ನವದೆಹಲಿ: ಬುಧವಾರ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ನಲ್ಲಿ ಭಾರತ 133ನೇ ಸ್ಥಾನದಲ್ಲಿದ್ದು 11 ಸ್ಥಾನಗಳ ಕುಸಿತ ಕಂಡಿದೆ. ಪಾಕಿಸ್ತಾನ, ನೇಪಾಳ ಮತ್ತು ಇತರ ಸಾರ್ಕ್ ದೇಶಗಳಿಗಿಂತಲೂ ಭಾರತದಲ್ಲಿ ಸಂತೋಷದ ಪ್ರಮಾಣ ಕಡಿಮೆ ಇದೆ ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ. 


COMMERCIAL BREAK
SCROLL TO CONTINUE READING

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್(ಎಸ್ಡಿಎಸ್ಎನ್)ನ 2018ರ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ನಲ್ಲಿ 156 ದೇಶಗಳಲ್ಲಿ ಜನರ ಆರೋಗ್ಯಕರ ಜೀವಿತಾವಧಿ, ತಲಾ ಆದಾಯ, ಸಾಮಾಜಿಕ ಬೆಂಬಲ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರದ ಮಟ್ಟ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ವರದಿ ತಯಾರಿಸಲಾಗಿದೆ. 


ಇದರಲ್ಲಿ ಕಳೆದ ವರ್ಷ 122ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 133ನೇ ಸ್ಥಾನವನ್ನು ಪಡೆದುಕೊಂಡಿದೆ. ನೆರೆಯ ರಾಷ್ಟ್ರಗಳಾದ ಭೂತಾನ್ (97), ನೇಪಾಳ (101), ಬಾಂಗ್ಲಾದೇಶ (115) ಮತ್ತು ಶ್ರೀಲಂಕಾ (116) ಕೂಡಾ ಸಂತುಷ್ಟ ದೇಶಗಳಾಗಿವೆ. ಅಷ್ಟೇ ಅಲ್ಲ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿರುವ ಪಾಕಿಸ್ತಾನ 75 ನೇ ಸ್ಥಾನದಲ್ಲಿದ್ದು, ಪಾಕಿಸ್ತಾನಿಯರು ಭಾರತೀಯರಿಗಿಂತ ತುಂಬಾ ಖುಷಿಯಾಗಿರುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲ, ನೆರೆಯ ಚೀನಾ ಕೂಡ 86ನೇ ಸ್ಥಾನದಲ್ಲಿದೆ. ಅತ್ಯಂತ ಸಂತುಷ್ಟ ರಾಷ್ಟ್ರಗಳಲ್ಲಿ ಫಿನ್ ಲ್ಯಾಂಡ್ ಮೊದಲ ಸ್ಥಾನದಲ್ಲಿದೆ.