ಆರೆಸ್ಸೆಸ್ ನ್ನು ನಾಜಿಗಳಿಗೆ ಹೋಲಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ಹಿನ್ನಲೆಯಲ್ಲಿ ಭಾರತದ ಸರ್ಕಾರದ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ಹಿನ್ನಲೆಯಲ್ಲಿ ಭಾರತದ ಸರ್ಕಾರದ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಇಮ್ರಾನ್ ಖಾನ್ ಕಾಶ್ಮೀರದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳಿಗೆ ಆರೆಸೆಸ್ಸ್ ಕಾರಣ ಎಂದು ದೂರಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿಗಳ ಮೇಲೆ ಕರ್ಪ್ಯೂ ವಿದಿಸುವಿಕೆ, ದಮನ ಮತ್ತು ನರಮೇಧವು ನಾಜಿ ಸಿದ್ಧಾಂತದಿಂದ ಪ್ರೇರಿತವಾದ ಆರ್ಎಸ್ಎಸ್ ಸಿದ್ಧಾಂತಕ್ಕೆ ನಿಖರವಾಗಿ ತೆರೆದುಕೊಳ್ಳುತ್ತಿದೆ, ಜನಾಂಗೀಯ ಶುದ್ಧೀಕರಣದ ಮೂಲಕ ಕಾಶ್ಮೀರದ ಚಿತ್ರಣವನ್ನೇ ಬದಲಾಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಶ್ನೆ ನನ್ನ ಏನೆಂದರೆ ಹಿಟ್ಲರ್ ಮ್ಯೂನಿಚ್ ನಲ್ಲಿ ಮಾಡಿದಂತೆ ಜಗತ್ತು ಇದೆಲ್ಲವನ್ನು ಸುಮ್ಮನೆ ನೋಡುತ್ತಾ ಇರುತ್ತದೆಯೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಮುಂದುವರೆದು ಅವರು 'ನಾಜಿ ಆರ್ಯರ ಪ್ರಾಬಲ್ಯದ ಸಿದ್ದಾಂತದಂತೆ ಈ ಆರೆಸೆಸ್ಸ್ ನ ಸಿದ್ಧಾಂತವು ಜಮ್ಮು ಕಾಶ್ಮೀರಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ ಎನ್ನುವ ಭಯ ನನಗಿದೆ. ಬದಲಾಗಿ ಅದು ಭಾರತದಲ್ಲಿರುವ ಮುಸ್ಲಿಮರನ್ನು ಹತ್ತಿಕ್ಕಲು ಕಾರಣವಾಗುತ್ತದೆ. ಇದು ಕೊನೆಗೆ ಪಾಕಿಸ್ತಾನವನ್ನು ಗುರಿ ಮಾಡುತ್ತದೆ. ಇದೊಂದು ರೀತಿ ಹಿಟ್ಲರ್ ನ ಲೆಬೆನ್ಸ್‌ರಾಮ್‌ನ ಹಿಂದು ಆವೃತ್ತಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರ ಈ ಸರಣಿ ಟ್ವೀಟ್ ಗಳು ಪ್ರಮುಖವಾಗಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿ ಹಿಂತೆಗೆದುಕೊಂಡು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಹಿನ್ನಲೆಯಲ್ಲಿ ಬಂದಿವೆ.