ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ

ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ.

Written by - Girish Linganna | Edited by - Yashaswini V | Last Updated : Oct 14, 2023, 02:59 PM IST
  • ಬಿಳಿ ರಂಜಕ ಎನ್ನುವುದು ಘನ ರೂಪದ, ಮೇಣದಂತಹ ರಚನೆಯ ವಸ್ತುವಾಗಿದ್ದು, ಬೆಳಕಿನಲ್ಲಿದ್ದಾಗ ಇನ್ನಷ್ಟು ಗಾಢವಾಗುತ್ತದೆ.
  • ಅದು ನೋಡಲು ಪಾರದರ್ಶಕ, ಬಿಳಿ ಅಥವಾ ಹಳದಿ ಬಣ್ಣಗಳಲ್ಲಿರಬಹುದು.
  • ಇದು ಬೆಂಕಿ ಕಡ್ಡಿಯಂತಹ ಅಥವಾ ಬೆಳ್ಳುಳ್ಳಿಯಂತಹ ವಾಸನೆಯನ್ನು ಹೊಂದಿರುತ್ತದೆ.
ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ title=

Iran-Hamas War: ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಪ್ಯಾಲೆಸ್ತೀನಿನ ಉಗ್ರಗಾಮಿ ಸಂಘಟನೆ ಹಮಾಸ್ ಸದಸ್ಯರು ಇಸ್ರೇಲ್ ಮೇಲೆ ಅನಿರೀಕ್ಷಿತವಾಗಿ ಭಾರೀ ದಾಳಿ ನಡೆಸಿದರು. ಅದಾದ ಬಳಿಕ, ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ನಿರಂತರವಾಗಿ ವಾಯುದಾಳಿ ನಡೆಸುತ್ತಾ ಬಂದಿದೆ.

ಅಕ್ಟೋಬರ್ 7, ಶನಿವಾರದಂದು ಹಮಾಸ್ ಉಗ್ರ ಸಂಘಟನೆ ಗಾಜಾದಿಂದ ಇಸ್ರೇಲ್ ಮೇಲೆ ದಾಳಿ ನಡೆಸಿ, ಪ್ರಮುಖವಾಗಿ ಇಸ್ರೇಲಿ ನಾಗರಿಕರು ಸೇರಿದಂತೆ 1,000ಕ್ಕೂ  ಹೆಚ್ಚು ಜನರನ್ನು ಹತ್ಯೆಗೈದರು. ಅದರೊಡನೆ ಹಮಾಸ್ ಉಗ್ರರು ಸಾಕಷ್ಟು ಸಂಖ್ಯೆಯಲ್ಲಿ ಇಸ್ರೇಲಿಗರನ್ನು, ಅದರಲ್ಲೂ ಜನಪ್ರಿಯ ಸಂಗೀತ ಉತ್ಸವವೊಂದರಲ್ಲಿ ಭಾಗಿಯಾಗಿದ್ದ ಜನರನ್ನು ಒತ್ತೆಯಾಳುಗಳನ್ನಾಗಿಸಿದರು.

ಪ್ರಸ್ತುತ ಮುಂದುವರೆದಿರುವ ಸಶಸ್ತ್ರ ಕಾಳಗದಲ್ಲಿ ಎರಡೂ ಬದಿಗಳಲ್ಲೂ ನೂರಾರು ಜನರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ಈ ಯುದ್ಧ ಮುಂದುವರಿಯುವ ಕುರಿತು ಸಾಕಷ್ಟು ಆತಂಕಗಳು ಮನೆಮಾಡಿವೆ. ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಇಸ್ರೇಲ್ ಸೇನೆ ವೈಟ್ ಫಾಸ್ಫರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಪ್ರಯೋಗಿಸಿದ ವೀಡಿಯೋಗಳು ಬಹಿರಂಗಗೊಂಡ ಬಳಿಕ ಹಲವು ತಜ್ಞರು ಇಸ್ರೇಲನ್ನು ಟೀಕಿಸಿದ್ದಾರೆ.

ಈ ವಿಚಾರ ಚರ್ಚಾಯೋಗ್ಯವಾಗಿದ್ದರೂ, ಈ ಲೇಖನದಲ್ಲಿ ನಾವು ಬಿಳಿ ರಂಜಕ ಬಾಂಬ್‌ಗಳು ಎಂದರೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

ಇದನ್ನೂ ಓದಿ- ಯೋಮ್ ಕಿಪ್ಪುರ್ ಯುದ್ಧ- ಪ್ರಸ್ತುತ ಇಸ್ರೇಲ್ ಯುದ್ಧ: ಎರಡರ ನಡುವಿನ ಸಮಾನಾಂತರಗಳು

ವೈಟ್ ಫಾಸ್ಫರಸ್ ಬಾಂಬ್: ಹಾಗೆಂದರೆ ಏನು?
ಬಿಳಿ ರಂಜಕ ಎನ್ನುವುದು ಘನ ರೂಪದ, ಮೇಣದಂತಹ ರಚನೆಯ ವಸ್ತುವಾಗಿದ್ದು, ಬೆಳಕಿನಲ್ಲಿದ್ದಾಗ ಇನ್ನಷ್ಟು ಗಾಢವಾಗುತ್ತದೆ. ಅದು ನೋಡಲು ಪಾರದರ್ಶಕ, ಬಿಳಿ ಅಥವಾ ಹಳದಿ ಬಣ್ಣಗಳಲ್ಲಿರಬಹುದು. ಇದು ಬೆಂಕಿ ಕಡ್ಡಿಯಂತಹ ಅಥವಾ ಬೆಳ್ಳುಳ್ಳಿಯಂತಹ ವಾಸನೆಯನ್ನು ಹೊಂದಿರುತ್ತದೆ. ಆದರೆ, ಕೇವಲ ವಾಸನೆಯ ಆಧಾರದಲ್ಲಿ ಅದನ್ನು ಗುರುತಿಸಲು ಸಾಧ್ಯವಿಲ್ಲ.

ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ.

ಜಗತ್ತಿನಾದ್ಯಂತ ಇರುವ ಸೇನಾಪಡೆಗಳು ಈ ಸಂಯುಕ್ತವನ್ನು ಹೊಗೆ ಉತ್ಪಾದಿಸಲು ಬಳಸುತ್ತವೆ. ಯಾಕೆಂದರೆ, ಬಿಳಿ ರಂಜಕ ಅತ್ಯಂತ ದಟ್ಟವಾದ, ಕಿರಿಕಿರಿ ಉಂಟುಮಾಡಬಲ್ಲಂತಹ ಬಿಳಿಯ ಹೊಗೆಯ ಪದರವನ್ನು ಉಂಟುಮಾಡುತ್ತದೆ.

ಆರ್ಗನೈಸೇಶನ್ ಫಾರ್ ದ ಪ್ರೊಹಿಬಿಷನ್ ಆಫ್ ಕೆಮಿಕಲ್ ವೆಪನ್ಸ್ (ಒಪಿಸಿಡಬ್ಲ್ಯು) ಸಂಸ್ಥೆ ರಾಸಾಯನಿಕ ಆಯುಧಗಳ ಬಳಕೆಯನ್ನು ಪ್ರತಿಬಂಧಿಸುತ್ತದೆ. ಆದರೆ, ಇದು ಹೆಸರಿಸಿರುವ ರಾಸಾಯನಿಕ ಆಯುಧಗಳ ಮೂರು ಪಟ್ಟಿಗಳಲ್ಲೂ ಬಿಳಿ ರಂಜಕವನ್ನು ಹೆಸರಿಸಿಲ್ಲ.

ಬಿಳಿ ರಂಜಕ ನೆಲದ ಮೇಲೆ ಅತ್ಯಂತ ಕ್ಷಿಪ್ರವಾಗಿ ಬೆಂಕಿಯನ್ನು ಆರಂಭಿಸಿ, ವೇಗವಾಗಿ ಹರಡಿಸಬಲ್ಲದು. ಹಲವು ವರದಿಗಳ ಪ್ರಕಾರ, ಈ ಬೆಂಕಿ ಒಂದು ಬಾರಿ ಆರಂಭಗೊಂಡರೆ, ಅದನ್ನು ಆರಿಸುವುದು ಅತ್ಯಂತ ಕಷ್ಟಕರವಾಗಿದೆ.

ಇದನ್ನೂ ಓದಿ- ಹೆಜ್ಬೊಲ್ಲಾ ಮತ್ತು ಹಮಾಸ್: ಮಧ್ಯ ಪೂರ್ವದ ಸಮರದಲ್ಲಿ ಎರಡೂ ಸಂಘಟನೆಗಳ ಪಾತ್ರಗಳ ಅನಾವರಣ

ಬಿಳಿ ರಂಜಕ ಹೇಗೆ ಹರಡುತ್ತದೆ?
ಬಿಳಿ ರಂಜಕ ಆಯುಧಗಳ ಸಂಪರ್ಕಕ್ಕೆ ಬಂದಾಗ, ಮಾನವರಲ್ಲಿ ಅತ್ಯಂತ ಗಂಭೀರವಾದ ಉರಿ, ಉಸಿರಾಟದ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಆ ನಿಟ್ಟಿನಲ್ಲಿ ಈ ಆಯುಧಗಳು ಅತ್ಯಂತ ಗಂಭೀರವಾಗಿವೆ.

ಬಿಳಿ ರಂಜಕವನ್ನು ಉಸಿರಾಡಿದರೆ, ಆ ಗಾಳಿಯನ್ನು ನುಂಗಿದರೆ ಅಥವಾ ಅದು ಚರ್ಮವನ್ನು ಸ್ಪರ್ಶಿಸಿದರೂ ಅದು ದೇಹದೊಳಗೆ ಪ್ರವೇಶಿಸುತ್ತದೆ. ಬಿಳಿ ರಂಜಕ ಮೈ ಮತ್ತು ಬಟ್ಟೆಗಳ ಮೇಲೂ ಅಂಟಿಕೊಳ್ಳುತ್ತದೆ.

ಒಂದು ಬಾರಿ ಬಿಳಿ ರಂಜಕ ಆಯುಧಗಳನ್ನು ಬಿಡುಗಡೆಗೊಳಿಸಿದರೆ, ಅವುಗಳು ದಟ್ಟ ಹೊಗೆಯ ಕಾರಣದಿಂದ ವಾಯು ಮಾಲಿನ್ಯ ಉಂಟು ಮಾಡಬಲ್ಲವು. ಜಲ ಮೂಲಗಳ ಸಂಪರ್ಕಕ್ಕೆ ಬಂದರೆ ಅವು ನೀರನ್ನು ಮಲಿನಗೊಳಿಸಬಲ್ಲವು. ಆ ಮೂಲಕ ಮಿಲಿಯನ್ ಗಟ್ಟಲೆ ಜನರು ಮತ್ತು ಪ್ರಾಣಿಗಳಿಗೆ ಅಪಾಯ ತಂದೊಡ್ಡಬಲ್ಲವು.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ಬಿಳಿ ರಂಜಕವನ್ನು ಬಳಸಿ ಆಹಾರವನ್ನು ಮಲಿನಗೊಳಿಸುವಂತಿಲ್ಲ. ಈ ವರದಿಯ ವಿವರಗಳ ಪ್ರಕಾರ, ಬಿಳಿ ರಂಜಕವನ್ನು ಹೊಗೆಯ ರೂಪದಲ್ಲಿ ಬಿಡುಗಡೆಗೊಳಿಸಿದಾಗ, ಅದು ಕೃಷಿ ಉತ್ಪನ್ನಗಳನ್ನು ಮಲಿನಗೊಳಿಸುವುದಿಲ್ಲ. ಆದರೆ, ಗಾಳಿಯೊಡನೆ ಬೆರೆಯದ ಬಿಳಿ ರಂಜಕದ ಕಣಗಳು ಕೃಷಿ ಉತ್ಪನ್ನಗಳನ್ನು ಹಾಳುಗೆಡವಬಲ್ಲವು.

ಇದನ್ನೂ ಓದಿ- ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು

ಬಿಳಿ ರಂಜಕ ಬಾಂಬ್‌ಗಳ ಪ್ರಯೋಗವನ್ನು ನಿಷೇಧಿಸಲಾಗಿದೆಯೇ?
ಬಿಳಿ ರಂಜಕ ನೈಸರ್ಗಿಕವಾಗಿ ಲಭಿಸುವುದಿಲ್ಲ. ಇದನ್ನು ಫಾಸ್ಫೇಟ್ ಕಲ್ಲುಗಳಿಂದ ಉತ್ಪಾದಿಸಲಾಗುತ್ತದೆ. ಅಂತಾರಾಷ್ಟ್ರೀಯ ನಿಯಮಾವಳಿಗಳು ಬಿಳಿ ರಂಜಕದ ಶೆಲ್‌ಗಳನ್ನು ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಬಳಸದಂತೆ ನಿಷೇಧಿಸುತ್ತವೆ. ಆದರೆ ಈ ನಿಯಮಗಳು ಅದನ್ನು ತೆರೆದ ಪ್ರದೇಶಗಳಲ್ಲಿ ಸೇನಾಪಡೆಗಳಿಗೆ ಮರೆ ಒದಗಿಸಲು ಬಳಸಲು ಅನುಮತಿ ನೀಡುತ್ತವೆ.

ಬಿಳಿ ರಂಜಕ ಆಯುಧಗಳು ನಿಷೇಧಿತ ಆಯುಧಗಳಲ್ಲ. ಆದರೆ ಜನದಟ್ಟಣೆಯ ಪ್ರದೇಶಗಳಲ್ಲಿ ಅವುಗಳನ್ನು ಪ್ರಯೋಗಿಸುವುದನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗಿದೆ‌.

ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆ ಸಿರಿಯಾ, ಅಫ್ಘಾನಿಸ್ತಾನ ಮತ್ತು ಗಾಜಾದಂತಹ ಯುದ್ಧ ಪೀಡಿತ ಪ್ರದೇಶಗಳಲ್ಲಿ ಬಿಳಿ ರಂಜಕದ ಪ್ರಯೋಗದಿಂದ ಉಂಟಾದ ನಾಗರಿಕ ಸಾವು ನೋವುಗಳನ್ನು ದಾಖಲಿಸಿವೆ.

ಬಿಳಿ ರಂಜಕಗಳ ಹೆಚ್ಚುವರಿ ಉಪಯೋಗಗಳೇನು?
ಬಿಳಿ ರಂಜಕ ರಸಗೊಬ್ಬರಗಳಲ್ಲಿ, ಆಹಾರ ಉತ್ಪಾದನಾ ವರ್ಧಕವಾಗಿ ಮತ್ತು ಸ್ವಚ್ಛತಾ ಉತ್ಪನ್ನಗಳಲ್ಲಿ ಬಳಕೆಯಾಗುತ್ತದೆ.

ಆರಂಭದಲ್ಲಿ ಇದನ್ನು ಕೀಟನಾಶಕಗಳು ಮತ್ತು ಪಟಾಕಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಹಲವು ರಾಷ್ಟ್ರಗಳು ವಿವಿಧ ಉದ್ಯಮಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಿವೆ.

ಇದನ್ನೂ ಓದಿ- ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್

ಇಸ್ರೇಲ್ ಈ ಮೊದಲು ಬಿಳಿ ರಂಜಕ ಬಾಂಬ್‌ಗಳನ್ನು ಬಳಸಿತ್ತೇ?
ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಯ ವರದಿಯೊಂದರ ಪ್ರಕಾರ, ಡಿಸೆಂಬರ್ 27, 2008ರಿಂದ ಜನವರಿ 18, 2009ರ ತನಕ ನಡೆದ 22 ದಿನಗಳ ಮಿಲಿಟರಿ ಕಾರ್ಯಾಚರಣೆ 'ಆಪರೇಶನ್ ಕಾಸ್ಟ್ ಲೀಡ್' ಸಂದರ್ಭದಲ್ಲಿ ಇಸ್ರೇಲ್ ಬಿಳಿ ರಂಜಕ ಆಯುಧಗಳನ್ನು ಅಪಾರವಾಗಿ ಬಳಸಿಕೊಂಡಿತ್ತು.

ಆದರೆ, ಈ ವರದಿ ಗಾಜಾದಲ್ಲಿ ನಾಗರಿಕರ ಸಾವಿಗೆ ಬಿಳಿ ರಂಜಕ ಕಾರಣವಾಗಿಲ್ಲ ಎಂದಿದ್ದು, ಹೆಚ್ಚಿನ ಸಾವುಗಳು ಕ್ಷಿಪಣಿಗಳ ಕಾರಣದಿಂದ, ಬಾಂಬ್‌ಗಳ ಪ್ರಯೋಗದಿಂದ, ಆರ್ಟಿಲರಿ ಪ್ರಯೋಗದಿಂದ, ಟ್ಯಾಂಕ್ ಶೆಲ್‌ಗಳಿಂದ, ಮತ್ತು ಸಣ್ಣ ಆಯುಧಗಳ ಪ್ರಯೋಗದಿಂದ ಸಂಭವಿಸಿವೆ ಎಂದಿದೆ.

ಅದರೊಡನೆ, ಬಿಳಿ ರಂಜಕವನ್ನು ಹೆಚ್ಚು ಜನದಟ್ಟಣೆಯ ಪ್ರದೇಶಗಳಲ್ಲಿ ಬಳಸುವುದು ಅಂತಾರಾಷ್ಟ್ರೀಯ ಮಾನವೀಯತೆಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎನ್ನಲಾಗಿದ್ದು, ಈ ನಿಯಮಗಳು ಇಂತಹ ಪ್ರಯೋಗಗಳ ಸಂದರ್ಭದಲ್ಲಿ ನಾಗರಿಕರಿಗೆ ಹಾನಿಯಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎನ್ನುತ್ತದೆ.

ಇಸ್ರೇಲ್ - ಹಮಾಸ್ ಕದನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣಗಳು? 
ವಿಶ್ವಸಂಸ್ಥೆ ಪ್ರಸ್ತುತ ನಡೆಯುತ್ತಿರುವ ಹಮಾಸ್ - ಇಸ್ರೇಲ್ ಯುದ್ಧದಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವಿಚಾರಣೆ ನಡೆಸುತ್ತಿದ್ದು, ಸಂಭಾವ್ಯ ಯುದ್ಧಾಪರಾಧಗಳು ಘಟಿಸಿವೆ ಎನ್ನಲು ಸೂಕ್ತ ಸಾಕ್ಷಿಗಳು ಲಭ್ಯವಾಗಿವೆ ಎಂದಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ವಿಚಾರಣಾ ಸಮಿತಿ ಯಾರೇ ಆದರೂ ಅಂತರಾಷ್ಟ್ರೀಯ ಕಾನೂನುಗಳನ್ನು ಮೀರಿ, ಅಮಾಯಕ ನಾಗರಿಕರ ಮೇಲೆ ದಾಳಿ, ಹಲ್ಲೆ ನಡೆಸಿದ್ದರೆ ಅವರನ್ನು ಜವಾಬ್ದಾರರನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದೆ.

ಮೇ 2021ರಲ್ಲಿ ಸ್ಥಾಪಿಸಲಾಗಿರುವ ಕಮಿಷನ್ ಆಫ್ ಇನ್‌ಕ್ವೈರಿ (ಸಿಒಐ) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅತ್ಯುನ್ನತ ವಿಚಾರಣಾ ಸಂಸ್ಥೆಯಾಗಿದೆ. ಇದು ಎಲ್ಲ ರೀತಿಯ ಅಂತಾರಾಷ್ಟ್ರೀಯ ಮಾನವತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಕುರಿತು ವಿಚಾರಣೆ ನಡೆಸುತ್ತದೆ.

ಈ ಸ್ವತಂತ್ರ ಸಮಿತಿ ತಾನು ಈಗಾಗಲೇ ಸಕ್ರಿಯವಾಗಿ ಎಲ್ಲ ಪಕ್ಷಗಳು ನಡೆಸಿರುವ ಯುದ್ಧಾಪರಾಧಗಳಿಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಂಗ್ರಹಿಸಿ, ಅವುಗಳನ್ನು ಸುರಕ್ಷಿತವಾಗಿಡುವ ಕಾರ್ಯ ನಡೆಸುತ್ತಿದ್ದೇನೆ ಎಂದಿದೆ.

ಲೇಖಕರು- ಗಿರೀಶ್ ಲಿಂಗಣ್ಣ
( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News