ರಷ್ಯಾದ ಚಂದ್ರ ಅನ್ವೇಷಣಾ ಯೋಜನೆಯಾದ ಲೂನಾ-25 ಚಂದ್ರ ಮೇಲ್ಮೈಗೆ ಪತನಗೊಂಡು, ವೈಫಲ್ಯ ಕಂಡಿದೆ.


COMMERCIAL BREAK
SCROLL TO CONTINUE READING

ಈ ಬಾಹ್ಯಾಕಾಶ ಅನ್ವೇಷಣಾ ಯೋಜನೆ ಚಂದ್ರನ ಮೇಲೆ ಮಾನವರಿಗೆ ಶಾಶ್ವತ ನೆಲೆ ನಿರ್ಮಿಸಲು ಸಾಧ್ಯವೇ ಎಂದು ಪರೀಕ್ಷಿಸಲು ಉದ್ದೇಶಿಸಿತ್ತು. ಆದರೆ 'ಊಹಿಸಲಾಗದ ಕಕ್ಷೆಗೆ' ತಿರುಗಿದ ಲೂನಾ-25 ಪತನಗೊಂಡಿತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಮಾಹಿತಿ ನೀಡಿದೆ. ಲೂನಾ-25 ಚಂದ್ರನ ಮೇಲ್ಮೈಗೆ ಪತನಗೊಂಡು, ವೈಫಲ್ಯ ಕಂಡಿತ್ತು.


ಮಾನವರಹಿತ ರೋಬೋಟ್ ಲ್ಯಾಂಡರ್ ಈ ತಿಂಗಳ ಆರಂಭದಲ್ಲಿ ಉಡಾವಣೆಗೊಂಡಿತ್ತು. ಅದು ಅನಿಯಂತ್ರಿತವಾಗಿ ತಿರುಗಿ, ವಿಫಲವಾಯಿತು ಎಂದು ರಾಸ್‌ಕಾಸ್ಮೋಸ್ ತಿಳಿಸಿದೆ.


ರಾಸ್‌ಕಾಸ್ಮೋಸ್ ತಜ್ಞರು ಶನಿವಾರದಂದು ಒಂದು ಅಸಹಜ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದರು. ಲೂನಾ-25 ಯೋಜನೆ ಬಹುತೇಕ ಐವತ್ತು ವರ್ಷಗಳ ಬಳಿಕ ರಷ್ಯಾ ಕೈಗೊಂಡ ಮೊದಲ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಪ್ರಯತ್ನವಾಗಿತ್ತು.


ರಷ್ಯಾ ತನ್ನ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು, ಒಂದು ವರ್ಷ ಕಾಲ ಕಳೆದು, ಅಲ್ಲಿನ ಕಲ್ಲು, ಧೂಳುಗಳ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ನಿರೀಕ್ಷಿಸಿತ್ತು. ಎಲ್ಲ ಲೆಕ್ಕಾಚಾರಗಳು ಸರಿಯಾಗಿದ್ದರೆ, ಲೂನಾ-25 ನಾಳೆ, ಆಗಸ್ಟ್ 21 ರಂದು ಸಾಫ್ಟ್ ಲ್ಯಾಂಡಿಂಗ್ ನಡೆಸಬೇಕಾಗಿತ್ತು.


ಆದರೆ, ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್ ಪೂರ್ವ ಕಕ್ಷೆಯ ಹಂತದಲ್ಲಿದ್ದಾಗ ಯಾವುದೋ ಅನಿರ್ದಿಷ್ಟ ಸಮಸ್ಯೆಯನ್ನು ಎದುರಿಸಿ, ರಾಸ್‌ಕಾಸ್ಮೋಸ್ ಜೊತೆ ಸಂಪರ್ಕ ಕಳೆದುಕೊಂಡಿತು ಎಂದು ಸಂಸ್ಥೆ ತಿಳಿಸಿದೆ.


ಈ ಯೋಜನೆ ಯಾಕೆ ವೈಫಲ್ಯ ಅನುಭವಿಸಿದೆ ಎಂದು ನಿರ್ದಿಷ್ಟ ಕಾರಣ ಪತ್ತೆಹಚ್ಚಲು ರಾಸ್‌ಕಾಸ್ಮೋಸ್ ಒಂದು ಸಮಿತಿಯನ್ನು ರಚಿಸಿದೆ. ಲೂನಾ-25 ಬಾಹ್ಯಾಕಾಶ ನೌಕೆಯನ್ನು ಹೊತ್ತ ಸೊಯುಜ್ 2.1 ರಾಕೆಟ್ ಮಾಸ್ಕೋದಿಂದ 3,450 ಮೈಲಿ (5,550 ಕಿಲೋಮೀಟರ್) ದೂರದಲ್ಲಿರುವ ವೋಸ್ತೋಚ್ನಿ ಕಾಸ್ಮೋಡ್ರೋಮ್ ನಿಂದ ಆಗಸ್ಟ್ 11ರಂದು ಮಾಸ್ಕೋ ಸಮಯ ಬೆಳಗಿನ ಜಾವ 2:11ಕ್ಕೆ ಉಡಾವಣೆಗೊಂಡಿತ್ತು.


ಈ ಮಹತ್ವಾಕಾಂಕ್ಷಿ ಯೋಜನೆ ವಿಫಲಗೊಂಡಿರುವುದು, ಶೀತಲ ಸಮರದ ಕಾಲದ ಬಳಿಕ ರಷ್ಯಾದ ಬಾಹ್ಯಾಕಾಶ ವಲಯದ ಪ್ರಭಾವ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಶೀತಲ ಸಮರದ ಅವಧಿಯಲ್ಲಿ ಮಾಸ್ಕೋ ಹಲವಾರು ಸಾಧನೆಗಳನ್ನು ಕೈಗೊಂಡಿದ್ದು, ಭೂಮಿಯ ಪರಿಭ್ರಮಣೆ ನಡೆಸುವ ಮೊದಲ ಉಪಗ್ರಹವಾದ ಸ್ಪುಟ್ನಿಕ್-1ನ್ನು 1957ರಲ್ಲಿ ಉಡಾವಣೆಗೊಳಿಸಿತು. ಬಳಿಕ 1961ರಲ್ಲಿ ಸೋವಿಯತ್ ಕಾಸ್ಮೋನಾಟ್ ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ತೆರಳಿ, ಈ ಸಾಧನೆ ಮಾಡಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ರಷ್ಯಾ 1976ರ ಲೂನಾ-24 ಯೋಜನೆಯ ಬಳಿಕ ಚಂದ್ರ ಅನ್ವೇಷಣಾ ಯೋಜನೆಗೆ ಪ್ರಯತ್ನ ನಡೆಸಿರಲಿಲ್ಲ. ಆ ಅವಧಿಯಲ್ಲಿ ಲಿಯೋನಿಡ್ ಬ್ರೆಜ್ನೆವ್ ರಷ್ಯಾದ ಅಧ್ಯಕ್ಷರಾಗಿದ್ದರು. ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಆಗಸ್ಟ್ 21ರಂದು ಸಾಫ್ಟ್ ಲ್ಯಾಂಡಿಂಗ್ ನಡೆಸಬೇಕಾಗಿತ್ತು.


ರಷ್ಯಾ ಭಾರತದ ಚಂದ್ರಯಾನ-3 ಯೋಜನೆಯೊಡನೆ ಸ್ಪರ್ಧೆಗಿಳಿದಿತ್ತು. ಚಂದ್ರಯಾನ-3 ಯೋಜನೆಯೂ ಈ ವಾರದಲ್ಲೇ ಚಂದ್ರನ ಮೇಲಿಳಿಯಲು ಸಿದ್ಧವಾಗಿದೆ. ಅದರೊಡನೆ, ಚಂದ್ರ ಅನ್ವೇಷಣೆಯಲ್ಲಿ ಆಸಕ್ತವಾಗಿರುವ ಚೀನಾ ಮತ್ತು ಅಮೆರಿಕಾಗಳೊಡನೆಯೂ ರಷ್ಯಾ ಸ್ಪರ್ಧಿಸುತ್ತಿದೆ.


ರಷ್ಯಾ 1989ರ ಬಳಿಕ ಯಾವುದೇ ಆಕಾಶ ಕಾಯದ ಮೇಲೆ ಇಳಿಯುವ ಪ್ರಯತ್ನ ಕೈಗೊಂಡಿಲ್ಲ. ಆ ವರ್ಷ ಸೋವಿಯತ್ ಒಕ್ಕೂಟ ಉದ್ದೇಶಿಸಿದ್ದ ಮಂಗಳ ಗ್ರಹದ ಚಂದ್ರರನ್ನು ಅನ್ವೇಷಿಸುವ ಫೋಬೋಸ್ 2 ಯೋಜನೆ ಕಂಪ್ಯೂಟರ್ ವೈಫಲ್ಯದಿಂದ ವಿಫಲವಾಗಿತ್ತು.


ರಾಸ್‌ಕಾಸ್ಮೋಸ್ ಮುಖ್ಯಸ್ಥರಾದ ಯೂರಿ ಬೊರಿಸೋವ್ ಈ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೇರವಾಗಿಯೇ ಜೂನ್ ತಿಂಗಳಲ್ಲಿ ತಿಳಿಸಿದ್ದರು. ಅವರ ಪ್ರಕಾರ ಈ ಯೋಜನೆ 70% ಯಶಸ್ಸಿನ ಸಾಧ್ಯತೆ ಹೊಂದಿತ್ತು.


ಚಂದ್ರನ ದಕ್ಷಿಣ ಧ್ರುವ ವಿಜ್ಞಾನಿಗಳಿಗೆ ಆಸಕ್ತಿದಾಯಕ ತಾಣವಾಗಿದ್ದು, ಅಲ್ಲಿನ ಶಾಶ್ವತ ನೆರಳಿನ ಪ್ರದೇಶಗಳಲ್ಲಿರುವ ಕುಳಿಗಳಲ್ಲಿ ನೀರು ಇದೆ ಎಂದು ಅಂದಾಜಿಸಿದ್ದಾರೆ. ಅಲ್ಲಿ ಘನೀಕೃತಗೊಂಡಿರುವ ನೀರನ್ನು ಭವಿಷ್ಯದ ಅನ್ವೇಷಕರು ಗಾಳಿ ಮತ್ತು ರಾಕೆಟ್ ಇಂಧನವಾಗಿ ಪರಿವರ್ತಿಸಲು ಸಾಧ್ಯವಿದೆ.


-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.