ಭಾರತದ ಕೆಮ್ಮಿನ ಸಿರಪ್ ಸೇವಿಸಿ 18 ಮಕ್ಕಳ ಸಾವು: ಉಜ್ಬೇಕಿಸ್ತಾನ್ ಆರೋಪ
ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಔಷಧ ಕಂಪನಿ ತಯಾರಿಸಿದ ಡಾಕ್ -1 ಮ್ಯಾಕ್ಸ್ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ್ದಾರೆಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿದೆ.
ನವದೆಹಲಿ: ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿದ ಕಾರಣ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಪಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಲ್ಲಿನ ಆರೋಗ್ಯ ಸಚಿವಾಲಯವು ಭಾರತ ಸರ್ಕಾರಕ್ಕೆ ಸೂಚಿಸಿದೆ.
ಉತ್ತರಪ್ರದೇಶದ ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಔಷಧ ಕಂಪನಿ ತಯಾರಿಸಿದ ಡಾಕ್ -1 ಮ್ಯಾಕ್ಸ್(Doc-1 Max) ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ್ದಾರೆಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಉಜ್ಜೇಕಿಸ್ತಾನದ ಆರೋಪದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ #MadeinIndia ಹ್ಯಾಶ್‍ಟ್ಯಾಗ್ ಟ್ರೆಡಿಂಗ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಈ ಬಗ್ಗೆ ತನಿಖೆ ಪ್ರಾರಂಭಿಸಿದೆ. ಇದಲ್ಲದೆ ಮಾದರಿಗಳನ್ನು ಪರೀಕ್ಷಿಸುವವರೆಗೆ ಮರಿಯನ್ ಬಯೋಟೆಕ್‌ನ ನೋಯ್ಡಾ ಘಟಕದಲ್ಲಿ ಕೆಮ್ಮಿನ ಸಿರಪ್ ತಯಾರಿಕೆಯನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ: Flood Video: ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೀರಲ್ಲಿ ಕೊಚ್ಚಿಹೋದ ನೂರಾರು ವಾಹನಗಳು, ವಿಡಿಯೋ ನೋಡಿ
ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಪ್ರಯೋಗಾಲಯದಲ್ಲಿ ಪರೀಕ್ಷೆಯ ಬಳಿಕ ಸಿರಪ್‌ಗಳಲ್ಲಿ ‘ಎಥಿಲೀನ್ ಗ್ಲೈಕೋಲ್ ಇರುವಿಕೆ’ ಎಂಬ ಮಾರಣಾಂತಿಕ ರಾಸಾಯನಿಕ ಕಂಡುಬಂದಿದೆ. ಇದು ವಿಷಕಾರಿ ವಸ್ತುವಾಗಿದೆ. ಈ ಔಷಧ ಸೇವನೆಯ ಬಳಿಕ ಮಕ್ಕಳು ಉಸಿರಾಟದ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ರಾಸಾಯನಿಕವು ಈ ಹಿಂದೆ ಗಾಂಬಿಯಾದಲ್ಲೂ ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಇ-ಮೇಲ್ ಮೂಲಕ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಉಜ್ಬೇಕಿಸ್ತಾನ ಆರೋಗ್ಯ ಇಲಾಖೆ ಹೇಳಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಕ್ಕಳಿಗೆ ಪೋಷಕರು ಅಥವಾ ಫಾರ್ಮಾಸಿಸ್ಟ್‌ನವರ ಸಲಹೆ ಮೇರೆಗೆ ಸಿರಪ್ ಅನ್ನು ಮಕ್ಕಳಿಗೆ ನಿಯಮಿತ ಪ್ರಮಾಣ ಮೀರಿದ ಡೋಸ್‌ಗಳನ್ನು ನೀಡಲಾಗಿದೆ ಎಂದು ಉಜ್ಬೇಕಿಸ್ತಾನ ಸರ್ಕಾರ ಆರೋಪಿಸಿದೆ. ಆಸ್ಪತ್ರೆಯ ಚಿಕಿತ್ಸೆಗೆ ದಾಖಲಾಗುವ ಮೊದಲು ಮಕ್ಕಳು ಈ ಸಿರಪ್ ಅನ್ನು 2 ರಿಂದ 7 ದಿನಗಳವರೆಗೆ ಮನೆಯಲ್ಲಿ 2.5 ರಿಂದ 5 ಮಿ.ಲೀ ಪ್ರಮಾಣದಲ್ಲಿ ದಿನಕ್ಕೆ 3 - 4 ಬಾರಿ ತೆಗೆದುಕೊಂಡಿದ್ದಾರೆಂದು ಕಂಡುಬಂದಿದೆ. ಇದು ಸ್ಟ್ಯಾಂಡರ್ಡ್ ಪ್ರಮಾಣವನ್ನು ಮೀರಿದೆ ಎಂದು ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಸಿರಪ್ ಅನ್ನು ಪೋಷಕರು ಶೀತ-ವಿರೋಧಿ ಪರಿಹಾರವಾಗಿ ಬಳಸುತ್ತಿದ್ದರು.
18 ಮಕ್ಕಳ ಸಾವಿನ ನಂತರ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್ -1 ಮ್ಯಾಕ್ಸ್ ಮಾತ್ರೆಗಳು ಮತ್ತು ಸಿರಪ್‌ಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಪರಿಸ್ಥಿತಿಯನ್ನು ಸಮಯಕ್ಕೆ ವಿಶ್ಲೇಷಿಸಲು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ ಕಾರಣ 7 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO - north zone) ಮತ್ತು ಉತ್ತರ ಪ್ರದೇಶ ಡ್ರಗ್ಸ್ ಕಂಟ್ರೋಲಿಂಗ್ ಮತ್ತು ಲೈಸೆನ್ಸಿಂಗ್ ಅಥಾರಿಟಿಯ ತಂಡಗಳು ಈ ಬಗ್ಗೆ ಜಂಟಿ ವಿಚಾರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಷ್ಯಾದ ಆರೈಕೆ ಮನೆಯಲ್ಲಿ ಅಗ್ನಿ ಅವಘಡ, ಕನಿಷ್ಠ 22 ಜನರು ಸಾವು
ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಅದರ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾಗಿದ್ದು, ಇದರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆಂದು ಫಾರ್ಮಾಸ್ಯುಟಿಕಲ್ ಕಂಪನಿ ತಿಳಿಸಿದೆ. ‘ ಈ ಬಗ್ಗೆ ಸರ್ಕಾರವು ವಿಚಾರಣೆ ನಡೆಸುತ್ತಿದೆ. ವರದಿಯ ಪ್ರಕಾರ ನಾವು ಕ್ರಮ ತೆಗೆದುಕೊಳ್ಳುತ್ತೇವೆ, ಸದ್ಯಕ್ಕೆ ಉತ್ಪಾದನೆಯನ್ನು ನಿಲ್ಲಿಸಲಾಗಿದೆ’ ಎಂದು ಮೆರಿಯನ್ ಬಯೋಟೆಕ್ ಫಾರ್ಮಾ ಕಂಪನಿಯ ಕಾನೂನು ಮುಖ್ಯಸ್ಥ ಹಸನ್ ರಜಾ ಹೇಳಿದ್ದಾರೆ.
ಉಜ್ಬೇಕಿಸ್ತಾನ್‌ನಿಂದ ಘಟನೆಯ ಮೌಲ್ಯಮಾಪನ ವರದಿಯನ್ನು ಸಹ ಕೇಳಲಾಗಿದೆ. ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್‌ಗಳಿದ ಮಕ್ಕಳು ಸಾವನ್ನಪ್ಪುತ್ತಿರುವುದು ವರ್ಷದಲ್ಲಿ ಇದು 2ನೇ ಬಾರಿ. ಈ ವರ್ಷದ ಆರಂಭದಲ್ಲಿ ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಕೆಮ್ಮು ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವನ್ನಪ್ಪಿದ್ದರು. ಔಷಧ ಉತ್ಪಾದನಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅಕ್ಟೋಬರ್‌ನಲ್ಲಿ ಸೋನೆಪತ್‌ನಲ್ಲಿರುವ ತನ್ನ ಘಟಕವನ್ನು ಮುಚ್ಚಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.