ಇಮ್ರಾನ್ ಸರ್ಕಾರಕ್ಕೆ ವರ್ಷ ತುಂಬುವುದರೊಳಗೆ ಬಡತನ ರೇಖೆಗಿಂತ ಕೆಳಗಿಳಿದವರೆಷ್ಟು?
ಸರ್ಕಾರವು ತೆರಿಗೆ ಹೆಚ್ಚಳ, ಇಂಧನ ಸುಂಕ ಹೆಚ್ಚಳ ಮತ್ತು ಕರೆನ್ಸಿಯ ಅಪಮೌಲ್ಯೀಕರಣವು ಬಡತನವನ್ನು ಹೆಚ್ಚಳಕ್ಕೆ ಕಾರಣ ಎಂದು ಪಾಷಾ ಹೇಳಿದರು. ಪಾಷಾ ಪ್ರಕಾರ, ಮುಂದಿನ ವರ್ಷದ ಜೂನ್ ವೇಳೆಗೆ, ಪಾಕಿಸ್ತಾನಿಗಳಲ್ಲಿ ಹತ್ತು ಜನರಲ್ಲಿ ನಾಲ್ವರು ಬಡವರಿರುತ್ತಾರೆ.
ಇಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸುವ ವೇಳೆಗೆ ದೇಶದಲ್ಲಿ 18 ದಶಲಕ್ಷಕ್ಕೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿಳಿಯಲಿದ್ದಾರೆ ಎಂದು ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಡಿಮೆ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿರುವ, ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಸಲಹೆಗಾರ ಹಫೀಜ್ ಎ. ಪಾಷಾ ಅವರು ಪಿಟಿಐ ಸರ್ಕಾರದ ಮೊದಲ ವರ್ಷದ ಅಂತ್ಯದ ವೇಳೆಗೆ ಈಗಾಗಲೇ 80 ಲಕ್ಷ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಿದರು.
ಪ್ರಸಕ್ತ ಹಣಕಾಸು ವರ್ಷದ ಕೊನೆಯಲ್ಲಿ ಒಂದಕ್ಕಿಂತ ಹೆಚ್ಚು ಕೋಟಿ ಜನರು ಬಡತನ ರೇಖೆಗಿಂತ ಕೆಳಗಿಳಿಯುತ್ತಾರೆ ಎಂದು ಅವರು ಅಂದಾಜಿಸಿದ್ದಾರೆ. ಮಂಗಳವಾರ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನೊಂದಿಗಿನ ಸಂವಾದದಲ್ಲಿ ಮಾತನಾಡಿದ ಪಾಷಾ, "ದೇಶದಲ್ಲಿ ಆರ್ಥಿಕ ಬೆಳವಣಿಗೆಯ ದರ ಕಳಪೆ ಮಟ್ಟದಲ್ಲಿದೆ ಮತ್ತು ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರಿ ಹೆಚ್ಚಳದಿಂದಾಗಿ ಪಾಕಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಆರ್ಥಿಕ ಬೆಳವಣಿಗೆಯ ಸ್ಥಿತಿಯು ದೇಶದ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಫೆಡರಲ್ ಯೋಜನಾ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ಅವರನ್ನು ಸಂಪರ್ಕಿಸಿ ಈ ನಿಟ್ಟಿನಲ್ಲಿ ಅವರ ಪ್ರತಿಕ್ರಿಯೆ ಕೇಳಿದಾಗ, "ನಮ್ಮಲ್ಲಿ ಬಡತನದ ಬಗ್ಗೆ ಇತ್ತೀಚಿನ ಅಂಕಿ-ಅಂಶಗಳು ಇಲ್ಲ" ಎಂದು ಹೇಳಿದರು. ಪಿಟಿಐ ಸರ್ಕಾರವು ಬಡತನವನ್ನು ನಿರ್ಮೂಲನೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳನ್ನು ತೀವ್ರಗೊಳಿಸಿದೆ, ಇದು ವ್ಯಾಪಕ ಆರ್ಥಿಕ ಹೊಂದಾಣಿಕೆಯ ದುಷ್ಪರಿಣಾಮಗಳಿಂದ ಬಡವರನ್ನು ಮತ್ತು ದುರ್ಬಲರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅಸಾದ್ ಉಮರ್ ಹೇಳಿದ್ದಾರೆ.
ಇದೇ ವೇಳೆ ಸರ್ಕಾರವು ತೆರಿಗೆ ಹೆಚ್ಚಳ, ಇಂಧನ ಸುಂಕ ಹೆಚ್ಚಳ ಮತ್ತು ಕರೆನ್ಸಿಯ ಅಪಮೌಲ್ಯೀಕರಣವು ದೇಶದಲ್ಲಿ ಬಡತನ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಪಾಷಾ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ವಾಗ್ಧಲೈ ನಡೆಸಿದ್ದಾರೆ. ಪಾಷಾ ಪ್ರಕಾರ, ಮುಂದಿನ ವರ್ಷದ ಜೂನ್ ವೇಳೆಗೆ, ಪಾಕಿಸ್ತಾನಿಗಳಲ್ಲಿ ಹತ್ತು ಜನರಲ್ಲಿ ನಾಲ್ವರು ಬಡವರಾಗಿರುತ್ತಾರೆ.