ವಾಷಿಂಗ್ಟನ್: ಸೆಪ್ಟೆಂಬರ್ 22 ರಂದು ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕೆಲವು ಮೆಗಾ ಘೋಷಣೆಗಳು ಹೊಮ್ಮುವ ಸಾಧ್ಯತೆ ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸುಳಿವು ನೀಡಿದ್ದಾರೆ. ಈ ಸಂದರ್ಭದಲ್ಲಿ ಯುಎಸ್ ಮತ್ತು ಭಾರತದ ಅಧಿಕಾರಿಗಳು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಹೌಡಿ, ಮೋದಿ!" ಎಂಬ ಮೆಗಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 50,000  ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿಯವರೊಂದಿಗೆ ಡೊನಾಲ್ಡ್ ಟ್ರಂಪ್ ಕೂಡ ಸೇರಿಕೊಳ್ಳಲಿದ್ದಾರೆ ಎಂದು ಈಗಾಗಲೇ ಶ್ವೇತಭವನ ಸೋಮವಾರ ಪ್ರಕಟಿಸಿದೆ. ಈ ಕಾರ್ಯಕ್ರಮ ಉಭಯ ದೇಶಗಳ ನಡುವಿನ ದ್ವೀಪಕ್ಷಿಯ ಸಂಬಂಧಕ್ಕೆ ಹೊಸ ನಾಂದಿ ಹಾಡಲಿದೆ ಎನ್ನಲಾಗಿದೆ.


ಜೂನ್‌ನಲ್ಲಿ ಜಪಾನ್‌ನಲ್ಲಿ ನಡೆದ ಜಿ -20 ಶೃಂಗಸಭೆ ಮತ್ತು ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ನಡೆದ ಜಿ -7 ಶೃಂಗಸಭೆಯ ನಂತರ ಮೂರು ತಿಂಗಳಲ್ಲಿ ಉಭಯ ನಾಯಕರ ನಡುವಿನ ಮೂರನೇ ಸಭೆಯಾಗಲಿದೆ ಎನ್ನಲಾಗಿದೆ. 


ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ ಡಿಸಿಗೆ ಹಿಂದಿರುಗುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್  'ಆಗಿರಬಹುದು. ನಾನು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಅವರು ಉತ್ತರಿಸಿದರು. ಈ ವೇಳೆ ಅವರಿಗೆ ಈ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಏನಾದರೂ ವಿಶೇಷ ಘೋಷಣೆ ಮೊಳಗಲಿದೆಯೇ? ಎಂದು ಪತ್ರಕರ್ತರು ಕೇಳಿದಾಗ ಅವರು ಮೇಲಿನಂತೆ ಉತ್ತರಿಸಿದರು. 


ಮಾಧ್ಯಮ ವರದಿಗಳ ಪ್ರಕಾರ ಪ್ರಧಾನಿ ಮೋದಿ ಮತ್ತು ಟ್ರಂಪ್ ಹೂಸ್ಟನ್‌ನಲ್ಲಿ ಭೇಟಿಯಾಗುವ ಮೊದಲು ಉಭಯ ದೇಶಗಳ ಅಧಿಕಾರಿಗಳು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಭಾರತ ಅಮೇರಿಕಾ ಉತ್ಪನ್ನಗಳ ಮೇಲೆ ವಿಧಿಸಿದ್ದ ಸುಂಕ ನೀತಿಗೆ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.