ನವದೆಹಲಿ: ಪಾಕಿಸ್ತಾನವು ಭಯೋತ್ಪಾದಕತ್ವವನ್ನು ಹೊಂದಿದ್ದು, ನೆರೆಹೊರೆಯ ರಾಷ್ಟ್ರಗಳ ಬಗ್ಗೆ ಮಾತನಾಡುವ ಮೊದಲು ತನ್ನ ರಾಷ್ಟ್ರದಲ್ಲಿ ಭಯೋತ್ಪಾದಕತೆಯನ್ನು ಹತ್ತಿಕ್ಕುವ ಬಗ್ಗೆ ಗಮನ ಹರಿಸಲಿ ಎಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. 


COMMERCIAL BREAK
SCROLL TO CONTINUE READING

ಯುಎನ್ ಸಾಮಾನ್ಯ ಸಭೆಯ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಅವರು ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಮದ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಇನಾಂ ಗಂಭೀರ್ ತಿರುಗೇಟು ನೀಡಿದ್ದು, "ಪಾಕಿಸ್ತಾನವು ಭಯೋತ್ಪಾದಕತ್ವವನ್ನು ಹೊಂದಿದ್ದು, ಜಾಗತಿಕ ಭಯೋತ್ಪಾದನೆಯನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ಉದ್ಯಮವನ್ನು ಹೊಂದಿದೆ. ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಒಮರ್ ರನ್ನು ರಕ್ಷಿಸುವ ರಾಷ್ಟ್ರವಾಗಿದೆ. ಮೊದಲು ಇಂತಹ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಕುರಿತು ಗಮನ ಹರಿಸಲಿ" ಎಂದು  ಹೇಳಿದರು.


ಭಯೋತ್ಪಾದಕರು ಪಾಕಿಸ್ತಾನದ ಬೀದಿಗಳಲ್ಲಿ ನಿರ್ಭಯದಿಂದ ಸಂಚರಿಸುತ್ತಿದ್ದಾರೆ. ಭಯೋತ್ಪಾದನೆ ಮೂಲಕ ವಿಶ್ವದಾದ್ಯಂತ ಉಗ್ರರ ಚಟುವಟಿಕೆ ಹೆಚ್ಚಾಗುವಂತೆ ಮಾಡಿರುವ ದೇಶದಿಂದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಇನಾಂ ಗಂಭೀರ್ ಹೇಳಿದರು.



ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ತನ್ನ ರಾಷ್ಟ್ರದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹರಸಾಹಸ ಮಾಡುತ್ತಿರುವ ದೇಶ ಬೇರೆ ರಾಷ್ಟ್ರದ ಪ್ರಜಾಪ್ರಭುತ್ವ ಮತ್ತ್ತು ಮಾನವ ಹಕ್ಕು ರಕ್ಷಣೆ ಕುರಿತಂತೆ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ. ಪಾಕಿಸ್ತಾನವು ಮೊದಲು ತನ್ನ ರಾಷ್ಟ್ರದಲ್ಲಿ ಗಣನೀಯವಾಗಿರುವ ಉಗ್ರರ ಪಾತ್ರವನ್ನು ನಿಯಂತ್ರಿಸಿ, ತನ್ನದು ಭಯೋತ್ಪಾದಕ ರಾಷ್ಟ್ರವಲ್ಲಾ ಎಂಬುದನ್ನು ಇಡೀ ಜಗತ್ತಿಗೆ ತೋರಿಸಬೇಕಿದೆ ಎಂದು ಇನಾಂ ಗಂಭೀರ್ ಹೇಳಿದರು.