ಇಂದು ವಿಶ್ವಸಂಸ್ಥೆಯಲ್ಲಿ ಮೋದಿ, ಇಮ್ರಾನ್ ಖಾನ್ ಭಾಷಣ
ಪ್ರಧಾನಿ ಮೋದಿ ಹಾಗೂ ಪಾಕ್ ನ ಪ್ರಧಾನಿ ಇಮ್ರಾನ್ ಖಾನ್ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ಹಾಗೂ ಪಾಕ್ ನ ಪ್ರಧಾನಿ ಇಮ್ರಾನ್ ಖಾನ್ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.
ಕಾಶ್ಮೀರಕ್ಕೆ 370 ನೇ ವಿಧಿ ಮೂಲಕ ಇದ್ದ ವಿಶೇಷ ಸ್ಥಾನವನ್ನು ಹಿಂತೆಗೆದುಕೊಂಡ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುತ್ತಿರುವ ಮೋದಿ ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಇನ್ನೊಂದೆಡೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರವನ್ನು ಅಂತರಾಷ್ಟ್ರೀಯವಾಗಿ ಬಿಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಅಧಿವೇಶನ ಭಾರಿ ಮಹತ್ವ ಪಡೆದಿದೆ.
ಪ್ರಧಾನಿ ಮೋದಿ ಈ ಹಿಂದೆ 2014 ರಲ್ಲಿ ಚುನಾವಣೆ ಗೆದ್ದ ನಂತರ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು. ಈಗ ಅವರು ಮೇ ತಿಂಗಳಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಸುಮಾರು 112 ರಾಜ್ಯ ಮುಖ್ಯಸ್ಥರು, ಸುಮಾರು 48 ಸರ್ಕಾರದ ಮುಖ್ಯಸ್ಥರು ಮತ್ತು 30 ಕ್ಕೂ ಹೆಚ್ಚು ವಿದೇಶಾಂಗ ಮಂತ್ರಿಗಳು ನ್ಯೂಯಾರ್ಕ್ ಗೆ ಆಗಮಿಸುತ್ತಾರೆ ಎಂದು ಆರಂಭಿಕ ಭಾಷಣಕಾರರ ಪಟ್ಟಿ ಸೂಚಿಸುತ್ತದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಎಸ್ಎ ಜೈಶಂಕರ್ ಅವರ ಆರಂಭಿಕ ಹೇಳಿಕೆಯನ್ನು ಗುರುವಾರ ಸಾರ್ಕ್ ಕೌನ್ಸಿಲ್ ಆಫ್ ವಿದೇಶಾಂಗ ಮಂತ್ರಿಗಳಲ್ಲಿ ಬಹಿಷ್ಕರಿಸಿದ ಒಂದು ದಿನದ ನಂತರ ಇದು ಬಂದಿದೆ.