ಬೆಂಗಳೂರು: ಇಡೀ ದೇಶದಲ್ಲೇ ಕರ್ನಾಟಕ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಲು ಅವರೇ ಕರೆಯುತ್ತಿದ್ದಾರೆ. ಈಗ ನಾವು ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಗರದ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. “ನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ಖಾಸಗಿ ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೆವು. ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ಊಟಕ್ಕೆ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ ಸಾಕು: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!
ಕೇಂದ್ರದ ಮಾಜಿ ಸಚಿವ, ಶಾಸಕ ಯತ್ನಾಳ್ ಅವರೇ ತಮ್ಮ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು. ಹಣ ನೀಡದೆ ಯಾವುದೇ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಸಾವಿರ ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದು ಹೇಳಿಕೆ ನೀಡಿದವರು ಬಿಜೆಪಿಯವರೇ ಅಲ್ಲವೇ? ಎಂದು ಪ್ರಶ್ನಿಸಿದರು.
ʼಕಾಸಿದ್ದರೆ ಸರ್ಕಾರ ಹುದ್ದೆʼ ಎನ್ನುವ ಪತ್ರಿಕಾ ವರದಿಯ ಪ್ರಕಾರ, ಎ ದರ್ಜೆಯ ಗೆಜೆಟೆಡ್ ಹುದ್ದೆಗೆ 70 ಲಕ್ಷ, ಎಸಿಗೆ 1.50 ಕೋಟಿ, ಡಿವೈಎಸ್ ಪಿಗೆ 80 ಲಕ್ಷ, ತಹಶೀಲ್ದಾರ್ ಹುದ್ದೆಗೆ 60- 80 ಲಕ್ಷ, ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹುದ್ದೆಗೆ 40 ಲಕ್ಷದಿಂದ 1.5 ಕೋಟಿ, ಅಸಿಸ್ಟೆಂಟ್ ಎಂಜಿನಿಯರ್’ಗೆ 80 ಲಕ್ಷ, ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ, ಎಸ್’ಡಿಎಗೆ 10 ರಿಂದ 15 ಲಕ್ಷ ರೂ. ಫಿಕ್ಸ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಆಧಾರದಲ್ಲಿ ಕಾಂಗ್ರೆಸ್ ಜಾಹೀರಾತು ನೀಡಿತ್ತು ಎಂದರು.
ರಾಜಕೀಯ ಮಾಡಲು ಕರೆಯುತ್ತಿದ್ದಾರೆ, ಅದನ್ನು ಮಾಡುತ್ತೇವೆ:
ಬಿಜೆಪಿಯವರನ್ನು ಹೋಗಲಿ ಎಂದು ಸುಮ್ಮನೆ ಬಿಟ್ಟಿದ್ದೆವು. ಅವರೇ ದೂರು ನೀಡಿದ ಮೇಲೆ ಈಗ ಸುಮ್ಮನಿರಲು ಸಾಧ್ಯವೇ? ದೊಡ್ಡ ಹೆಸರು ಬರುತ್ತದೆ ಎಂದು ರಾಹುಲ್ ಗಾಂಧಿ ಹೆಸರು ಸೇರಿಸಿದ್ದಾರೆ. ಇಂಡಿಯಾ ಸಭೆ ಇದ್ದ ಕಾರಣ ರಾಹುಲ್ ಗಾಂಧಿ ಅವರು ಬರಲಾಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ನ್ಯಾಯಲಯಕ್ಕೆ ಬಂದಿದ್ದೇವೆ. ನಮ್ಮನ್ನು ರಾಜಕೀಯ ಮಾಡಲು ಬಿಜೆಪಿಯವರು ಕರೆಯುತ್ತಿದ್ದಾರೆ, ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಈ ಜಾಹೀರಾತು ಆಧರಿಸಿ ಬಿಜೆಪಿಯು ರಾಹುಲ್ ಗಾಂಧಿ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಾಗೂ ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ತಿಳಿದಿದೆ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ರಾಹುಲ್ ಗಾಂಧಿ ಅವರು ನ್ಯಾಯಲಯಕ್ಕೆ ಗೌರವ ನೀಡುತ್ತಾರೆ. ಹೀಗಾಗಿ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ. ದಿನಾಂಕವನ್ನು ಮುಂದೆ ತಿಳಿಸುತ್ತೇನೆ ಎಂದು ಉತ್ತರಿಸಿದರು.
ಹಣ ಅಕ್ರಮ ವರ್ಗಾವಣೆ ಸಮಗ್ರ ತನಿಖೆ:
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಬಗ್ಗೆ ಕೇಳಿದಾಗ “ನಾವು ಯಾರನ್ನು ಈ ಪ್ರಕರಣದಲ್ಲಿ ರಕ್ಷಿಸುವುದಿಲ್ಲ. ಬಿಜೆಪಿ ಕಾಲದಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಇದು ಬೊಮ್ಮಾಯಿ ಅವರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ” ಎಂದರು.
ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿದವರು, ಈಗ ಏಕೆ ಸುಮ್ಮನಿದ್ದೀರಿ ಎಂದು ಕೇಳಿದಾಗ “ಆ ಪ್ರಕರಣದಲ್ಲಿ ನೇರವಾಗಿ ಈಶ್ವರಪ್ಪ ಅವರ ಹೆಸರು ಬಂದಿತ್ತು. ಇಲ್ಲಿ ಮಂತ್ರಿ ಹೇಳಿದ್ದರು ಎಂದು ಅಧಿಕಾರಿ ಹೇಳಿದ್ದಾರೆ ಎಂದಿದೆ. ನಮಗೆ ದಾಖಲೆ ಅಥವಾ ಪಾಲ್ಗೊಂಡಿರುವ ಬಗ್ಗೆ ಸುಳಿವು ಸಿಕ್ಕರೆ ನಮ್ಮ ಗೌರವ ಕಾಪಾಡಿಕೊಳ್ಳಲು ತನಿಖೆ ಮುಗಿಯುವ ತನಕ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಇರಬೇಕು. ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂದು ಅಧಿಕಾರಿಗಳು ಬೆನ್ನುಹತ್ತಿದ್ದಾರೆ. ಹಣವನ್ನು ಮರಳಿ ಪಡೆಯುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಜನರ ಬಂಧನವಾಗಿದೆ” ಎಂದರು.
ಸಿ.ಟಿ. ರವಿ ಆರೋಪದ ಬಗ್ಗೆ ಕೇಳಿದಾಗ “ಯಾರೋ ಒಬ್ಬ ರವಿ ಎನ್ನುವವನು ನನ್ನ ಮೇಲೆ ಹೇಳುತ್ತಿದ್ದಾನೆ. ನಾನು ಮತ್ತು ಅವನು ಇಬ್ಬರೂ ಪಾರ್ಟನರ್ಸ್. ಸಿಎಂ ಮತ್ತು ನಾನು ಹಣ ಹಂಚಿಕೊಂಡಿದ್ದೇವೆ ಎಂದು ಹೇಳಿದ್ದಾನಲ್ಲ. ಆದರೆ ರವಿ ಮತ್ತು ನಾನು ಇಬ್ಬರೂ ಹಂಚಿಕೊಂಡಿದ್ದೇವೆ” ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಉಸಿರು ಇರೋವರೆಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ! ಹೀಗಂತ ಈ ವ್ಯಕ್ತಿಗೆ ಪ್ರಮಾಣ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್
ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎನ್ನುವ ಆಗ್ರಹದ ಬಗ್ಗೆ ಕೇಳಿದಾಗ “ಇಂತಿಷ್ಟು ಕೋಟಿಯ ಬ್ಯಾಂಕ್ ಅವ್ಯವಹಾರ ನೇರವಾಗಿ ಸಿಬಿಐ ತನಿಖೆಗೆ ಹೋಗುತ್ತದೆ. ಅದು ನಿಯಮ. ಇಲ್ಲಿ ಸರ್ಕಾರ ಕೊಡಬೇಕಾದ್ದು, ಅವರು ತೆಗೆದುಕೊಳ್ಳಬೇಕಾದ್ದು ಏನಿಲ್ಲ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಅವರು ಸಹ ಯಾವುದೇ ರಾಜಕೀಯ ಮಾಡದೆ ತನಿಖೆ ಮಾಡಲಿ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews