ನವದೆಹಲಿ: ಜಾಗತಿಕ ಪಿಡುಗು  ಕೊರೊನಾವೈರಸ್  (Coronavirus)  ವಿರುದ್ಧದ ಹೋರಾಟಕ್ಕೆ ಉದ್ಯಮಿಗಳು, ಸೆಲಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಕೆಲವರದು ಉದಾರತೆಯಾದರೆ ಕೆಲವರದು ಸಾಂಕೇತಿಕ ಸಹಾಯ. ಆದರೆ ಇದುವರೆಗೆ ಕೊರೋನಾ ಎಂಬ ಮಹಾಮಾರಿಯ ವಿರುದ್ಧದ ಮಹಾಹೋರಾಟಕ್ಕೆ ಅತಿ‌ ಹೆಚ್ಚು‌ ಮೊತ್ತದ ನೆರವು ನೀಡಿರುವ ವ್ಯಕ್ತಿ ಯಾರು ಗೊತ್ತಾ? ಅದು ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಜಾಕ್ ಡಾರ್ಸೆ (Jack Dorsey).


COMMERCIAL BREAK
SCROLL TO CONTINUE READING

ದಂಡಿಗಟ್ಟಲೆ ದುಡಿಯುವವರೆಲ್ಲಾ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡುವುದಿಲ್ಲ. ಸಿರಿವಂತರಿಗೆ ಕರುಳು‌ ಚುರುಕ್ ಎನ್ನುವುದು‌‌ ಕಮ್ಮಿ ಎಂಬುವುದಕ್ಕೆ ಜಾಕ್ ಡಾರ್ಸೆ ಅಪವಾದ. ಅವರು ಕೊರೋನಾ ಸಂಕಷ್ಟಕ್ಕೆ ಮರುಗಿ ನೀಡಿರುವ ನೆರವು ಅವರ ವೈಯಕ್ತಿಕ ಸಂಪತ್ತಿನ ಶೇಕಡಾ 28ರಷ್ಟನ್ನು. ಅಂದರೆ ಬರೊಬ್ಬರಿ 1 ಬಿಲಿಯನ್ ಹಣವನ್ನು. ಇದು ಈವರೆಗೆ ಕೊರೋನಾ ವಿರುದ್ಧದ ಮಹಾಹೋರಾಟಕ್ಕೆ ವ್ಯಕ್ತಿಯೊಬ್ಬರು ನೀಡಿರುವ ಅತಿದೊಡ್ಡ ನೆರವಾಗಿದೆ.


ಕೋವಿಡ್ -19 (Covid-19)  ಸಂಕಷ್ಟಕ್ಕೆ ಸ್ಪಂದಿಸಿದ ಬಗ್ಗೆ ಸರಣಿ ಟ್ವೀಟ್ ಗಳ ಮೂಲಕ ಮಾಹಿತಿ ನೀಡಿರುವ 43 ವರ್ಷದ ಜಾಕ್ ಡಾರ್ಸೆ, ತಮ್ಮ ಸಂಪತ್ತಿನ ಶೇ.28 ರಷ್ಟು ಈಕ್ವಿಟಿಯನ್ನು ಡಿಜಿಟಲ್ ಪಾವತಿ ಮೂಲಕ ಕೊರೋನಾ ಪರಿಹಾರಕ್ಕೆ ಹೋರಾಡುತ್ತಿರುವ ಸ್ಟಾರ್ಟ್ ಸ್ಮಾಲ್‌ಗೆ ನಾನು ವರ್ಗಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.


TWITTER CEO ಜ್ಯಾಕ್ ಡೋರ್ಸಿ ಅವರ ಕುರಿತ ಈ ಮಾಹಿತಿ ನಿಮಗೆ ತಿಳಿದಿದೆಯೇ?


ಕೊರೋನಾ ಅಮೆರಿಕದ ಜನ ಜೀವನ ಅಸ್ತವ್ಯಸ್ತವಾಗುವಂತೆ ಮಾಡಿದೆ. ವಿಶ್ವಸ ಆರ್ಥಿಕತೆಯನ್ನು ವಿನಾಶದತ್ತ ದೂಡಿದೆ. ಕೊರೋನಾ ಬೀರುತ್ತಿರುವ ದುಷ್ಪರಿಣಾಮಗಳು ಅಂದಾಜಿಗೂ ನಿಲುಕಲಾರದವು. ಆದುದರಿಂದ ಈ ಕಡುಕಷ್ಟದ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ, ನೊಂದವರಿಗೆ, ಸಂತ್ರಸ್ತರಿಗೆ, ಸಂಬಂಧಿಸಿದ ಸರ್ಕಾರಗಳಿಗೆ ದುಪ್ಪಟ್ಟು ಸಹಾಯ ಮಾಡುವುದು ಅಗತ್ಯವಾಗಿದೆ. ನನ್ನ ಕೆಲಸ ಬೇರೆಯವರಿಗೂ ಮಾದರಿಯಾಗುತ್ತದೆ, ಸ್ಫೂರ್ತಿಯಾಗುತ್ತದೆ ಎಂದು ಭಾವಿಸಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಕೊರೋನಾ ವೈರಸ್‌ ಈಗಾಗಲೇ ವಿಶ್ವದಾದ್ಯಂತ 16 ಲಕ್ಷ‌ಕ್ಕೂ ಜನರಿಗೆ ತಗುಲಿದೆ. ಸುಮಾರು ಒಂದು ಲಕ್ಷ ಜನ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ಪೀಡಿತ ಎಲ್ಲಾ ದೇಶಗಳ ಆರ್ಥಿಕತೆ ಭಾರೀ ಪೆಟ್ಟುಬಿದ್ದಿದೆ.  ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೆರವಿನ ಅಗತ್ಯ ಇದೆ. ದೊಡ್ಡ ಮಟ್ಟದಲ್ಲಿ ದೇಣಿಗೆ ಬರುತ್ತಿದೆ.