ಕೇರಳಕ್ಕೆ ಮಾನವೀಯ ನೆರವು ನೀಡಲು ಪಾಕಿಸ್ತಾನ ಸಿದ್ಧ: ಇಮ್ರಾನ್ ಖಾನ್
ಕೇರಳಕ್ಕೆ ಅಗತ್ಯವಿರುವ ಯಾವುದೇ ಮಾನವೀಯ ನೆರವು ಒದಗಿಸಲು ನಾವು ಸಿದ್ಧರಾಗಿರುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಮಾನವೀಯ ನೆರವು ನೀಡಲು ಪಾಕಿಸ್ತಾನ ಸರ್ಕಾರ ಬದ್ಧ ಎಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಪ್ರವಾಹದಿಂದ ತತ್ತರಿಸಿಹೋಗಿರುವ ಕೇರಳದ ಪರಿಸ್ಥಿತಿ ಕಂಡು ಮರುಗಿಉವ ನೆರೆಯ ರಾಷ್ಟ್ರ ಪಾಕಿಸ್ತಾನವೂ ಮರುಗಿದ್ದು, ಪ್ರವಾಹ ಪರಿಹಾರ ಕಾರ್ಯಕ್ಕೆ ಮಾನವೀಯ ನೆರವು ನೀಡುವುದಾಗಿ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, "ಪಾಕಿಸ್ತಾನದ ಜನರ ಪರವಾಗಿ, ಭಾರತದ ಕೇರಳದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನಮ್ಮ ಪ್ರಾರ್ಥನೆಯನ್ನು ಮತ್ತು ಶುಭ ಹಾರೈಕೆಗಳನ್ನು ಕಳುಹಿಸುತ್ತೇವೆ. ಕೇರಳಕ್ಕೆ ಅಗತ್ಯವಿರುವ ಯಾವುದೇ ಮಾನವೀಯ ನೆರವು ಒದಗಿಸಲು ನಾವು ಸಿದ್ಧರಾಗಿರುತ್ತೇವೆ" ಎಂದಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಪ್ರವಾಹಕ್ಕೆ ತುತ್ತಾದವರ ಸಂಖ್ಯೆ 23೭ಕ್ಕೆ ತಲುಪಿದ್ದು, 14 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ ಸುಮಾರು 20 ಸಾವಿರ ಕೋಟಿ ರೂ.ಗಳಳಷ್ಟು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಈಗಾಗಲೇ ಪರಿಹಾರ ಕಾರ್ಯಕ್ಕಾಗಿ 2,600 ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದರೂ, ಇದುವರೆಗೂ 600 ಕೋಟಿ ರೂ.ಗಳನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ.
ಈಗಾಗಲೇ ಇತರ ರಾಷ್ಟ್ರಗಳಿಂದ ಕೇರಳಕ್ಕೆ ಆರ್ಥಿಕ ನೆರವನ್ನು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. "ಪ್ರಸ್ತುತ ಚಾಲ್ತಿಯಲ್ಲಿರುವ ನೀತಿ ನಿಯಮಗಳ ಅನುಸಾರ, ದೇಶಿಯ ಪ್ರಯತ್ನಗಳ ಮೂಲಕ ಪರಿಹಾರ ಮತ್ತು ಪುನರ್ವಸತಿ ಅಗತ್ಯತೆಗಳನ್ನು ಪೂರೈಸಲು ಭಾರತ ಸರ್ಕಾರ ಬದ್ಧವಾಗಿದೆ" ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಹೀಗಾಗಿಯೇ ಯುಎಇ ಕೇರಳ ಪುನರ್ವಸತಿಗಾಗಿ ನೀಡಲು ಸಿದ್ಧವಿದ್ದ 700 ಕೋಟಿ ರೂಪಾಯಿ ನೆರವನ್ನೂ ಭಾರತ ತಿರಸ್ಕಿರಿಸಿದೆ ಎನ್ನಲಾಗಿದೆ.