`ಅಸಲಿ ಅಯೋಧ್ಯೆ` ಹೇಳಿಕೆ ನೀಡಿ ಸಿಲುಕಿಕೊಂಡ PM ಓಲಿ, ನೇಪಾಳದ ವಿದೇಶಾಂಗ ಸಚಿವಾಲಯ ಹೇಳಿದ್ದೇನು ಗೊತ್ತಾ..?
ನೇಪಾಳದಲ್ಲಿ ನಿಜವಾದ ಅಯೋಧ್ಯೆ ಇದೆ ಎಂಬ ಹೇಳಿಕೆ ನೀಡಿ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತೀವ್ರ ಪೇಚಿಗೆ ಸಿಲುಕಿದ್ದಾರೆ.
ನವದೆಹಲಿ : ನೇಪಾಳದಲ್ಲಿ ನಿಜವಾದ ಅಯೋಧ್ಯೆ ಇದೆ ಎಂಬ ಹೇಳಿಕೆ ನೀಡಿ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತೀವ್ರ ಪೇಚಿಗೆ ಸಿಲುಕಿದ್ದಾರೆ. ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲದ ಈ ಅಸಂಬದ್ಧ ಹೇಳಿಕೆಯನ್ನು ನೀಡಿ ಓಲಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಓಲಿ ಅವರ ಈ ಹೇಳಿಕೆಯ ಕುರಿತು ಇದೀಗ ನೇಪಾಳದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದ್ದು, ರಾಜಕೀಯ ವಿಷಯಕ್ಕೆ ಮತ್ತು ಓಲಿ ನೀಡಿರುವ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಇದರಿಂದ ಯಾರೊಬ್ಬರ ಭಾವನೆಯನ್ನು ಕೆಣಕುವ ಉದ್ದೇಶ ಅವರದ್ದಾಗಿರಲಿಲ್ಲ ಮತ್ತು ಅವರ ಹೇಳಿಕೆಯ ಉದ್ದೇಶ ಅಯೋಧ್ಯೆಯ ಮಹತ್ವ ಕಡಿಮೆ ಮಾಡುವುದಾಗಲಿ ಅಥವಾ ಸಾಂಸ್ಕೃತಿಕ ಮೌಲ್ಯಗಳನ್ನು ಕಡಿಮೆ ಮಾಡುವುದಾಗಿ ಇರಲಿಲ್ಲ ಎಂದು ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೇಪಾಳದ ವಿದೇಶಾಂಗ ಇಲಾಖೆ ಶ್ರೀರಾಮಚಂದ್ರನ ಜನ್ಮಸ್ಥಾನದ ಕುರಿತು ಹಲವು ಮಿಥ್ಯಗಳು ಹಾಗೂ ಸಂದರ್ಭಗಳು ಅಸ್ತಿತ್ವದಲ್ಲಿದ್ದು, ಪ್ರಧಾನಿ ಓಲಿ ಈ ಕುರಿತು ಅಧಿಕ ಅಧ್ಯಯನ ಹಾಗೂ ಸಂಶೋಧನೆ ನಡೆಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಿದ್ದರು ಎಂದಿದೆ.
ಓಲಿ ಹೇಳಿದ್ದೇನು?
ನೇಪಾಳದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಓಲಿ "ನಿಜವಾದ' ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಾರತದಲ್ಲಿಲ್ಲ. ಶ್ರೀರಾಮ ನೇಪಾಳದ ದಕ್ಷಿಣ ಭಾಗದಲಿರುವ ಥೋರಿಯಲ್ಲಿ ಜನಸಿದ್ದಾನೆ" ಎಂದು ಹೇಳಿದ್ದರು. ಕಠ್ಮಂಡುವಿನಲ್ಲಿರುವ ಪ್ರಧಾನ ನಿವಾಸದಲ್ಲಿ ನೇಪಾಳಿ ಕವಿ ಭಾನುಭಕ್ತ ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಓಲಿ, "ನೇಪಾಳ ಸಾಂಸ್ಕೃತಿಕ ಅತಿಕ್ರಮಣಕ್ಕೆ ಬಲಿಯಾಗಿದೆ ಮತ್ತು ಅದರ ಇತಿಹಾಸವನ್ನು ಹಾಳು ಮಾಡಲಾಗಿದೆ" ಎಂದು ಹೇಳಿದ್ದರು.
1814ರಲ್ಲಿ ನೇಪಾಳದ ತಾನಹು ಎಂಬಲ್ಲಿ ಭಾನುಭಕ್ತ ಜನಿಸಿದ್ದರು ಮತ್ತು ವಾಲ್ಮೀಕಿ ರಾಮಾಯಣವನ್ನು ಅವರು ನೇಪಾಳಿ ಭಾಷೆಗೆ ಅನುವಾದಿಸಿದ್ದರು. ಈ ವೇಳೆ ಮಾತನಾಡಿದ್ದ ಓಲಿ, " ವಾಸ್ತವಿಕವಾಗಿ ಅಯೋಧ್ಯೆ ಬೀರ್ ಗಂಜ್ ನ ಪಶ್ಚಿಮ ಭಾಗದಲ್ಲಿರುವ ಥೋರಿ ಬಳಿ ಇದೆ. ಆದರೆ, ಭಾರತ ಶ್ರೀರಾಮನ ಜನ್ಮಸ್ಥಾನ ಭಾರತದಲ್ಲಿದೆ ಎಂದು ಹೇಳುತ್ತದೆ" ಅಷ್ಟೇ ಅಲ್ಲ "ಇಷ್ಟೊಂದು ದೂರದಲ್ಲಿರುವ ವಧು ಹಾಗೂ ವರರ ವಿವಾಹ ಅಂದಿನ ಕಾಲದಲ್ಲಿ ಸಂಭವವಿರಲಿಲ್ಲ. ಏಕೆಂದರೆ ಆಗ ಕುಟುಂಬಸ್ಥರ ಬಳಿ ಸಂಪರ್ಕಕ್ಕಾಗಿ ಯಾವುದೇ ಸಾಧನಗಳಿರಲಿಲ್ಲ ಎಂದು ಓಲಿ ತಮ್ಮ ತರ್ಕ ಮಂಡಿಸಿದ್ದರು. "ಬೀರ್ ಗಂಜ್ ಬಳಿ ಸದ್ಯ ಇರುವ ಥೋರಿ ಎಂಬ ಸ್ಥಳವೇ ವಾಸ್ತವಿಕ ರೂಪದಲ್ಲಿ ಶ್ರೀರಾಮನ ಅಯೋಧ್ಯೆಯಾಗಿದೆ. ಅಲ್ಲಿಯೇ ಶ್ರೀರಾಮ ಹುಟ್ಟಿದ್ದ. ಭಾರತದಲ್ಲಿ ಅಯೋಧ್ಯೆಯ ಕುರಿತು ದೊಡ್ಡ ವಿವಾದವಿದೆ. ಆದರೆ, ನಮ್ಮಲ್ಲಿ ಅಯೋಧ್ಯೆಯ ಕುರಿತು ಯಾವುದೇ ವಿವಾದಗಳಿಲ್ಲ" ಎಂದು ಓಲಿ ತಮ್ಮ ತರ್ಕ ಮಂಡಿಸಿದ್ದರು.