ಕಠ್ಮಂಡು: ನೇಪಾಳದಲ್ಲಿ ಕಳೆದ ವಾರದಿಂದ ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 90 ಕ್ಕೆ ಏರಿಕೆಯಾಗಿದೆ. ಸುಮಾರು 31 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ದೇಶದ ಗೃಹ ಸಚಿವಾಲಯ ಗುರುವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರದಾದ್ಯಂತ 3,366 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪರಿಹಾರ ವಿತರಣೆ ಭರದಿಂದ ಸಾಗಿದೆ. ಜುಲೈ 11 ರಿಂದ ದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ದೇಶದ 31 ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ ಎಂದು ಸಚಿವಾಲಯ ತಿಳಿಸಿದೆ.


ಸರ್ಕಾರದ ಅಂಕಿಅಂಶಗಳ ಪ್ರಕಾರ, 27,000 ಪೊಲೀಸ್ ಸಿಬ್ಬಂದಿ, 8,000 ಸೇನಾ ಸಿಬ್ಬಂದಿ ಮತ್ತು 8150 ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಸಿಬ್ಬಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಸಜ್ಜುಗೊಳಿಸಲಾಗಿದೆ.


ರೌತಹತ್, ಧನುಷಾ, ಮಹೋತ್ರಿ ಮತ್ತು ದೋಲ್ಪಾ ಜಿಲ್ಲೆಗಳಲ್ಲಿ ಪ್ರಸ್ತುತ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಡೆಯುತ್ತಿವೆ. ಯಾವುದೇ ಸಂಭವನೀಯತೆಗಳನ್ನು ಪೂರೈಸಲು ಕಠ್ಮಂಡು, ಇಟಹರಿ ಮತ್ತು ಧನುಷಾದಲ್ಲಿ ಹೆಲಿಕಾಪ್ಟರ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ ಎನ್ನಲಾಗಿದೆ.


1, 2 ಮತ್ತು 3 ಪ್ರಾಂತ್ಯಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಲಲಿತ್‌ಪುರ, ಭೋಜ್‌ಪುರ ಮತ್ತು ರೌತಹತ್ ಪ್ರದೆಶಗಳಲ್ಲಿ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.


ಇದಲ್ಲದೆ, ನೈರ್ಮಲ್ಯದ ಕೊರತೆಯು ಸಾಂಕ್ರಾಮಿಕ ರೋಗಗಳ ಭೀತಿಯ ಭಯವನ್ನು ಹೆಚ್ಚಿಸಿದೆ.


ಏತನ್ಮಧ್ಯೆ, ನೇಪಾಳ ಸರ್ಕಾರ ವಿದೇಶಿ ನೆರವು ಪಡೆಯದಿರಲು ನಿರ್ಧರಿಸಿದೆ. ಬದಲಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.