ತಾಂಜಾನಿಯಾ: ಪಾದ್ರಿ ಬಳಿಯಿಂದ ಮಾಯದ ಎಣ್ಣೆ ಪಡೆಯಲು ಹೋಗಿ 20 ಜನರ ಸಾವು
ಈ ಮಾಯದ ಎಣ್ಣೆ ಬಳಸಿದವರು ತಮ್ಮ ಜೀವನದಲ್ಲಿ ಸಮೃದ್ಧಿ ಪಡೆಯಲಿದ್ದು, ಇದರಿಂದ ಜನರು ರೋಗಗಳಿಂದ ದೂರವಿರಬಹುದು ಎಂದು ಪಾದ್ರಿ ಹೇಳಿಕೊಂಡಿದ್ದಾರೆ.
ಮೋಷಿ: ತಂಜಾನಿಯಾದ ಮೋಷಿ ಪಟ್ಟಣದ ಒಂದು ಸ್ಟೇಡಿಯಂನಲ್ಲಿರುವ ಚರ್ಚ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಯದ ಎಣ್ಣೆ ಪಡೆಯಲು ಬಂದ ಜನರಲ್ಲಿ ನೂಕುನುಗ್ಗಲು ಉಂಟಾಗಿದ್ದು, ಇದರಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಒಂದು ಚರ್ಚ್ ವೊಂದರ ಪಾದ್ರಿಯೊಬ್ಬರು ಜನರಿಗೆ ಮಾಯದ ಎಣ್ಣೆ ವಿತರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಎಣ್ಣೆ ಪಡೆಯಲು ಜನರು ಮುಗಿಬಿದ್ದಿದ್ದು, ಬಳಿಕ ಉಂಟಾದ ನೂಕು ನುಗ್ಗಲಲ್ಲಿ 20 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ಮೋಷಿ ಪಟ್ಟಣದ ಸ್ಟೇಡಿಯಂವೊಂದರಲ್ಲಿ ಮಾಯದ ಎಣ್ಣೆ ಪಡೆಯಲು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಗೊಂಡಿದ್ದರು. ಚರ್ಚ್ ನ ಪಾದ್ರಿಯೋರ್ವರು ಮಾಯದ ಎಣ್ಣೆ ವಿತರಿಸಲು ಎಲ್ಲರನ್ನು ಆಹ್ವಾನಿಸಿದ್ದರು. ಈ ಮಾಯದ ಎಣ್ಣೆ ಬಳಸುವ ಜನರು ಸಮೃದ್ಧರಾಗಲಿದ್ದು, ಅವರು ರೋಗಗಳಿಂದ ಕೂಡ ದೂರ ಉಳಿಯಬಹುದು ಎಂದು ಪಾದ್ರಿ ಹೇಳಿಕೊಂಡಿದ್ದಾರೆ. ಪಾದ್ರಿ ಈ ಮಾಯದ ಎಣ್ಣೆ ವಿತರಿಸಲು ಆರಂಭಿಸಿದಾಗ, ಎಣ್ಣೆ ಪಡೆಯಲು ಜನರು ಮುಗಿಬಿದ್ದಿದ್ದಾರೆ. ಈ ವೇಳೆ ನೂಕುನುಗ್ಗಲು ಸಂಭವಿಸಿದ್ದು, ಜನರು ಪರಸ್ಪರ ತುಳಿಯಲು ಆರಂಭಿಸಿದ್ದಾರೆ. ಈ ಕಾರ್ಯಕ್ರಮವನ್ನು ಕತ್ತಲಿರುವ ಪ್ರದೇಶದಲ್ಲಿ ಆಯೋಜಿಸಲಾಗಿರುವುದೂ ಕೂಡ ಈ ಘಟನೆಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ತಾಂಜಾನಿಯಾದಲ್ಲಿ ಚಮತ್ಕಾರ ಮಾಡುವ ಪಾದ್ರಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ. ಈ ಪಾದ್ರಿಗಳು ಜನರನ್ನು ಬಡತನದಿಂದ ಮೇಲೆತ್ತುವ ಹಾಗೂ ರೋಗಗಳಿಂದ ಮುಕ್ತರನ್ನಾಗಿಸುವುದಾಗಿ ಹೇಳುತ್ತಾರೆ. ಚರ್ಚ್ ನಲ್ಲಿ ದಾನದಿಂದ ಬರುವ ಹಣವೇ ಈ ಪಾದ್ರಿಗಳ ಆದಾಯದ ಪ್ರಮುಖ ಮೂಲವಾಗಿದೆ. ಇಲ್ಲಿನ ಪಾದ್ರಿಗಳು ಜನರಿಗೆ ಅವರ ಆದಾಯದ ಶೇ.10ರಷ್ಟು ಹಣವನ್ನು ಚರ್ಚ್ ಗೆ ದಾನವಾಗಿ ನೀಡಲು ಪ್ರೇರೇಪಿಸುತ್ತಾರೆ ಎನ್ನಲಾಗಿದೆ.