US Election Result 2020: ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?
ಅಮೇರಿಕಾದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಜೋ ಬೈಡನ್ ಹಾಗೂ ಉಪರಾಷ್ಟ್ರಪತಿಯಾಗಿ ಆಯ್ಕೆಗೊಂಡ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಮೆರಿಕಾದಲ್ಲಿ ನೂತನ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಗೊಂಡ ಜೋ ಬೈಡನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂಬರುವ ಸಮಯದಲ್ಲಿ, ಅಮೆರಿಕದ ಹೊಸ ಅಧ್ಯಕ್ಷರೊಂದಿಗೆ ಕೆಲಸ ಮಾಡುವ ಮೂಲಕ ಇಂಡೋ-ಯುಎಸ್ ಸಂಬಂಧವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಆಶಿಸಿದ್ದಾರೆ. ಇದರೊಂದಿಗೆ ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಕೂಡ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ನೂತನವಾಗಿ ಅಮೆರಿಕಾದ ಅಧ್ಯಕ್ಷರಾಗಿ ಚುನಾಯಿತಗೊಂಡ ಜೋ ಬೈಡನ್ ಅವರಿಗೆ ಅಭಿನಂದನೆ ಸಲ್ಲಿಸಲು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ "ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು ಜೋ ಬಿಡೆನ್! ಉಪಾಧ್ಯಕ್ಷರಾಗಿ ಕೆಲಸ ಮಾಡುವಾಗ ಇಂಡೋ-ಯುಎಸ್ ಸಂಬಂಧಗಳನ್ನು ಬಲಪಡಿಸುವಲ್ಲಿ ನಿಮ್ಮ ಕೊಡುಗೆ ಗಮನಾರ್ಹ ಮತ್ತು ಅಮೂಲ್ಯವಾದುದು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾವು ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ಭಾವಿಸುತ್ತೇನೆ." ಎಂದಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಎಲೆಕ್ಷನ್ 2020 ರಲ್ಲಿ ರಾಷ್ಟ್ರದ ಉಪಾಧ್ಯಕ್ಷ ಚುನಾಯಿತ ಗೊಂಡ ಭಾರತೀಯ ವಂಶದ ಕಮಲಾ ಹ್ಯಾರಿಸ್ ಅವರನ್ನು ಸಹ ಅಭಿನಂದಿಸಿದ್ದಾರೆ. ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಲು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ 'ಕಮಲಾ ಹ್ಯಾರಿಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಗೆಲುವು ಎಲ್ಲಾ ಭಾರತೀಯ-ಅಮೆರಿಕನ್ನರಿಗೆ ಬಹಳ ಹೆಮ್ಮೆಯ ವಿಷಯವಾಗಿದೆ. ನಿಮ್ಮ ಬೆಂಬಲ ಮತ್ತು ನಾಯಕತ್ವದಿಂದ ಭಾರತ-ಯುಎಸ್ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬುದು ನನಗೆ ಖಾತ್ರಿಯಿದೆ. ' ಎಂದಿದ್ದಾರೆ.