ರಷ್ಯಾದಿಂದ ಅಗ್ಗದ ತೈಲ ಖರೀದಿಗೆ ಭಾರತ ಸಿದ್ಧತೆ! ನಿರ್ಬಂಧದ ತೂಗುಗತ್ತಿ?
ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ರಫ್ತು ಮಾಡದಂತೆ ಭಾರತ ಸೇರಿದಂತೆ ಇತರ ದೇಶಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಇದು ಉಕ್ರೇನ್ನೊಂದಿಗಿನ ಯುದ್ಧಕ್ಕೆ ರಷ್ಯಾ ಹಣವನ್ನು ನೀಡುತ್ತದೆ ಎಂಬುವುದು ಆ ದೇಶಗಳ ನಂಬಿಕೆಯಾಗಿದೆ.
ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ರಷ್ಯಾ(Ukraine Russia War)ದಿಂದ ಅಗ್ಗದ ತೈಲ ಖರೀದಿಗೆ ಭಾರತವು ಸಿದ್ಧತೆ ನಡೆಸಿದೆ. ಆದರೆ ಭಾರತದ ಮೇಲೆ ನಿರ್ಬಂಧಗಳ ತೂಗುಗತ್ತಿ ನೇತಾಡುತ್ತಿದೆ. ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವು ದೇಶಗಳು ನಿರ್ಬಂಧಿತ ವ್ಯಾಪಾರವನ್ನು ಎದುರಿಸಬಹುದು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಇಂಧನ ಖರೀದಿಸುವ ಭಾರತದ ಕಾನೂನುಬದ್ಧ ಮಾರ್ಗವನ್ನು ರಾಜಕೀಯಗೊಳಿಸಬಾರದು ಅನ್ನೋ ಅಭಿಪ್ರಾಯಗಳು ಕೇಳಿಬರುತ್ತಿವೆ.
ಸರ್ಕಾರದ ಮೂಲಗಳ ಪ್ರಕಾರ ಭಾರತವು ಸ್ಪರ್ಧಾತ್ಮಕ ಇಂಧನ ಮೂಲಗಳ ಮೇಲೆ(ಅಗ್ಗದ ದರದಲ್ಲಿ ತೈಲ ಖರೀದಿ)ಕೇಂದ್ರೀಕರಿಸಿದೆ ಮತ್ತು ಎಲ್ಲಾ ತೈಲ ಉತ್ಪಾದಕರಿಂದ ಕೊಡುಗೆಗಳನ್ನು ಸ್ವಾಗತಿಸಿದೆ. ಭೌಗೋಳಿಕ ರಾಜಕೀಯ ಬೆಳವಣಿಗೆಗಳು ದೇಶದ ಇಂಧನ ಭದ್ರತೆಗೆ ದೊಡ್ಡ ಸವಾಲನ್ನು ಒಡ್ಡಿವೆ. ಹೀಗಾಗಿ ಯಾವ ದೇಶ ತನಗೆ ಕಡಿಮೆ ದರದಲ್ಲಿ ತೈಲ ಸರಬರಾಜು ಮಾಡುತ್ತೋ ಆ ದೇಶದಿಂದ ಭಾರತ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರದ ಹೆಗ್ಗಳಿಕೆಗೆ ಪಾತ್ರವಾದ ಈ ದೇಶ...!
ಭಾರತದ ‘ತೈಲ ಖರೀದಿ’ ನಿಲುವಿಗೆ ಟೀಕೆ
ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಲು(Russian Crude Oil) ಮುಕ್ತ ಮಾರ್ಗಗಳನ್ನು ಇಟ್ಟುಕೊಂಡಿರುವ ಭಾರತದ ನಿಲುವಿಗೆ ಟೀಕೆ ವ್ಯಕ್ತವಾಗಿದೆ. ಉಕ್ರೇನ್ ಮೇಲಿನ ಮಿಲಿಟರಿ ದಮನಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ತೈಲ ಮತ್ತು ಅನಿಲ ಆಮದುಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಇದರ ನಂತರ ರಷ್ಯಾ ಕಳೆದ ವಾರ ಭಾರತ ಮತ್ತು ಇತರ ದೇಶಗಳಿಗೆ ಅಗ್ಗದ ತೈಲವನ್ನು ನೀಡಿದೆ.
ಕಚ್ಚಾ ತೈಲ ಬೆಲೆ ಏರಿಕೆ
ಮೂಲಗಳು ಪ್ರಕಾರ ‘ಭಾರತವು ಸ್ಪರ್ಧಾತ್ಮಕ ಇಂಧನ ಮೂಲಗಳ ಮೇಲೆ ಗಮನ ಕೇಂದ್ರೀಕರಿಸುವಿಕೆಯನ್ನು ಮುಂದುವರಿಸುತ್ತದೆ. ಎಲ್ಲಾ ವಿತರಕ ದೇಶಗಳಿಂದ ಇಂತಹ ಕೊಡುಗೆಗಳನ್ನು ಭಾರತವು ಸ್ವಾಗತಿಸುತ್ತದೆ. ತೈಲ ಖರೀದಿಯ ಅತ್ಯುತ್ತಮ ಆಯ್ಕೆ ಹುಡುಕಲು ಭಾರತೀಯ ವ್ಯಾಪಾರಿಗಳು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉಕ್ರೇನ್ ಸಂಘರ್ಷ(Ukraine Russia War)ದಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದು ಭಾರತದ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಸಹಜವಾಗಿಯೇ ಸ್ಪರ್ಧಾತ್ಮಕ ದರದಲ್ಲಿ ತೈಲವನ್ನು ಖರೀದಿಸುವ ಒತ್ತಡವನ್ನು ಸೃಷ್ಟಿಸಿದೆ ಎಂದು ಮೂಲಗಳು ತಿಳಿಸಿವೆ.
30 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಸಿದ ಇಂಡಿಯನ್ ಆಯಿಲ್
ಮಾಹಿತಿಯ ಪ್ರಕಾರ ತೈಲದ ವಿಷಯದಲ್ಲಿ ಸ್ವಾವಲಂಬಿಯಾಗಿರುವ ದೇಶಗಳು ಅಥವಾ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದು ಆ ದೇಶಗಳ ವ್ಯವಹಾರದ ಮೇಲೆ ನಿಷೇಧವನ್ನು ಕಾನೂನುಬದ್ಧವಾಗಿ ಸಮರ್ಥಿಸಲು ಸಾಧ್ಯವಿಲ್ಲ. ಇಂಧನ ಖರೀದಿಸುವ ಭಾರತದ ಕಾನೂನುಬದ್ಧ ಮಾರ್ಗವನ್ನು ರಾಜಕೀಯಗೊಳಿಸಬಾರದು. ಇಂಡಿಯನ್ ಆಯಿಲ್ ಕಳೆದ ವಾರ ರಷ್ಯಾದಿಂದ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪುಟಿನ್ ಸಾರಿದ ಸಮರದಲ್ಲಿ ಮಡಿದವರೆಷ್ಟು? ಖೆರ್ಸನ್ ಪ್ರದೇಶದ ಸಂಪೂರ್ಣ ಆಡಳಿತ ರಷ್ಯಾ ಪಾಲಾಗಿದ್ದು ಹೇಗೆ?
ವ್ಲಾದಿಮಿರ್ ಪುಟಿನ್(Vladimir Putin) ಅವರ ಯುದ್ಧ ನೀತಿ(Russia Ukraine Crisis)ಗೆ ಹಣಕಾಸು ಒದಗಿಸುವುದರಿಂದ ರಷ್ಯಾದ ತೈಲ ಮತ್ತು ಅನಿಲದಿಂದ ಎಲ್ಲಾ ದೇಶಗಳು ಪ್ರತ್ಯೇಕಗೊಳ್ಳಬೇಕೆಂದು ಬ್ರಿಟನ್ ಬಯಸಿದೆ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಹೇಳಿದ್ದಾರೆ. ರಷ್ಯಾ ಭಾರತಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡುತ್ತದೆ, ಇದು ದೇಶದ ಅವಶ್ಯಕತೆಯ ಶೇ.1ಕ್ಕಿಂತ ಕಡಿಮೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಭಾರತಕ್ಕೆ ರಷ್ಯಾ ಪ್ರಮುಖ ತೈಲ ಪೂರೈಕೆದಾರರಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ರೂಪಾಯಿ-ರೂಬಲ್ ಒಪ್ಪಂದದ ಆಧಾರದ ಮೇಲೆ ಖರೀದಿ ಮಾಡಬಹುದೇ ಎಂದು ಅವರನ್ನು ಕೇಳಿದಾಗ, ಈ ಆಫರ್‌ನ ವಿವರಗಳ ಬಗ್ಗೆ ತನಗೆ ತಿಳಿದಿಲ್ಲವೆಂದು ಅವರು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.