ನವದೆಹಲಿ: ಚೀನಾದ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಜಗತ್ತಿಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಚೀನಾ ದೇಶ ಅಮೇರಿಕಾದ ಬೌದ್ದಿಕ ಆಸ್ತಿಯನ್ನು ಕಡಿಯುವುದರ ಮೂಲಕ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ ಎಂದು ಟ್ರಂಪ್ ದೂರಿದ್ದಾರೆ.


COMMERCIAL BREAK
SCROLL TO CONTINUE READING

ವಿವಾದಿತ ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕ ಪ್ರವೇಶಿಸಿರುವುದನ್ನು ಎದುರಿಸುವ ಉದ್ದೇಶದಿಂದಾಗಿ ಚೀನಾ ತನ್ನ ಮಿಲಿಟರಿ ವೆಚ್ಚವನ್ನು152 ಶತಕೋಟಿ ಡಾಲರ್‌ಗೆ ಹೆಚ್ಚಿಸಿರುವ ಹಿನ್ನಲೆಯಲ್ಲಿ ಟ್ರಂಪ್ ಅವರ ಹೇಳಿಕೆ ಬಂದಿದೆ. 'ನಿಸ್ಸಂಶಯವಾಗಿ ಚೀನಾ ಒಂದು ಅರ್ಥದಲ್ಲಿ ಜಗತ್ತಿಗೆ ಬೆದರಿಕೆಯನ್ನು ಒಡ್ಡುತ್ತಿದೆ. ಏಕೆಂದರೆ ಅವರು ಎಲ್ಲರಿಗಿಂತ ವೇಗವಾಗಿ ಮಿಲಿಟರಿ ನಿರ್ಮಾಣದಲ್ಲಿ ತೊಡಗಿದ್ದಾರೆ ಇದಕ್ಕಾಗಿ ಅವರು ಅಮೆರಿಕಾದ ಹಣವನ್ನು ಬಳಸುತ್ತಿದ್ದಾರೆ 'ಎಂದು ಹೇಳಿದರು.


ಇದೇ ವೇಳೆ ಈ ಹಿಂದಿನ ಅಮೆರಿಕಾದ ಅಧ್ಯಕ್ಷರನ್ನು ಟೀಕಿಸಿದ ಟ್ರಂಪ್, ಅವರು ವರ್ಷಕ್ಕೆ ಚೀನಾಗೆ 500 ಮಿಲಿಯನ್ ಡಾಲರ್ ನೀಡಲು ಅವಕಾಶ ಮಾಡಿಕೊಟ್ಟರು ಎಂದು ಅವರು ದೂರಿದರು. 'ಅವರು ನಮ್ಮ ಬೌದ್ಧಿಕ ಆಸ್ತಿ ಮತ್ತು ಆಸ್ತಿ ಹಕ್ಕುಗಳನ್ನು ಕದಿಯಲು ಚೀನಾಕ್ಕೆ ಅವಕಾಶ ನೀಡಿದ್ದಾರೆ ಮತ್ತು ನಾನು ಅದನ್ನು ಮಾಡುತ್ತಿಲ್ಲ' ಎಂದು ಹೇಳಿದರು. ಆದರೆ ಉಭಯ ದೇಶಗಳು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಿವೆ ಎಂದು ತಿಳಿಸಿದರು.


ಕಳೆದ ವರ್ಷ ಮಾರ್ಚ್‌ನಲ್ಲಿ ಡೊನಾಲ್ಡ್ ಟ್ರಂಪ್ 250 ಬಿಲಿಯನ್ ಯುಎಸ್ ಡಾಲರ್ ಚೀನೀ ಸರಕುಗಳ ಮೇಲೆ ಶೇ 25 ರಷ್ಟು ಸುಂಕ ಹೆಚ್ಚಳವನ್ನು ವಿಧಿಸಿದಾಗಿನಿಂದ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳು ವ್ಯಾಪಾರ ಯುದ್ಧದಲ್ಲಿ ತೊಡಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡ ಅಮೆರಿಕಾದ ಉತ್ಪನ್ನಗಳ ಮೇಲೆ ತೆರಿಗೆಯನ್ನು ವಿಧಿಸಿತು.