ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಮಸೂದೆ (Citizenship Amendment Bill ) ಅಂಗೀಕಾರವಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದಿಂದ ಆಕ್ಷೇಪ ವ್ಯಕ್ತವಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ಟ್ವೀಟ್ ಮಾಡುವ ಮೂಲಕ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದಾರೆ. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಟ್ವೀಟ್‌ನಲ್ಲಿ ಇಮ್ರಾನ್ ಖಾನ್ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಮೋದಿ ಸರ್ಕಾರದಿಂದ ಉತ್ತೇಜಿಸಲ್ಪಟ್ಟ ಆರ್‌ಎಸ್‌ಎಸ್‌ನ "ಹಿಂದೂ ರಾಷ್ಟ್ರ" ವಿನ್ಯಾಸದ ಭಾಗವಾಗಿದೆ ಎಂದು ಇಮ್ರಾನ್ ಖಾನ್ ವಾಗ್ಧಾಳಿ ನಡೆಸಿದ್ದಾರೆ.


ಇದಕ್ಕೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿ ಈ ಮಸೂದೆಯನ್ನು ವಿರೋಧಿಸಿತ್ತು ಎಂಬುದು ಉಲ್ಲೇಖನೀಯ. ಈ ಮಸೂದೆ ಉಭಯ ದೇಶಗಳ ನಡುವಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ಮಸೂದೆಯು ವಿಶೇಷವಾಗಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.