ಬಲೂಚಿಸ್ತಾನ್ ಸ್ವಾತಂತ್ರ್ಯಕ್ಕೆ ಒತ್ತಾಯಿಸಿ ಲಂಡನ್ ಬಸ್ಗಳ ಮೇಲೆ ಜಾಹಿರಾತು ಆಂದೋಲನ
ನವದೆಹಲಿ: ಪಾಕಿಸ್ತಾನ ಸರ್ಕಾರ ತನ್ನ ಕಾರ್ಯಚಟುವಟಿಕೆಗಳ ಮೇಲೆ ನಿಷೇಧಾಜ್ಞೆ ಹಾಗೂ ಸೆನ್ಸಾರ್ ಹೇರಲು ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ, ವಿಶ್ವ ಬಲೋಚ್ ಸಂಸ್ಥೆ ಮತ್ತೊಮ್ಮೆ ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿ ಬಲವಾದ ಜಾಹಿರಾತು ಆಂದೋಲನ ಹಮ್ಮಿಕೊಂಡಿದೆ. ಅದರ ಇತ್ತೀಚಿನ ಆಂದೋಲನದಲ್ಲಿ ಸಂಸ್ಥೆಯು ಲಂಡನ್ನ 100 ಸಾರ್ವಜನಿಕ ಸಾರಿಗೆ ಬಸ್ಗಳ ಮೇಲೆ "ಫ್ರೀ ಬಲೂಚಿಸ್ತಾನ್" ಎಂಬ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಆಂದೋಲನ ನಡೆಸಿತು.
ಈ ಕುರಿತು ಮಾತನಾಡಿದ ವಿಶ್ವ ಬಲೋಚ್ ಸಂಸ್ಥೆ ವಕ್ತಾರ ಭವಾಲ್ ಮೆಂಗಾಲ್, "ಬಲೂಚಿಸ್ತಾನದಲ್ಲಿ ಪಾಕಿಸ್ತಾನವು ಮಾನವ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಹಾಗೂ ಬಲೋಚ್ ಜನರ ಬಲ ಸ್ವಯಂ-ನಿರ್ಣಯದ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಇದು ನಮ್ಮ ಲಂಡನ್ ಅಭಿಯಾನದ ಮೂರನೆಯ ಹಂತವಾಗಿದೆ. ಆರಂಭದಲ್ಲಿ ಟ್ಯಾಕ್ಸಿಗಳ ಮೇಲೆ, ರಸ್ತೆ ಬದಿಗಳಲ್ಲಿ, ಬಿಲ್ ಬೋರ್ಡುಗಳ ಮೇಲೆ ಬಿತ್ತಿ ಪತ್ರ ಅಂಟಿಸಿ ಆಂದೋಲನ ಹಮ್ಮಿಕೊಂಡಿದ್ದೆವು. ಈಗ ಬಸ್ಗಳ ಮೇಲೆ ಜಾಹಿರಾತು ಆಂದೋಲನ ಆರಂಭಿಸಿದ್ದೇವೆ'' ಎಂದು ತಿಳಿಸಿದರು.
ಈ ಹಿಂದಿನ ಆಂದೋಲನದಲ್ಲಿ ಲಂಡನ್ನಲ್ಲಿ ಹಲವಾರು ಟ್ಯಾಕ್ಸಿಗಳು ಬಲೋಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಸಂದೇಶಗಳನ್ನು ಸಾರಿದ್ದವು. ಆ ಸಮಯದಲ್ಲಿ, ಇಸ್ಲಾಮಾಬಾದ್ನ ಬ್ರಿಟಿಷ್ ಹೈ ಕಮಿಷನರ್ ಗೆ ಆದೇಶ ನೀಡಿ ಪ್ರತಿಭಟನೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ತೀರಾ ಇತ್ತೀಚೆಗೆ ನಡೆದ ಆಂದೋಲನಗಳನ್ನು ಪಾಕಿಸ್ತಾನದ ಅಧಿಕಾರಿಗಳು ಇದು 'ದುರುದ್ದೇಶಪೂರಿತ' ಮತ್ತು 'ಪಾಕಿಸ್ತಾನ-ವಿರೋಧಿ' ಎಂದು ಹೇಳಿದ್ದಾರೆ.
ಈ ಹಿಂದೆ ಇದೇ ಸಂದೇಶವನ್ನು ಜಿನೀವಾದ ಬಸ್ಗಳು ಹೊತ್ತು ಸಾರಿದ್ದವು. ಇದು ಪಾಕಿಸ್ತಾನ ಮತ್ತು ಸ್ವಿಸ್ ಅಧಿಕಾರಿಗಳ ನಡುವಿನ ಮುನಿಸಿಗೂ ಕಾರಣವಾಗಿತ್ತು.
ಏತನ್ಮಧ್ಯೆ, ಪಾಕಿಸ್ತಾನದ ಹೊರಗೆ ವಾಸಿಸುತ್ತಿರುವ ಪ್ರಮುಖ ಬಲೂಚಿಗಳು ಅವರ ಕಾರಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. "ನಮ್ಮ ಜಾಹೀರಾತುಗಳನ್ನು ನಿಷೇಧಿಸುವಂತೆ ಲಂಡನ್ ಮೇಲೆ ಒತ್ತಡ ಹೇರಿ, ಪಾಕಿಸ್ತಾನ ಸರ್ಕಾರ ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಮುಂದಿನ ವಾರಗಳಲ್ಲಿ ಈ ಆಂದೋಲನವು ಮತ್ತಷ್ಟು ತೀವ್ರಗೊಳ್ಳಲಿದೆ. ಪಾಕಿಸ್ತಾನದ ಬೆದರಿಸುವ ತಂತ್ರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿಗಳಾಗಿವೆ ಎಂದು ಮೆಂಗಲ್ ಹೇಳಿದ್ದಾರೆ.