ಬೀಜಿಂಗ್: ಭಾರತದಲ್ಲಿ ಉಂಟಾದ ಪ್ರವಾಹಕ್ಕೆ ಕಾರಣವಾದ, ಟಿಬೆಟ್ನನ ಉಂಟಾದ ಭೂಕಂಪನದಿಂದಾಗಿ ಬ್ರಹ್ಮಪುತ್ರಾ ನದಿಯ ಭೂಕುಸಿತದಿಂದ ನಿರ್ಮಾಣವಾಗಿರುವ ಬೃಹತ್ ಸರೋವರಗಳನ್ನು ನಿರ್ವಹಿಸಲು ಚೀನಾವು ಭಾರತದೊಂದಿಗೆ ಸಂವಹನ ನಡೆಸಲಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವರದಿಗಳು ಪ್ರಕಾರ, ಕಳೆದ ತಿಂಗಳು ಟಿಬೆಟ್ ನಲ್ಲಿ ಸಂಭವಿಸಿದ ಸುಮಾರು 6.4 ಪ್ರಮಾಣದ ಭೂಕಂಪನದಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ಮೂರು ಬೃಹತ್ ಕೃತಕ ಸರೋವರಗಳು ನಿರ್ಮಾಣವಾಗಿದ್ದು, ಅವುಗಳ ಗಾತ್ರ ಮತ್ತು ನೀರಿನ ಪ್ರಮಾಣವನ್ನು ಇನ್ನೂ ಅಳೆಯಬೇಕಿದೆ. 


ಒಂದು ವೇಳೆ ಸರೋವರಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ಸರೋವರಗಳು ಸೇರಿದರೆ ಅಥವಾ ಸ್ಫೋಟಿಸಿದರೆ, ಸಯಾಂಗ್ (ಅರುಣಾಚಲ ಪ್ರದೇಶದಲ್ಲಿ) ಮತ್ತು ಬ್ರಹ್ಮಪುತ್ರ (ಅಸ್ಸಾಂನಲ್ಲಿ) ಭಾಗದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. 


"ಚೀನೀಯರ ಭಾಗವು ಅಸ್ತಿತ್ವದಲ್ಲಿರುವ ಚಾನೆಲ್ಗಳ ಮೂಲಕ, ಗಡಿ ಭಾಗದ ನದಿಗಳ ನಿರ್ವಹಣೆ ಬಗ್ಗೆ  ಭಾರತೀಯರ ಜೊತೆ ಸಂವಹನವನ್ನು ಕಾಯ್ದುಕೊಳ್ಳಲಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಾಯಿಂಗ್ ಮಾಧ್ಯಮದವರಿಗೆ ತಿಳಿಸಿದ್ದಾರೆ.


ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅಧಿಕಾರಿಗಳು ಸರೋವರಗಳು ಭಾರತ-ಚೀನಾ ಗಡಿಯ ಪೂರ್ವ ಭಾಗದಲ್ಲಿವೆ ಎಂದು ಬಹಿರಂಗಪಡಿಸಿದ್ದಾರೆ.


"ಇದು ನೈಸರ್ಗಿಕ ಅಂಶಗಳಿಂದ ನಿರ್ಮಾಣವಾಗಿದ್ದು, ಮಾನವ ನಿರ್ಮಿತ ಹಾನಿಯಿಂದಲ್ಲ. ಈ ಕುರಿತು ಅಧಿಕೃತ ಭಾರತೀಯ ವೃತ್ತಿಪರರು ವಿಶ್ಲೇಷಣೆ ಮಾಡಿ, ಸ್ಪಷ್ಟಪಡಿಸಿರುವುದನ್ನು ನಾವು  ಗಮನಿಸಿದ್ದೇವೆ" ಎಂದು ಹೇಳಿದ ಅವರು, ಈ ಸರೋವರಗಳು ಉಪಗ್ರಹಗಳ ವರದಿಯಿಂದ ಪತ್ತೆಹಚ್ಚಲ್ಪಟ್ಟಿರುವುದಾಗಿ ತಿಳಿಸಿದ್ದಾರೆ. 


ಅಲ್ಲದೆ, ಭಾರತೀಯ ಮಾಧ್ಯಮಗಳು ಈ ಬಗ್ಗೆ ಅನಾವಶ್ಯಕ ವದಂತಿಗಳನ್ನು ಹಬ್ಬಿಸುವುದಿಲ್ಲ ಎಂದು 
ಭಾವಿಸುವುದಾಗಿಯೂ ಅವರು ಹೇಳಿದ್ದಾರೆ.  


ಈ ಹಿಂದೆ, ನೆರೆಯ ಶುಷ್ಕ ಕ್ಸಿನ್ಜಿಯಾಂಗ್ ಪ್ರದೇಶಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೃಹತ್ ಸುರಂಗ ನಿರ್ಮಿಸಲು ಪ್ರಯತ್ನಗಳನ್ನು ನಡೆಸಿದ ಪರಿಣಾಮ ಸಿಯಾಂಗ್ ನದಿಯ ನೀರು ಅತ್ಯಂತ ಕಲುಷಿತ ಗೊಂಡಿತು ಎಂಬ ವರದಿಯನ್ನು ಚೀನಾ ನಿರಾಕರಿಸಿತ್ತು. 


ದೆಹಲಿಯಲ್ಲಿ ಡಿಸೆಂಬರ್ 22 ರಂದು ಎನ್ಎಸ್ಎ ಅಜಿತ್ ದೋವಾಲ್ ಮತ್ತು ಚೀನಾದ ರಾಜ್ಯ ಕೌನ್ಸಿಲರ್ ಯಾಂಗ್ ಜೀಚಿ ನಡುವಿನ ಇತ್ತೀಚಿನ ಗಡಿ ಮಾತುಕತೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿತ್ತು.


ಭಾರತ-ಚೀನಾ ಗಡಿ ವಿವಾದವು 3,488 ಕಿಮೀ ಉದ್ದದ ನೈಜ ನಿಯಂತ್ರಣ (ಎಲ್ಎಸಿ) ರೇಖೆಯನ್ನು ಒಳಗೊಂಡಿದೆ. ಚೀನಾ ಅರುಣಾಚಲ ಪ್ರದೇಶವನ್ನು ಸದರ್ನ್ ಟಿಬೆಟ್ ಎಂದು ಹೇಳಿಕೊಂಡರೂ, 1962 ರ ಯುದ್ಧದಲ್ಲಿ ಚೀನಾ ಆಕ್ರಮಿಸಿದ ಅಕ್ಸಾಯ್ ಚಿನ್ ಪ್ರದೇಶವನ್ನು ಈ ವಿವಾದವು ಒಳಗೊಂಡಿದೆ ಎಂದು ಭಾರತ ಪ್ರತಿಪಾದಿಸಿದೆ.