ಇಸ್ಲಾಮಾಬಾದ್: ಭಾರತದ ಜೊತೆಗಿನ ವ್ಯಾಪಾರ ಸಂಬಂಧದ ನಿಷೇಧವು ದೇಶದಲ್ಲಿ(ಪಾಕಿಸ್ತಾನ) ನಿರಂತರ ಬೆಲೆ ಏರಿಕೆಗೆ ಒಂದು ಕಾರಣವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಆರ್ಥಿಕ ಸಲಹಾ ತಂಡ ಹೇಳಿದೆ. ಡಾನ್ ನ್ಯೂಸ್ ವರದಿಯ ಪ್ರಕಾರ, ದೇಶದಲ್ಲಿ ಹಣದುಬ್ಬರ ತಲೆದೂರಲು ಭಾರತದೊಂದಿಗಿನ ವ್ಯಾಪಾರ ನಿರ್ಬಂಧವೆ ಪ್ರಮುಖ ಕಾರಣ ಎಂದಿರುವ ಸರ್ಕಾರದ ಆರ್ಥಿಕ ತಂಡ, ಇದಲ್ಲದೆ ಮಧ್ಯವರ್ತಿಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಕಾಯ್ದುಕೊಳ್ಳುವಲ್ಲಿ ರಾಜ್ಯಗಳು ವಿಫಲವಾಗಿರುವುದೂ ಕೂಡ ಇದಕ್ಕೆ ಕಾರಣವಾಗಿದೆ ಎಂದು ದೂಷಿಸಿದೆ. ಅಷ್ಟೇ ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಹಣದುಬ್ಬರ ಕಡಿಮೆಯಾಗುವ ಬಗ್ಗೆ ಅನುಮಾನವಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಬೆಲೆ ಏರಿಕೆ, ವಿಶೇಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಭಾರತದೊಂದಿಗೆ ವ್ಯಾಪಾರ ನಿಷೇಧ ಮತ್ತು ಹವಾಮಾನ ಸಂಬಂಧಿತ ಅಂಶಗಳು ಮತ್ತು ಮಧ್ಯವರ್ತಿಗಳ ಹಾವಳಿಯೇ ಕಾರಣ ಎಂದು ಕಂದಾಯ ಸಚಿವ ಹಮ್ಮದ್ ಅಜರ್ ಮಂಗಳವಾರ ಫೆಡರಲ್ ಕ್ಯಾಬಿನೆಟ್ ಸಭೆಯ ನಂತರ ಹೇಳಿದರು. ಸಾರ್ವಜನಿಕರಿಗೆ ಪರಿಹಾರ ಒದಗಿಸುವ ಸಲುವಾಗಿ, ಪ್ರಾಂತೀಯ ಸರ್ಕಾರಗಳೊಂದಿಗೆ 'ಅಗ್ಗದ ಮಾರುಕಟ್ಟೆ' ಸ್ಥಾಪಿಸಲು ಮತ್ತು ಮ್ಯಾಜಿಸ್ಟೀರಿಯಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದರು. ಜನವರಿಯಿಂದ ಫೆಬ್ರವರಿ ವರೆಗೆ ಹಣದುಬ್ಬರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದರು.


ಆರ್ಥಿಕತೆ ಬಿಕ್ಕಟ್ಟಿನ ಸ್ಥಿತಿಯಿಂದ ಅಲ್ಪಾವಧಿಯಲ್ಲಿಯೇ ಬೆಳವಣಿಗೆಯ ಸ್ಥಿತಿಗೆ ಬದಲಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದ  ಇಮ್ರಾನ್ ಖಾನ್ ಅವರ ಹಣಕಾಸು ಮತ್ತು ಆದಾಯದ ಸಲಹೆಗಾರ ಅಬ್ದುಲ್ ಹಫೀಜ್ ಶೇಖ್, ಅಂತರರಾಷ್ಟ್ರೀಯ ತೈಲ ಮತ್ತು ಇಂಧನ ಬೆಲೆಗಳಂತಹ ಕೆಲವು ಬೆಲೆ ಅಂಶಗಳು ಸರ್ಕಾರದ ನಿಯಂತ್ರಣವನ್ನು ಮೀರಿವೆ. ಆದರೆ ಇನ್ನೂ ಸಬ್ಸಿಡಿಗಳು, ಆದಾಯ ಬೆಂಬಲ ಕಾರ್ಯಕ್ರಮಗಳು, ಆರೋಗ್ಯ ವಿಮೆ ಮತ್ತು ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಸಾರ್ವಜನಿಕರಿಗೆ ಬೆಲೆ ಏರಿಕೆಯಿಂದ ಪರಿಹಾರ ಒದಗಿಸಲು ಸರ್ಕಾರದ ವತಿಯಿಂದ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.