Israels Military Forces: ಸೋಮವಾರ, ಅಕ್ಟೋಬರ್ 9ರಂದು, ಇಸ್ರೇಲಿ ಸೇನಾಪಡೆ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಘೋರ ದಾಳಿಗೆ ಪ್ರತಿಕ್ರಿಯೆಯಾಗಿ 3,00,000 ಮೀಸಲು ಸೈನಿಕರ ಪಡೆಯನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿತು. ಇದರೊಡನೆ, ಟೆಲ್ ಅವೀವ್ ಇನ್ನೂ 60,000 ಮೀಸಲು ಸೈನಿಕರನ್ನು ಕರೆಯಲು ಹಸಿರು ನಿಶಾನೆ ತೋರಿತು. ಈ ಮೂಲಕ ಮೂರು ದಿನಗಳಲ್ಲಿ ಒಟ್ಟು 3,60,000 ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಿದಂತಾಯಿತು.


COMMERCIAL BREAK
SCROLL TO CONTINUE READING

ಇಸ್ರೇಲಿ ಸೇನಾಪಡೆಗಳ ಪ್ರಸ್ತುತ ಗಾತ್ರವೇನು?
ಇಸ್ರೇಲ್ ತನ್ನ ಸೇನೆಯ ಗಾತ್ರದ ಕುರಿತ ಮಾಹಿತಿಯನ್ನು ಎಲ್ಲೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದ್ದರಿಂದ, ಈ ಮಾಹಿತಿಯನ್ನು ಪಡೆದುಕೊಳ್ಳಲು ವಿದೇಶೀ ಮೂಲಗಳು ಅಥವಾ ಇಸ್ರೇಲಿ ಸಂಶೋಧಕರನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ.


ಇಸ್ರೇಲ್ ಸೇನಾಪಡೆಗಳ ಸ್ಥಾಪನೆ: 
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು.


ಐಡಿಎಫ್ ಹೊಂದಿರುವ ಮೂಲ ಸಿದ್ಧಾಂತ, ಇಸ್ರೇಲ್ ಯಾವ ಕಾರಣಕ್ಕೂ, ಯಾವುದೇ ಯುದ್ಧವನ್ನು ಸೋಲಬಾರದು ಎಂಬ ತಳಪಾಯವನ್ನು ಆಧರಿಸಿದೆ. ಈ ಗುರಿಯನ್ನು ಸಾಧಿಸಲು ಇರುವ ಒಂದೇ ರಕ್ಷಣಾ ಕಾರ್ಯತಂತ್ರವೆಂದರೆ, ಅಗಾಧ ಸೇನಾಪಡೆಯನ್ನು ಶತ್ರುಗಳನ್ನು ಎದುರಿಸಲು ಬಳಸುವುದು ಎಂದು ಇಸ್ರೇಲ್ ನಂಬಿದೆ.


ಐಡಿಎಫ್ ವಿನ್ಯಾಸ: 
ಐಡಿಎಫ್ ನೇತೃತ್ವವನ್ನು ಚೀಫ್ ಆಫ್ ಜನರಲ್ ಸ್ಟಾಫ್ (ಪ್ರಸ್ತುತ ಈ ಹುದ್ದೆಯನ್ನು ಹೆರ್ಜ಼ಿ ಹಲೇವಿ ನಿರ್ವಹಿಸುತ್ತಿದ್ದಾರೆ) ಹೊಂದಿದ್ದು, ಅವರು ಇಸ್ರೇಲ್ ರಕ್ಷಣಾ ಸಚಿವರ ಉಸ್ತುವಾರಿಯಲ್ಲಿ (ಪ್ರಸ್ತುತ ಯೋವ್ ಗ್ಯಾಲಂಟ್) ಕಾರ್ಯ ನಿರ್ವಹಿಸುತ್ತಾರೆ. ಇಸ್ರೇಲ್ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು ಚೀಫ್ ಆಫ್ ಸ್ಟಾಫ್ ಅವರಿಗೆ ವರದಿ ಮಾಡುತ್ತಾರೆ. ಅವರೊಡನೆ, ಪ್ರಾದೇಶಿಕ ಕಮಾಂಡರ್‌ಗಳು, ಇಂಟಲಿಜೆನ್ಸ್ ಕಾರ್ಪ್ಸ್ ಸೇರಿದಂತೆ, ವಿವಿಧ ರಕ್ಷಣಾ ನಿರ್ದೇಶನಾಲಯಗಳ ಮುಖ್ಯಸ್ಥರು ಸಹ ಚೀಫ್ ಆಫ್ ಸ್ಟಾಫ್ ಅವರಿಗೆ ವರದಿ ಮಾಡಿಕೊಳ್ಳುತ್ತವೆ.


ಇದನ್ನೂ ಓದಿ- ಕಸ್ಸಾಮ್ ರಾಕೆಟ್‌ಗಳು: ಅಭಿವೃದ್ಧಿ, ಸರಳತೆ ಹಾಗೂ ಇಸ್ರೇಲ್ - ಹಮಾಸ್ ಯುದ್ಧದ ಮೇಲಿನ ಪರಿಣಾಮ


ಸೇನಾ ಗಾತ್ರ: 
ಐಡಿಎಫ್ ಅಂದಾಜು 1,76,500 ಸಕ್ರಿಯ ಸೈನಿಕರನ್ನು ಒಳಗೊಂಡಿದೆ ಎಂದು ಸಾರ್ವಜನಿಕವಾಗಿ ಮಾಹಿತಿ ಲಭ್ಯವಿದೆ.


ಇಸ್ರೇಲ್ ಭೂಸೇನೆಯಲ್ಲಿ ಪದಾತಿ ದಳ, ಟ್ಯಾಂಕ್‌ಗಳು, ಆರ್ಟಿಲರಿಗಳಿದ್ದು, 1,26,000 ಸಕ್ರಿಯ ಸೈನಿಕರು ಮತ್ತು 4,00,000 ಮೀಸಲು ಸೈನಿಕರ ಲಭ್ಯತೆಯಿದೆ. ಅವರನ್ನು ಮೇಜರ್ ಜನರಲ್ ಯೋಯೆಲ್ ಸ್ಟ್ರಿಕ್ ಮುನ್ನಡೆಸುತ್ತಾರೆ.


ಈ ಪಡೆಗಳು ಹಲವಾರು ಮಹತ್ತರ ಇಸ್ರೇಲ್ ಮಿಲಿಟರಿ ಕ್ರಮಗಳ ಭಾಗವಾಗಿದ್ದವು. ಅವುಗಳಲ್ಲಿ 1948ರ ಅರಬ್ - ಇಸ್ರೇಲ್ ಯುದ್ಧ, 1956ರ ಸೂಯೆಜ್ ಬಿಕ್ಕಟ್ಟು, 1967ರಲ್ಲಿ ನಡೆದ ಆರು ದಿನಗಳ ಯುದ್ಧ ಮತ್ತು ಪ್ರಸ್ತುತ ತಲೆದೋರಿರುವ ಹಮಾಸ್ - ಇಸ್ರೇಲ್ ಕದನ ಪ್ರಮುಖವಾದವು.


ಭೂಸೇನಾ ಪಡೆಗಳು ಇಸ್ರೇಲ್‌ನಲ್ಲಿ ಅಭಿವೃದ್ಧಿ ಪಡಿಸಿರುವ ಒಂದಷ್ಟು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತವೆ. ಅವುಗಳಲ್ಲಿ ಮೆರ್‌ಕಾವಾ ಟ್ಯಾಂಕ್, ಅಚ್ಜಾರಿಟ್ ಶಸ್ತ್ರಸಜ್ಜಿತ ವಾಹನ, ಹಾಗೂ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಸೇರಿವೆ.


ಇಸ್ರೇಲ್ ವಾಯುಪಡೆ: 
ಇಸ್ರೇಲಿ ವಾಯುಪಡೆ (ಐಎಎಫ್) 35,000 ಸಕ್ರಿಯ ಯೋಧರನ್ನು ಹೊಂದಿದ್ದು, ಜೊತೆಗೆ 55,000 ಮೀಸಲು ಸಂಖ್ಯೆಯನ್ನು ಹೊಂದಿದೆ. ಇಸ್ರೇಲಿ ವಾಯುಪಡೆ 686 ಯುದ್ಧ ವಿಮಾನಗಳನ್ನು ಕಾರ್ಯಾಚರಿಸುತ್ತಿದೆ. ಇಸ್ರೇಲಿ ವಾಯುಪಡೆಯ ಮುಖ್ಯಸ್ಥರಾಗಿ ಅಲುಫ್ ಟೋಮೆರ್ ಬಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.


1967ರ ಆರು ದಿನಗಳ ಯುದ್ಧದ ಬಳಿಕ, ಐಡಿಎಫ್‌ನ ಬಹುತೇಕ ಯುದ್ಧ ವಿಮಾನಗಳನ್ನು ಅಮೆರಿಕಾದಿಂದ ಪಡೆದುಕೊಳ್ಳಲಾಗಿದೆ. ಇದರಲ್ಲಿ ಎ-4 ಸ್ಕೈಹಾಕ್, ಎಫ್-4 ಫ್ಯಾಂಟಮ್ 2, ಎಫ್-15 ಈಗಲ್, ಎಫ್-16 ಫೈಟಿಂಗ್ ಫಾಲ್ಕನ್ ಹಾಗೂ ಆಧುನಿಕ ಎಫ್-35 ಲೈಟ್ನಿಂಗ್ 2 ಸೇರಿವೆ.


ಇಸ್ರೇಲ್ ವಾಯುಪಡೆ 2006ರ ಲೆಬನಾನ್ ಯುದ್ಧ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.


ಇಸ್ರೇಲಿ ನೌಕಾಪಡೆ: 
ಇಸ್ರೇಲಿ ನೌಕಾ ಸೇನೆ 9,500 ಸಕ್ರಿಯ ಯೋಧರನ್ನು ಹೊಂದಿದ್ದು,  10,000 ಮೀಸಲು ಯೋಧರನ್ನು ಹೊಂದಿದೆ‌. ಇಸ್ರೇಲ್ ನೌಕಾಪಡೆಯ ನೇತೃತ್ವವನ್ನು ಅಲುಫ್ ಡೇವಿಡ್ ಸಾರ್ ಸಲಾಮಾ ವಹಿಸಿದ್ದಾರೆ.


ಇಸ್ರೇಲ್ ನೌಕಾಪಡೆ ಏಳು ಕಾರ್ವೆಟ್‌ಗಳು, ಎಂಟು ಕ್ಷಿಪಣಿ ಬೋಟುಗಳು, ಐದು ಡಾಲ್ಫಿನ್ ವರ್ಗಕ್ಕೆ ಸೇರಿದ ಜಲಾಂತರ್ಗಾಮಿಗಳು, 45 ಗಸ್ತು ಬೋಟುಗಳು ಹಾಗೂ ಎರಡು ಬೆಂಬಲ ಹಡಗುಗಳನ್ನು ಹೊಂದಿದೆ.


ಇಸ್ರೇಲಿ ನೌಕಾಪಡೆ 1973ರ ಅರಬ್ - ಇಸ್ರೇಲಿ ಯುದ್ಧ, 1973ರ ಬಾಲ್ಟಿಮ್ ಯುದ್ಧ ಹಾಗೂ 2006ರ ಲೆಬನಾನ್ ಯುದ್ಧ ಸೇರಿದಂತೆ ಹಲವು ಮಹತ್ವದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.


ಇದನ್ನೂ ಓದಿ- ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ


ಕಾರ್ವೆಟ್‌ಗಳೆಂದರೆ ಸಣ್ಣ ಗಾತ್ರದ, ಅತ್ಯಂತ ಕುಶಲವಾಗಿ ಚಲಿಸಬಲ್ಲ ನೌಕಾಪಡೆಯ ಯುದ್ಧನೌಕೆಗಳಾಗಿವೆ. ಇವುಗಳು ಸಾಮಾನ್ಯವಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಬಲ್ಲವಾಗಿದ್ದು, ಅವುಗಳಲ್ಲಿ ಕರಾವಳಿ ರಕ್ಷಣೆ, ಆ್ಯಂಟಿ ಸಬ್‌ಮರೀನ್ ಯುದ್ಧ, ಮತ್ತು ರಕ್ಷಣಾ ಕಾರ್ಯಾಚರಣೆಗಳು ಸೇರಿವೆ. ಕಾರ್ವೆಟ್‌ಗಳು ಫ್ರಿಗೇಟ್‌ಗಳಿಗಿಂತ ಸಣ್ಣವಾಗಿದ್ದು, ಗಸ್ತು ಬೋಟ್‌ಗಳಿಂದ ದೊಡ್ಡವೂ, ಹೆಚ್ಚು ಸಮರ್ಥವೂ ಆಗಿವೆ.


ಫ್ರಿಗೇಟ್ ಒಂದು ರೀತಿಯ ನೌಕಾಪಡೆಯ ಯುದ್ಧನೌಕೆಯಾಗಿದ್ದು, ಸಾಮಾನ್ಯವಾಗಿ ಕಾರ್ವೆಟ್‌ಗಳಿಂದ ದೊಡ್ಡದಾಗಿರುತ್ತವೆ, ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತವೆ. ಆದರೆ ಇವುಗಳು ಗಾತ್ರದಲ್ಲಿ ಡೆಸ್ಟ್ರಾಯರ್‌ಗಳಿಂದ ಸಣ್ಣವಾಗಿರುತ್ತವೆ. ಫ್ರಿಗೇಟ್‌ಗಳು ತಮ್ಮ ಬಹುಮುಖತೆಯಿಂದ ಜನಪ್ರಿಯವಾಗಿದ್ದು, ಹಲವು ರೀತಿಯ ಕಾರ್ಯಾಚರಣೆಗಳಲ್ಲಿ ಬಳಸಲ್ಪಡುತ್ತವೆ. ಅವುಗಳಲ್ಲಿ ಆ್ಯಂಟಿ ಸಬ್‌ಮರೀನ್ ಯುದ್ಧ, ಇತರ ಹಡಗುಗಳ ರಕ್ಷಣೆ, ಸಾಗರ ಗಸ್ತು ಪ್ರಮುಖ ಕಾರ್ಯಗಳಾಗಿವೆ. ಅವುಗಳು ಸಾಗರದಲ್ಲಿ ನೌಕಾಪಡೆಯ ರಕ್ಷಣೆ ಮತ್ತು ದಾಳಿ ಎರಡೂ ರೀತಿಯ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.


ಕ್ಷಿಪಣಿ ಬೋಟ್‌ಗಳನ್ನು ಸಾಮಾನ್ಯವಾಗಿ ಮಿಸೈಲ್ ಕಾರ್ವೆಟ್‌ಗಳು ಅಥವಾ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಎಂದೂ ಕರೆಯಲಾಗುತ್ತದೆ. ಇವುಗಳು ಸಣ್ಣ ಗಾತ್ರದ, ಹೆಚ್ಚು ವೇಗವಾಗಿ ಚಲಿಸಬಲ್ಲ ನೌಕೆಗಳಾಗಿದ್ದು, ಪ್ರಾಥಮಿಕವಾಗಿ ಆ್ಯಂಟಿ ಶಿಪ್ ಅಥವಾ ಆ್ಯಂಟಿ ಏರ್‌ಕ್ರಾಫ್ಟ್ ಕ್ಷಿಪಣಿಗಳನ್ನು ಉಡಾಯಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ನೌಕಾಪಡೆಯ ಯುದ್ಧನೌಕೆಗಳಾದ ಫ್ರಿಗೇಟ್‌ಗಳು ಅಥವಾ ಡೆಸ್ಟ್ರಾಯರ್‌ಗಳಿಂದ ಸಣ್ಣವಾಗಿದ್ದು, ಅತ್ಯಂತ ಕುಶಲವಾಗಿ ಚಲಿಸಬಲ್ಲವು. ಇವುಗಳು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಒಳಗೊಂಡಿವೆ. ಕ್ಷಿಪಣಿ ಬೋಟ್‌ಗಳನ್ನು ಕರಾವಳಿ ರಕ್ಷಣೆ, ಗಸ್ತು ಕಾರ್ಯಾಚರಣೆ, ಹಾಗೂ ಸಾಗರದಿಂದ ಬರುವ ಅಪಾಯಗಳಿಗೆ ಕ್ಷಿಪ್ರ ಪ್ರತಿಕ್ರಿಯೆ ನೀಡಲು ಬಳಸಲಾಗುತ್ತದೆ. ಅವುಗಳ ಚುರುಕುತನ ಮತ್ತು ಆಯುಧ ಸಾಮರ್ಥ್ಯ ಶತ್ರುಗಳ ನೌಕೆಗಳು ಮತ್ತು ವಿಮಾನಗಳೊಡನೆ ಸೆಣಸಲು ಸಮರ್ಥವನ್ನಾಗಿಸುತ್ತವೆ.


ಇದನ್ನೂ ಓದಿ- 


ಇಸ್ರೇಲಿನಲ್ಲಿ ಜಾರಿಯಲ್ಲಿದೆ ಕಡ್ಡಾಯ ಸೇನಾ ಸೇವೆ: 
ಇಸ್ರೇಲಿನ ನಾಗರಿಕರು ಅಥವಾ ಶಾಶ್ವತ ನಿವಾಸಿಗಳು 18 ವರ್ಷ ವಯಸ್ಸಿನವರಾದಾಗ ಅವರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.


ಪುರುಷರಿಗೆ ಈ ಕಡ್ಡಾಯ ಸೇನಾ ಸೇವಾವಧಿ 30 ತಿಂಗಳದ್ದಾಗಿದೆ. ಮಹಿಳೆಯರಿಗೆ ಈ ಅವಧಿ 24 ತಿಂಗಳಾಗಿದೆ. ಈ ಅವಧಿಯ ಬಳಿಕ, ದೀರ್ಘ ಕಾಲದ ತನಕ ಅವಶ್ಯಕತೆ ಎದುರಾದಾಗ ಅವರನ್ನು ಮರಳಿ ಸೇನಾ ಸೇವೆಗೆ ಕರೆಯುವ ಅವಕಾಶವಿದೆ. ಇದು ಮಹಿಳೆಯರಿಗೆ 50 ವರ್ಷದ ತನಕ ಮತ್ತು ಪುರುಷರಿಗೆ 55 ವರ್ಷ ವಯಸ್ಸಿನ ತನಕ ಇರುತ್ತದೆ.


ಒಟ್ಟಾರೆಯಾಗಿ, ಇಸ್ರೇಲ್‌ನಲ್ಲಿ ಮಿಲಿಟರಿ ಸೇವೆಗೆ ಒದಗಬಲ್ಲ 3.11 ಮಿಲಿಯನ್ ಜನರಿದ್ದು, ಅವರಲ್ಲಿ 2.55 ಮಿಲಿಯನ್ ಜನರು ಸೇನೆಯಲ್ಲಿ ಸೇವೆ ಸಲ್ಲಿಸಲು ಸಮರ್ಥರಾಗಿದ್ದಾರೆ.


ಲೇಖಕರು - ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.