ಪಾಕ್ ಪ್ರಿಯರ ಪಿತೂರಿ ಯಶಸ್ವಿಯಾಗದು
ಪಾಕಿಸ್ತಾನದ ವಿರುದ್ಧದ ವಿಮೋಚನಾ ಯುದ್ಧದಲ್ಲಿ ಬಾಂಗ್ಲಾದೇಶ ಹೋರಾಡಿ ಜಯಗಳಿಸಿದೆ ಎಂದು ಅವಾಮಿ ಲೀಗ್‌ನ ಅಧ್ಯಕ್ಷರೂ ಆಗಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನೆನಪಿಸಿಕೊಂಡರು.
ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶ ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ಹಾಳುಮಾಡಲು ಮತ್ತು ದೇಶವನ್ನು ವಿಫಲ ರಾಜ್ಯವನ್ನಾಗಿ ಮಾಡಲು ಹೊರಟಿರುವ ಪಾಕಿಸ್ತಾನ(Pakistan) ಪ್ರಿಯರ ಪಿತೂರಿಗಳು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಬಾಂಗ್ಲಾದೇಶ(Bangladesh) ಪ್ರಧಾನಿ ಶೇಖ್ ಹಸೀನಾ ಮಂಗಳವಾರ ಹೇಳಿದ್ದಾರೆ.
ಅವಾಮಿ ಲೀಗ್ ಆಯೋಜಿಸಿದ್ದ ಬಂಗಬಂಧು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ, "ಪಾಕಿಸ್ತಾನದ ಆಕ್ರಮಣ ಪಡೆಗಳ ಸಹಯೋಗಿಗಳು ಮತ್ತು ಪಾಕಿಸ್ತಾನವನ್ನು ಇನ್ನೂ ಪ್ರೀತಿಸುವವರು ಬಾಂಗ್ಲಾದೇಶದ ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ವಿಫಲಗೊಳಿಸಲು ಮತ್ತು ದೇಶವನ್ನು ವಿಫಲ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಆದರೆ ಅವರ ಪಿತೂರಿಗಳು ಯಶಸ್ವಿಯಾಗಲು ನಾವು ಅನುಮತಿಸುವುದಿಲ್ಲ" ಎಂದು ಢಾಕಾ ಟ್ರಿಬ್ಯೂನ್ ಹಸೀನಾ ಅವರನ್ನು ಉಲ್ಲೇಖಿಸಿ ತಿಳಿಸಿದೆ.
ಅವಾಮಿ ಲೀಗ್‌ನ ಅಧ್ಯಕ್ಷರೂ ಆಗಿರುವ ಪ್ರಧಾನಿ, ಪಾಕಿಸ್ತಾನದ ವಿರುದ್ಧದ ವಿಮೋಚನಾ ಯುದ್ಧದಲ್ಲಿ ಬಾಂಗ್ಲಾದೇಶ ಹೋರಾಡಿ ಜಯಗಳಿಸಿದ್ದನ್ನು ನೆನಪಿಸಿಕೊಂಡರು. “ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ನಾವು ಹೇಗಾದರೂ ಪಾಕಿಸ್ತಾನಕ್ಕಿಂತ ಮೇಲಿರುತ್ತೇವೆ ಎಂಬುದು ನಮ್ಮ ಗುರಿಯಾಗಿದೆ." "ನಾವು ಎಲ್ಲರಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ. ಈ ಯಶಸ್ಸನ್ನು ನಾವು ಮುಂದುವರಿಸಬೇಕು" ಎಂದು ದೇಶದ ಜನತೆಗೆ ಕರೆ ನೀಡಿದ ಅವರು, ದೇಶ ಕಷ್ಟಪಟ್ಟು ಸಂಪಾದಿಸಿರುವ ಹೆಗ್ಗಳಿಕೆಯನ್ನು ಹಾಳು ಮಾಡುವ ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.