Hindu Temple Attack: ಬಾಂಗ್ಲಾದೇಶದಲ್ಲಿ ಕಾಳಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು!
Hindu Temple Attacked in Bangladesh: ಕಾಳಿದೇವಿಯ ಶಿರವನ್ನು ದೇಗುಲದಿಂದ ಅರ್ಧ ಕಿಮೀ ದೂರದಲ್ಲಿ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಹೇಳಿದ್ದಾರೆ.
ಢಾಕಾ: ದಸರಾ ಹಬ್ಬದ ಮುಕ್ತಾಯದ ಬೆನ್ನಲ್ಲಿಯೇ ಪಶ್ಚಿಮ ಬಾಂಗ್ಲಾದೇಶದಲ್ಲಿ ಪ್ರಾಚೀನ ಕಾಲದ ಹಿಂದೂ ದೇವಾಲಯವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಾಂಗ್ಲಾದ ಜೆನೈದಾ ಜಿಲ್ಲೆಯ ದೌತಿಯಾ ಗ್ರಾಮದಲ್ಲಿರುವ ಕಾಳಿ ದೇಗುಲಕ್ಕೆ ನುಗ್ಗಿದ ಕಿಡಿಗೇಡಿಗಳು ದೇವಿಯ ವಿಗ್ರಹವನ್ನು ತುಂಡು ತುಂಡು ಮಾಡಿದ್ದಾರೆ ಎಂದು ವರದಿಯಾಗಿದೆ.
ಕಾಳಿದೇವಿಯ ಶಿರವನ್ನು ದೇಗುಲದಿಂದ ಅರ್ಧ ಕಿಮೀ ದೂರದಲ್ಲಿ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಕಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: 30ರ ಹರೆಯದ WWE ʼಟಫ್ ಎನಫ್ʼ ಫೈಟರ್ ನಿಧನ : ನಿನ್ನೆ ಆರೋಗ್ಯವಾಗಿದ್ದ ಲೀ ಇಂದಿಲ್ಲ..!
ಪ್ರಾಚೀನ ಯುಗದಿಂದಲೂ ಈ ಕಾಳಿ ದೇವಸ್ಥಾನವು ಹಿಂದೂಗಳ ಆರಾಧನೆಯ ಸ್ಥಳವಾಗಿತ್ತು ಎಂದು ಸುಕುಮಾರ್ ಕುಂದಾ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ 10 ದಿನಗಳ ವಾರ್ಷಿಕ ದುರ್ಗಾಪೂಜಾ ಉತ್ಸವ ದೇಶದಾದ್ಯಂತ ವಿವಿಧ ನದಿ ಘಾಟ್‌ಗಳಲ್ಲಿ ಮಂಗಳಕರ ವಿಜಯದಶಮಿಯಂದು ವಿಗ್ರಹಗಳ ನಿಮಜ್ಜನದೊಂದಿಗೆ ಮುಕ್ತಾಯಗೊಂಡ 24 ಗಂಟೆಗಳ ನಂತರ ಈ ಘಟನೆ ನಡೆದಿದೆ.
ಜೆನೈದಾದಲ್ಲಿರುವ ದೇವಸ್ಥಾನದಲ್ಲಿ ರಾತ್ರಿ ಈ ಘಟನೆ ನಡೆದಿದೆ ಎಂದು ಬಾಂಗ್ಲಾದೇಶದ ಪೂಜಾ ಆಚರಣೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಢಾಕಾ ವಿವಿಯಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕ ಚಂದನಾಥ್ ಪೊದ್ದಾರ್ ತಿಳಿಸಿದ್ದಾರೆ. ‘ಇದೊಂದು ಖಂಡನೀಯ ಮತ್ತು ದುರದೃಷ್ಟಕರ ಘಟನೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಜೆನೈದಾ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಬರ್ಮನ್ ಹೇಳಿದ್ದಾರೆ.
ಇದನ್ನೂ ಓದಿ: ಕ್ರೈಮಿಯಾದ ಪ್ರಮುಖ ಸೇತುವೆಯ ಮೇಲೆ ಟ್ರಕ್ ಬಾಂಬ್ ಸ್ಫೋಟ!
ಈ ಘಟನೆ ಹೊರತುಪಡಿಸಿದರೆ ಈ ವರ್ಷ ಬಾಂಗ್ಲಾದಾದ್ಯಂತ ದುರ್ಗಾ ಪೂಜೆ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಕಳೆದ ವರ್ಷ ದುರ್ಗಾ ಪೂಜೆ ಆಚರಣೆ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಘರ್ಷಣೆಯಲ್ಲಿ ಕನಿಷ್ಠ 6 ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಮಾ.17ರಂದು ಢಾಕಾದಲ್ಲಿನ ಇಸ್ಕಾನ್ ದೇಗುಲದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಬಾಂಗ್ಲಾ ದೇಶದ ಒಟ್ಟು 16.19 ಕೋಟಿ ಜನಸಂಖ್ಯೆಯ ಪೈಕಿ ಶೇ.10 ಮಂದಿ ಹಿಂದೂಗಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.