ಕೇವಲ ಎರಡೇ ತಿಂಗಳಿನಲ್ಲಿ Facebook CEO ಝಕರ್ ಬರ್ಗ್ ಆಸ್ತಿಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ?
ಕರೋನಾ ಪ್ರಕೋಪ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಡುವೆಯೂ ಕೂಡ ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್‌ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ ಬರ್ಗ್ ಅವರ ಆಸ್ತಿಯಲ್ಲಿ ಕಳೆದ 2 ತಿಂಗಳಲ್ಲಿ 30 ಬಿಲಿಯನ್ ಡಾಲರ್ ವೃದ್ಧಿಯಾಗಿದೆ.
ನವದೆಹಲಿ: ಕರೋನಾ ಪ್ರಕೋಪ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಡುವೆಯೂ ಕೂಡ ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್‌ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ ಬರ್ಗ್ ಅವರ ಆಸ್ತಿಯಲ್ಲಿ ಕಳೆದ 2 ತಿಂಗಳಲ್ಲಿ 30 ಬಿಲಿಯನ್ ಡಾಲರ್ ವೃದ್ಧಿಯಾಗಿದೆ.
ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಝಕರ್ ಬರ್ಗ್ ಬಳಿ ಸುಮಾರು 57.5 ಬಿಲಿಯನ್ ಡಾಲರ್ ಆಸ್ತಿ ಇದೆ ಎಂದು ಅಂದಾಜಿಸಲಾಗಿತ್ತು, ಆದರೆ ಸದ್ಯ ಅವರ ಸಂಪತ್ತು 87.5 ಬಿಲಿಯನ್ ಡಾಲರ್ ಗೆ. ಏರಿಕೆಯಾಗಿದ್ದು ಝಕರ್‌ಬರ್ಗ್ ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎನ್ನಲಾಗಿದ್ದು, ಈ ಪಟ್ಟಿಯಲ್ಲಿ ಅವರು ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿದ್ದಾರೆ ಎನ್ನಲಾಗಿದೆ.
ವಿಶ್ವದ ಜನಪ್ರೀಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಆನ್‌ಲೈನ್ ಶಾಪಿಂಗ್ ವೈಶಿಷ್ಟ್ಯವಾದ 'ಶಾಪ್ಸ್' ಅನ್ನು ಸಹ ಪ್ರಾರಂಭಿಸಿದೆ. ಸಿಎನ್‌ಬಿಸಿ ವರದಿಯ ಪ್ರಕಾರ, 'ಶಾಪ್ಸ್' ಕಾರಣದಿಂದಾಗಿ ಫೇಸ್‌ಬುಕ್‌ನ ಷೇರು ಬೆಲೆ ದಾಖಲೆಯ ಮಟ್ಟ ಅಂದರೆ 230 ಡಾಲರ್ ಗೆ ತಲುಪಿದೆ. ತನ್ನ ಈ ವೈಶಿಷ್ಟ್ಯವನ್ನು ಇನ್ನಷ್ಟು ಜನಪರವಾಗಿಸಲು ಫೇಸ್ ಬುಕ್ ತನ್ನ ಮೆಸೆಂಜರ್ ರೂಮ್ಸ್ ಗಳಲ್ಲಿ ಗ್ರೂಪ್ ವಿಡಿಯೋ ಕಾನ್ಫರೆನ್ಸಿಂಗ್ ವೈಶಿಷ್ಟ್ಯವನ್ನು ಸಹ ಪರಿಚಯಿಸಿದೆ. ಇದು ಫೇಸ್ ಬುಕ್ ಮೆಸ್ಸೆಂಜರ್ ಜನಪ್ರೀಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಕಳೆದ ಎರಡು ತಿಂಗಳುಗಳಿಂದ ಝಕರ್ ಬರ್ಗ್ ತನ್ನ ಕಂಪನಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಈ ಅವಧಿಯಲ್ಲಿ ಫೇಸ್ ಬುಕ್ ಗೆ ಅವರು ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದಾರೆ. ಇನ್ನೊಂದೆಡೆ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಆಗಿರುವ ಝೂಮ್ ಗೆ ಪ್ರತಿಸ್ಪರ್ಧೆ ಒಡ್ಡಲು ಮೆಸೆಂಜರ್ ರೂಮ್ಸ್ ಗಳನ್ನು ಲಾಂಚ್ ಮಾಡಿದ್ದಾರೆ. ಈ ಮೆಸೆಂಜರ್ ರೂಮ್ ಗಳಲ್ಲೇ ಏಕಕಾಲಕ್ಕೆ 50 ಜನರು ಸೇರಿ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಬಹುದು. ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿರುವವರೂ ಕೂಡ ಈ ರೂಮ್ಸ್ ಗಳ ಬಳಕೆ ಮಾಡಬಹುದು. ಇದರಲ್ಲಿ ವಿಶೇಷತೆ ಎಂದರೆ ಕಾಲಿಂಗ್ ನಲ್ಲಿ ಭಾಗವಹಿಸುವವರು ಫೇಸ್ ಬುಕ್ ಖಾತೆ ಹೊಂದಿರುವುದು ಅನಿವಾರ್ಯವಾಗಿಲ್ಲ. ಆದರೆ, ಹೋಸ್ಟ್ ಮಾಡಲು ಅಥವಾ ಕಾಲ್ ಆರಂಭಿಸಲು ಫೇಸ್ ಬುಕ್ ಖಾತೆ ಹೊಂದಿರುವುದು ಅನಿವಾರ್ಯವಾಗಿದೆ.
ಏತನ್ಮಧ್ಯೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಝಕರ್ ಬರ್ಗ್, ವರ್ಕ್ ಫ್ರಮ್ ಹೋಂ ನಿಂದ ಫೇಸ್ ಬುಕ್ ನೌಕರರ ಮೇಲೆ ಸಕಾರಾತ್ಮಕ ಪ್ರಭಾವ ಬಿದ್ದಿದೆ. ಅಷ್ಟೇ ಅಲ್ಲ ಕಚೇರಿಯ ಹೋಲಿಕೆಯಲ್ಲಿ ಮನೆಯಿಂದ ಕೆಲಸ ಮಾಡುವಾಗ ನೌಕರರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.