್ತದೆ. ಈ ವ್ಯವಸ್ಥೆ ಕುಳಿಯ ವಿನ್ಯಾಸಗಳನ್ನು ಗುರುತಿಸಿ, ಅವುಗಳನ್ನು ನೈಜ ಸಮಯದಲ್ಲಿ ತನ್ನ ಬಳಿ ಇರುವ ನಕ್ಷೆಯೊಡನೆ ಹೋಲಿಸುತ್ತದೆ. ಇದು ಅಡೆತಡೆಗಳನ್ನು ನಿವಾರಿಸಿ, ನಯವಾದ ಪ್ರದೇಶದಲ್ಲಿ ಚಂದ್ರಸ್ಪರ್ಶ ನಡೆಸಲು ನೆರವಾಗುತ್ತದೆ. 2.4 ಮೀಟರ್ ಗಾತ್ರದ ಲ್ಯಾಂಡರ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, ಒಂದು ವೇಳೆ ಯಾವುದಾದರೂ ಇಳಿಜಾರಿನ ಮೇಲೆ ಇಳಿದರೆ, ಅದು ಒಂದು ಬದಿಗೆ ಮಗುಚುವಂತೆ ನಿರ್ಮಿತವಾಗಿದೆ. ಇದು ಚಂದ್ರನ ಮೇಲೆ ಇಳಿದ ಬಳಿಕ ಅದರ ಸ್ಥಾನವನ್ನು ಸ್ಥಿರಗೊಳಿಸುವ ವಿನ್ಯಾಸವಾಗಿದೆ.
ಜಪಾನಿನ ಸ್ಲಿಮ್ ಬಾಹ್ಯಾಕಾಶ ನೌಕೆ ಹೊಂದಿರುವ ನಿಖರ ಲ್ಯಾಂಡಿಂಗ್ ಸಾಮರ್ಥ್ಯ ಮತ್ತು ಚಂದ್ರನ ಮೇಲ್ಮೈಯ ಕುರಿತಾಗಿ ಅದು ಕಲೆಹಾಕುವ ಮಾಹಿತಿಗಳು ಭವಿಷ್ಯದ ಚಂದ್ರ ಅನ್ವೇಷಣಾ ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರಲ್ಲಿ 2025ರಲ್ಲಿ ನಡೆಸಲು ಉದ್ದೇಶಿಸಿರುವ, ಜಪಾನ್ - ಭಾರತದ ಜಂಟಿ ಯೋಜನೆಯಾದ, ಚಂದ್ರನ ಧ್ರುವ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಹುಡುಕುವ ಯೋಜನೆಯೂ ಸೇರಿದೆ. ಅದರೊಡನೆ, ಟೊಯೋಟಾ ಮೋಟಾರ್ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಸಂಸ್ಥೆಗಳು ಚಂದ್ರನ ಮೇಲ್ಮೈಯಲ್ಲಿ ಬಳಸಲು ಒತ್ತಡ ಸಹಿತ ರೋವರ್ ಅಭಿವೃದ್ಧಿ ನಡೆಸುತ್ತಿವೆ. ಈ ರೋವರ್ ಅಭಿವೃದ್ಧಿ 2024ರಲ್ಲಿ ಆರಂಭಗೊಳ್ಳಲಿದ್ದು, 2029ರಲ್ಲಿ ಉಡಾವಣೆಗೊಳ್ಳಲಿದೆ.
ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ವೈಷಮ್ಯವನ್ನು 2023ರಲ್ಲಿ ಸ್ಪೇಸ್ ಎಕ್ಸ್ ನಡೆಸಿದ ಬಹುತೇಕ 100 ರಾಕೆಟ್ ಉಡಾವಣೆಗಳು ಒತ್ತಿ ಹೇಳುತ್ತವೆ. ಈ ಮೂಲಕ ಸ್ಪೇಸ್ ಎಕ್ಸ್ ವಾಣಿಜ್ಯಿಕ ಬಾಹ್ಯಾಕಾಶ ಪ್ರಯತ್ನಗಳನ್ನು ಹಿಂದೆಂದೂ ಕಾಣದ ಹಂತಕ್ಕೆ ಕೊಂಡೊಯ್ಯಿತು. ನವೆಂಬರ್ 2ರಂದು, ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂಸ್ಥೆಯ ದೂರ ಸಂಪರ್ಕ ಸೇವೆಯಾದ ಸ್ಟಾರ್ ಲಿಂಕ್ ಹಣಕಾಸಿನಲ್ಲಿ ಲಾಭ ನಷ್ಟ ಸರಿದೂಗುವ ಹಂತ ತಲುಪಿದೆ ಎಂದು ಘೋಷಿಸಿದ್ದರು. 5,500 ಉಪಗ್ರಹಗಳನ್ನು ಬಳಸಿಕೊಳ್ಳುವ ಸ್ಟಾರ್ ಲಿಂಕ್, ಜಾಗತಿಕ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸುತ್ತದೆ. ರಷ್ಯಾದ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಸ್ಟಾರ್ ಲಿಂಕ್ ಉಕ್ರೇನ್‌ಗೆ ನೆರವಾದ ರೀತಿಯಿಂದ ಜಾಗತಿಕ ಗಮನ ಸೆಳೆಯಿತು.
ಯಕಾಮೆ ಅವರು ಸ್ಟಾರ್ ಲಿಂಕ್ ರೀತಿಯ ಯೋಜನೆ ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಿಲ್ಲದ್ದಾಗಿತ್ತು ಎಂದಿದ್ದು, ಅಷ್ಟೊಂದು ಭಾರೀ ಸಂಖ್ಯೆಯ ಉಪಗ್ರಹಗಳ ನಿರ್ಮಾಣ, ಉಡಾವಣೆ ಮತ್ತು ನಿರ್ವಹಣೆಯ ಹಿಂದಿರುವ ವೆಚ್ಚಗಳು ಮತ್ತು ಸವಾಲುಗಳು ಅದಕ್ಕೆ ಕಾರಣವಾಗಿದ್ದವು ಎಂದಿದ್ದಾರೆ. ಅದರೊಡನೆ, ಭೂಮಿಯ ಕೆಳ ಕಕ್ಷೆಯಲ್ಲಿ (ಲೋ ಅರ್ತ್ ಆರ್ಬಿಟ್ - ಎಲ್ಇಒ) ಅತ್ಯಂತ ವೇಗವಾಗಿ ಚಲಿಸುವ ಉಪಗ್ರಹಗಳೊಡನೆ ಸಂಪರ್ಕ ಸ್ಥಾಪಿಸುವುದೂ ಸವಾಲಾಗಿದೆ. ಅವರು 1990ರ ದಶಕದಲ್ಲಿ ಅಮೆರಿಕಾದ ಇರಿಡಿಯಂ ಎಂಬ ಸಂಸ್ಥೆಯೂ ಇದೇ ರೀತಿಯ ಸೇವೆ ಒದಗಿಸುವ ಯೋಜನೆ ಹೊಂದಿತ್ತಾದರೂ, ಅಂತಿಮವಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದಿದ್ದಾರೆ.
ಬಾಹ್ಯಾಕಾಶ ಚಟುವಟಿಕೆಗಳು ವಿವಿಧ ಹಂತಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಉಡಾವಣಾ ವಾಹನಗಳ ನಿರ್ಮಾಣ ಅದರಲ್ಲಿ ಮೊದಲ ಹಂತವಾಗಿತ್ತು. ಅದಾದ ನಂತರದ ಹಂತದಲ್ಲಿ ಉಪಗ್ರಹಗಳ ಉಡಾವಣೆ ಮತ್ತು ಬಳಕೆ, ಬಾಹ್ಯಾಕಾಶ ನಿಲ್ದಾಣದಂತಹ ವ್ಯವಸ್ಥೆಗಳ ಮೂಲಕ ಬಾಹ್ಯಾಕಾಶ ವಾತಾವರಣಗಳ ಅಧ್ಯಯನ, ಇತ್ಯಾದಿಗಳು ನಡೆದವು. ಮಿತ್ಸುಬಿಷಿ ಹೆವಿ ಸಂಸ್ಥೆಯ ಸಿಇಒ ಆಗಿರುವ ಸೀಜಿ ಇಜ಼ುಮಿಸಾವಾ ಅವರು ಬಾಹ್ಯಾಕಾಶ ವಲಯದಲ್ಲಿ ಮುಂದಿನ ಹಂತ ವಾಣಿಜ್ಯೀಕರಣ ಕೇಂದ್ರಿತವಾಗಿರುತ್ತದೆ ಎಂದಿದ್ದಾರೆ.
ಫೆಬ್ರವರಿ 15ರಂದು, ಜಪಾನ್ ತನ್ನ ಮುಂದಿನ ತಲೆಮಾರಿನ ರಾಕೆಟ್ ಆಗಿರುವ ಎಚ್3 ಉಡಾವಣೆ ನಡೆಸಲು ಸಿದ್ಧತೆ ನಡೆಸಿದೆ. ಈ ರಾಕೆಟ್ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ 9 ರಾಕೆಟ್‌ಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಗಳಿವೆ. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಉಡಾವಣೆ ಇಲೆಕ್ಟ್ರಾನಿಕ್ಸ್ ಸಮಸ್ಯೆಯ ಕಾರಣದಿಂದ ವೈಫಲ್ಯ ಕಂಡಿತ್ತು. ಅದಾದ ಬಳಿಕ, ಜಪಾನ್ ರಾಕೆಟ್ ಉಡಾವಣೆಗೆ ಮರಳಿ ಪ್ರಯತ್ನ ನಡೆಸುತ್ತಿದೆ. ಎಚ್3 ರಾಕೆಟ್ ಹಿಂದಿರುವ ಮಿತ್ಸುಬಿಷಿ ಹೆವಿ ಸಂಸ್ಥೆ, ಉಡಾವಣಾ ಪ್ರಮಾಣದಲ್ಲಿ ಎಚ್3 ಫಾಲ್ಕನ್ 9 ಜೊತೆ ಸ್ಪರ್ಧಿಸದಿದ್ದರೂ, ವೆಚ್ಚದ ವಿಚಾರದಲ್ಲಿ ಸ್ಪರ್ಧೆ ಒಡ್ಡಬೇಕು ಎಂದು ಭಾವಿಸಿದೆ. ಎಚ್3 ವಾರ್ಷಿಕವಾಗಿ ಕನಿಷ್ಠ 6 ಉಡಾವಣೆಗಳನ್ನು ಹೊಂದುವ ನಿರೀಕ್ಷೆಗಳಿವೆ.
ಉಕ್ರೇನ್ ಯುದ್ಧದ ಪರಿಣಾಮವಾಗಿ, ರಷ್ಯಾದ ಸೊಯುಜ್ ರಾಕೆಟ್ ಅಲಭ್ಯವಾಗಿರುವುದರಿಂದ, ಉಪಗ್ರಹ ಉಡಾವಣೆಗಳಿಗೆ ಸಿದ್ಧತೆ ನಡೆಸಿರುವ ಉದ್ಯಮ ಸಂಸ್ಥೆಗಳು ತಮ್ಮ ಆಯ್ಕೆಯಾಗಿ ಸ್ಪೇಸ್ ಎಕ್ಸ್ ಕಡೆ ಮುಖ ಮಾಡಿವೆ.
2023ರಲ್ಲಿ, ಅಮೆರಿಕಾ ಅತ್ಯಧಿಕ ಬಾಹ್ಯಾಕಾಶ ಉಡಾವಣೆಗಳನ್ನು ನಡೆಸಿತ್ತು. ಅಮೆರಿಕಾ 103 ಉಡಾವಣೆಗಳನ್ನು ನಡೆಸಿದರೆ, ಎರಡನೇ ಸ್ಥಾನದಲ್ಲಿದ್ದ ಚೀನಾ 61 ಉಡಾವಣೆಗಳನ್ನು ಕೈಗೊಂಡಿತು. ರಷ್ಯಾ ಈ ಅವಧಿಯಲ್ಲಿ 16 ಉಡಾವಣೆಗಳನ್ನು ನಡೆಸಿತು ಎಂದು ಅಮೆರಿಕಾದ ರಕ್ಷಣಾ ಸಚಿವಾಲಯ ನಡೆಸುವ ಉಪಗ್ರಹ ಮಾಹಿತಿ ವೇದಿಕೆ ಸ್ಪೇಸ್ ಟ್ರ್ಯಾಕ್.ಆರ್ಗ್ ತಿಳಿಸಿದೆ. ಸ್ಯಾಟಲೈಟ್ ಬಿಸಿನೆಸ್ ನೆಟ್‌ವರ್ಕ್ ಎಂಬ ಸಲಹಾ ಸಂಸ್ಥೆಯ ಅಧ್ಯಕ್ಷರಾದ ಅತ್ಸುಷಿ ಮುರಕಾಮಿ ಅವರು, ಅಮೆರಿಕಾ ಮತ್ತು ಚೀನಾಗಳು ಬಾಹ್ಯಾಕಾಶ ವಲಯದಲ್ಲಿ ಪ್ರಮುಖ ಶಕ್ತಿಗಳಾಗಿದ್ದು, ಇನ್ನಷ್ಟು ಹೆಚ್ಚಿನ ಮುಂಚೂಣಿ ಸಾಧಿಸುತ್ತಿವೆ ಎಂದಿದ್ದು, ಈ ಸ್ಪರ್ಧಾ ಕಣದಲ್ಲಿ ಜಪಾನ್ ಸಹ ಕಾಲಿಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.
ಅಮೆರಿಕಾ, ಭಾರತ ಅಥವಾ ಚೀನಾಗೆ ಹೋಲಿಸಿದರೆ, ಬೃಹತ್ ಪ್ರಮಾಣದ ಬಾಹ್ಯಾಕಾಶ ಯೋಜನೆಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಜಪಾನ್ ಬಳಿ ಆರ್ಥಿಕ ಸಾಮರ್ಥ್ಯದ ಕೊರತೆಯಿದೆ. ಆದ್ದರಿಂದ ಜಪಾನ್ ತಾಂತ್ರಿಕತೆಯ ಅಭಿವೃದ್ಧಿ ಸಾಧಿಸಿ, ಬಾಹ್ಯಾಕಾಶ ವಲಯದಲ್ಲಿ ಪ್ರಮುಖ ಸಹಯೋಗಿಯಾಗುವ ಕಡೆ ಗಮನ ಹರಿಸುತ್ತಿದೆ.
ಬಾಹ್ಯಾಕಾಶ ಉಡಾವಣೆಗಳಲ್ಲಿ, ಪ್ರಸ್ತುತ ಸ್ಪೇಸ್ ಎಕ್ಸ್ ಜಾರಿಗೆ ತಂದಿರುವ ಮರುಬಳಕೆಯ ಸಾಧ್ಯತೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. 2015ರಲ್ಲಿ, ಉಡಾವಣೆ ನಡೆಸಿದ ರಾಕೆಟ್ ಬೂಸ್ಟರ್ ಒಂದನ್ನು ಯಶಸ್ವಿಯಾಗಿ ಮರು ಲ್ಯಾಂಡಿಂಗ್ ನಡೆಸುವ ಮೂಲಕ ಸ್ಪೇಸ್ ಎಕ್ಸ್ ಮಹತ್ತರ ಮೈಲಿಗಲ್ಲು ಸಾಧಿಸಿತು. ಅದಾದ ಬಳಿಕ 2017ರಲ್ಲಿ ಸ್ಪೇಸ್ ಎಕ್ಸ್ ಮರುಬಳಕೆಯ ಬೂಸ್ಟರ್ ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು. ಪ್ರಸ್ತುತ ಸ್ಪೇಸ್ ಎಕ್ಸ್ ಬೃಹತ್ ಪ್ರಮಾಣದ ಸ್ಟಾರ್ ಶಿಪ್ ಕ್ರೂಸ್ ಶಿಪ್ ನಿರ್ಮಾಣದ ಕಡೆ ಗಮನ ಹರಿಸುತ್ತಿದ್ದು, ಇದು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಮಾನವರನ್ನು ಒಯ್ಯುವ ಗುರಿ ಹೊಂದಿದೆ. ಸ್ಟಾರ್ ಶಿಪ್ ಮರಳಿ ಭೂಮಿಗೆ ಆಗಮಿಸಿದ ಬಳಿಕ, ಮತ್ತೊಮ್ಮೆ ಇಂಧನ ಮರುಪೂರಣ ನಡೆಸಿ, ಮರಳಿ ಉಡಾವಣೆಗೊಳಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.
ಪ್ರಸ್ತುತ ಮರುಬಳಕೆ ಮಾಡುವ ರಾಕೆಟ್‌ಗಳನ್ನು ಕಾರ್ಯಾಚರಿಸುತ್ತಿರುವ ಏಕೈಕ ವಾಣಿಜ್ಯಿಕ ಸಂಸ್ಥೆ ಸ್ಪೇಸ್ ಎಕ್ಸ್ ಆಗಿದೆ. ಆದರೆ, ಚೀನಾದ ಲ್ಯಾಂಡ್ ಸ್ಪೇಸ್ ಸಂಸ್ಥೆ ಡಿಸೆಂಬರ್ ತಿಂಗಳಲ್ಲಿ ತನ್ನ ಆರಂಭಿಕ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದು, 2025ರಲ್ಲಿ ಮರುಬಳಕೆಯ ರಾಕೆಟ್‌ಗಳನ್ನು ಉಡಾವಣೆಗೊಳಿಸುವ ಗುರಿ ಹೊಂದಿದೆ.
ಲ್ಯಾಂಡ್ ಸ್ಪೇಸ್ ಸಂಸ್ಥೆಯ ರಾಕೆಟ್ ಸ್ಪೇಸ್ ಎಕ್ಸ್‌ನ ಸ್ಟಾರ್ ಶಿಪ್ ರೀತಿಯಲ್ಲೇ ಇರಲಿದ್ದು, ಇಂಧನ ಮೂಲವಾಗಿ ಮಿಥೇನ್ ಅನ್ನು ಬಳಸಿಕೊಳ್ಳಲಿದೆ. ಮಂಗಳ ಗ್ರಹದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಮಂಜುಗಡ್ಡೆಯಿಂದ ನೀರು ಮತ್ತು ಇಂಗಾಲದ ಡೈಆಕ್ಸೈಡ್ ಮೂಲಕ ಮಿಥೇನ್ ಆಧಾರಿತ ಇಂಧನ ಉತ್ಪಾದಿಸಿ, ಮರಳಿ ಭೂಮಿಗೆ ಬರುವ ಸಾಧ್ಯತೆಗಳು ಹೆಚ್ಚು ಪ್ರಾಯೋಗಿಕವಾಗಿರುವುದರಿಂದ, ಇಂಧನವಾಗಿ ಮಿಥೇನ್ ಬಳಕೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರೊಡನೆ, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಮತ್ತು ಮಿತ್ಸುಬಿಷಿ ಹೆವಿ ಸಂಸ್ಥೆಗಳು ಮಿಥೇನ್ ಆಧಾರಿತ ರಾಕೆಟ್ ನಿರ್ಮಾಣಕ್ಕೆ ಪ್ರಯತ್ನ ನಡೆಸುತ್ತಿದ್ದು, 2030ರಲ್ಲಿ ಅದರ ಸಂಭಾವ್ಯ ಉಡಾವಣೆ ನಡೆಸುವ ಗುರಿ ಹೊಂದಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.