ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದೂಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮತ್ತು  ಜಪಾನ್ ಪ್ರಧಾನಿ ಶಿಂಜೊ ಅಬೆ ಒಪ್ಪಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬ್ಯಾಚ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ, ಅಬೆ ಅವರು ಒಲಿಂಪಿಕ್ಸ್‌ಗೆ ಒಂದು ವರ್ಷದ ವಿಳಂಬವನ್ನು ಪ್ರಸ್ತಾಪಿಸಿದ್ದಾರೆ ಮತ್ತು ಐಒಸಿ ಅಧ್ಯಕ್ಷರು ತಮ್ಮ ಆಲೋಚನೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಹೇಳಿದರು.ಅವರು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ರದ್ದು ಮಾಡುವುದಿಲ್ಲ ಎಂದು ಧೃಪಡಿಸಿದ್ದಾರೆ ಎಂದು ಅಬೆ ಹೇಳಿದರು.


ಈ ಬೆಳವಣಿಗೆ ಕುರಿತಾಗಿ ಮಾತನಾಡಿದ ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರು 2021ರ ಬೇಸಿಗೆಯಲ್ಲಿ ಪಂದ್ಯಗಳನ್ನು ನಡೆಸುವ ಗುರಿ ಹೊಂದಿದ್ದಾರೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ನಡೆಸುವ ಸಾಧ್ಯತೆಯಿಲ್ಲ ಎಂದು ಹೇಳಿದರು.



1896 ರಲ್ಲಿ ಆಧುನಿಕ ಒಲಿಂಪಿಕ್ಸ್ ಜನ್ಮ ತಾಳಿದಾಗಿನಿಂದಲೂ ಅದನ್ನು ಎಂದಿಗೂ ಮುಂದೂಡಲಾಗಿಲ್ಲ, ಆದಾಗ್ಯೂ ಯುದ್ಧದ ಕಾರಣ 1916, 1940 ಮತ್ತು 1944 ರಲ್ಲಿ ಅವುಗಳನ್ನು ರದ್ದುಗೊಳಿಸಲಾಯಿತು.


ಈ ವಿಳಂಬವು ಆತಿಥೇಯ ಜಪಾನ್‌ಗೆ ಒಂದು ದೊಡ್ಡ ಹೊಡೆತವಾಗಲಿದೆ ಮತ್ತು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿಣಾಮವನ್ನು ಬೀರಲಿದೆ. ಅಷ್ಟೇ ಅಲ್ಲದೆ ಇದು ಒಲಿಂಪಿಕ್ ಸಂಘಟಕರಿಗೆ ಸಾಕಷ್ಟು ವ್ಯವಸ್ಥಾಪಕ ಸವಾಲುಗಳನ್ನು ಒಡ್ಡಲಿದೆ ಎನ್ನಲಾಗಿದೆ.


ಟೋಕಿಯೊ ಸಂಘಟನಾ ಸಮಿತಿಯು ಒಲಂಪಿಕ್ ಕ್ರೀಡಾಕೂಟವನ್ನು ನಡೆಸಲು 1.35 ಟ್ರಿಲಿಯನ್ ಯೆನ್  ಅವಶ್ಯಕತೆ ಇದೆ ಎಂದು ಹೇಳಿದೆ, ಆದರೆ ಕ್ರೀಡಾ ದುಂದುಗಾರಿಕೆಗೆ ಸಂಬಂಧಿಸಿದ ನಿಜವಾದ ಖರ್ಚು 3 ಟ್ರಿಲಿಯನ್ ಯೆನ್‌ಗಳಷ್ಟು ದೊಡ್ಡದಾಗಿದೆ ಎಂದು ಜಪಾನಿನ ಲೆಕ್ಕಪರಿಶೋಧನೆ ಮಂಡಳಿ ತಿಳಿಸಿದೆ.