• ತನ್ನ ದಂಗೆಯನ್ನು ಕೊನೆಗೊಳಿಸಿದ ಬಳಿಕವೂ, ಖಾಸಗಿ ಸೇನಾ ಮುಖಂಡ ಪ್ರಿಗೊಝಿನ್ ಒಂದು ವೇಳೆ ಇವೆಲ್ಲವನ್ನೂ ಬಿಟ್ಟು, ಬೆಲಾರಸ್‌ನಲ್ಲಿ ನೆಲೆಯಾಗದಿದ್ದರೆ, ಆತ ಖಂಡಿತಾ ಕ್ರೆಮ್ಲಿನ್ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡಲಿದ್ದಾನೆ •


COMMERCIAL BREAK
SCROLL TO CONTINUE READING

ಯೆವ್‌ಗೆನಿ ಪ್ರಿಗೊಝಿನ್ ಮುಂದಿನ ಹಾದಿಯೇನು?
ಕ್ರೆಮ್ಲಿನ್ ವಕ್ತಾರರಾದ ಡಿಮಿಟ್ರಿ ಪೆಸ್ಕೋವ್ ಶನಿವಾರ ದಂಗೆಯ ಕುರಿತು ಮಾಹಿತಿ ನೀಡಿ, ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್‌ಗೆನಿ ಪ್ರಿಗೊಝಿನ್ ರಷ್ಯಾದೊಡನೆ ಒಪ್ಪಂದ ಕೈಗೊಂಡಿದ್ದು, ಅದರಂತೆ ತನ್ನ ದಂಗೆಯನ್ನು ಕೊನೆಗೊಳಿಸಿ, ರಷ್ಯಾ ಬಿಟ್ಟು ಬೆಲಾರಸ್‌ಗೆ ತೆರಳಲಿದ್ದಾನೆ. ಇದಕ್ಕೆ ಪ್ರತಿಯಾಗಿ, ದಂಗೆ ನಡೆಸಿದ್ದಕ್ಕಾಗಿ ಆತನ ವಿರುದ್ಧದ ವಿಚಾರಣೆಗಳನ್ನು ರಷ್ಯಾ ಕೈಬಿಡಲಿದೆ. ಪೆಸ್ಕೋವ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರು ಪ್ರಿಗೊಝಿನ್ ವೈಯಕ್ತಿಕ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದಿದ್ದಾರೆ.


ಖಾಸಗಿ ಸೇನಾ ಮುಖಂಡ ಈಗ ಎಲ್ಲಿದ್ದಾನೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಆತ ಶನಿವಾರ ಸಂಜೆ ರಷ್ಯಾದ ರೋಸ್ತೋವ್ - ಆನ್ - ಡಾನ್ ನಗರದಿಂದ ಹೊರಡುವಾಗ, ಜನರಿಂದ ಸುತ್ತುವರಿದಿದ್ದು ಕಂಡಿತ್ತು.


ಆ ನಗರದಿಂದ ಆತ ಹೊರನಡೆಯುವ ಕೆಲ ಸಮಯ ಮೊದಲು ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಪ್ರಿಗೊಝಿನ್ ತಾನು ಬೆಲಾರಸ್‌ಗೆ ಆಶ್ರಯಕ್ಕಾಗಿ ತೆರಳುತ್ತಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅದರ ಬದಲು, ಅವನು ರಷ್ಯನ್ ಸೈನಿಕರೊಡನೆ ಯುದ್ಧ ಮಾಡುತ್ತಿದ್ದ ತನ್ನ ಸೇನೆಗೆ ಪೂರ್ವ ಉಕ್ರೇನಿನ ರಷ್ಯಾ ವಶಪಡಿಸಿಕೊಂಡ ನೆಲೆಗಳಿಗೆ ಮರಳುವಂತೆ ಸೂಚಿಸಿರುವುದಾಗಿ ಹೇಳಿದ್ದ.


ಇದನ್ನೂ ಓದಿ- ಟೈಟಾನಿಕ್ ಅವಶೇಷಗಳೆಡೆಗೆ ಪ್ರಯಾಣ: ದುರ್ಘಟನೆಯ ಅನಾವರಣ


ಸದಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದ ಪ್ರಿಗೊಝಿನ್ ಆ ಬಳಿಕ ಅಸಹಜವಾಗಿ ಮೌನವಾಗಿದ್ದಾನೆ. ಆತನ ಭವಿಷ್ಯದ ಕುರಿತು ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭ್ಯವಿಲ್ಲ. ಇನ್ನು ಆತನ ವೈಯಕ್ತಿಕ ಸ್ವಾತಂತ್ರ್ಯ, ಸುರಕ್ಷತೆ ಆತ ಬೆಲಾರಸ್‌ನಲ್ಲಿ ಏನು ಮಾಡುತ್ತಾನೆ ಅನ್ನುವುದರ ಮೇಲೆ ನಿರ್ಧಾರಿತವಾಗಲಿದೆ.


ಈ ದಂಗೆಯ ಪರಿಣಾಮವಾಗಿ, ವ್ಲಾಡಿಮಿರ್ ಪುಟಿನ್ ಅವರ ಅಧಿಕಾರ ಮತ್ತು ಗೌರವಕ್ಕೆ ಧಕ್ಕೆ ಬಂದಿರುವುದಂತೂ ನಿಜ. ಇನ್ನು ಮುಂದೆಯೂ ಪ್ರಿಗೊಝಿನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕ್ರೆಮ್ಲಿನ್ ಮೇಲಿನ ನಂಬಿಕೆ ಇನ್ನಷ್ಟು ಕಡಿಮೆಯಾಗುವಂತೆ ಮಾಡಬಹುದು. ಆದರೆ ಪ್ರಿಗೊಝಿನ್ ಅತ್ಯಂತ ನಿಷ್ಕರುಣಿ ಮತ್ತು ಮಹತ್ವಾಕಾಂಕ್ಷಿ ವ್ಯಕ್ತಿ ಎಂದೇ ಪರಿಚಿತನಾಗಿದ್ದು, ಆತ ಬೆಲಾರಸ್‌ನಲ್ಲಿ ಅಷ್ಟು ಸುಲಭವಾಗಿ ನಿವೃತ್ತ ಜೀವನ ನಡೆಸಲು ಒಪ್ಪುತ್ತಾನೆಯೇ ಎನ್ನುವುದೇ ಒಂದು ಸವಾಲಾಗಿದೆ.


ವ್ಯಾಗ್ನರ್ ಸೈನಿಕರು ಈಗ ಎಲ್ಲಿದ್ದಾರೆ?
ಪ್ರಿಗೊಝಿನ್ ಶುಕ್ರವಾರ ತನ್ನ ದಂಗೆಯನ್ನು ಘೋಷಿಸಿದ ಸಂದರ್ಭದಲ್ಲಿ, ತನ್ನ ಬಳಿ 25,000 ಸೈನಿಕರ ಪಡೆ ಇರುವುದಾಗಿ ಘೋಷಿಸಿದ್ದ. ಆತ ರಾಸ್ತಾವ್ - ಆನ್ - ಡಾನ್ ನಗರದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ, 5,000 ಸೈನಿಕರ ತಂಡವನ್ನು ಇನ್ನೂ ಉತ್ತರಕ್ಕೆ, ಅಂದರೆ ಮಾಸ್ಕೋ ನಗರದ ಕಡೆ ಕಳುಹಿಸಿದ್ದ. ಆದರೆ ಆ ಸೈನಿಕರು ಮಾಸ್ಕೋದ ದಕ್ಷಿಣದಲ್ಲಿ 250 ಮೈಲಿ ದೂರದ ಲಿಪೆಟ್ಸ್ಕ್ ಪ್ರಾಂತ್ಯದಲ್ಲಿದ್ದಾಗ ಅವರಿಗೆ ಅಲ್ಲೇ ನಿಲ್ಲುವಂತೆ ಪ್ರಿಗೊಝಿನ್ ಆದೇಶಿಸಿದ.


ಲಿಪೆಟ್ಸ್ಕ್ ಪ್ರಾಂತ್ಯದ ಮುಖ್ಯಸ್ಥ, ಭಾನುವಾರ ಬೆಳಗ್ಗೆ ಈ ಕುರಿತು ಮಾಹಿತಿ ನೀಡಿ, ವ್ಯಾಗ್ನರ್ ಪಡೆಗಳ ಸೈನಿಕರೆಲ್ಲರೂ ಈ ಪ್ರದೇಶದಿಂದ ತೆರಳಿದ್ದಾರೆ ಎಂದಿದ್ದ. ಶನಿವಾರ ಸಂಜೆ ಪ್ರಿಗೊಝಿನ್ ಜೊತೆ ಆತನ ಖಾಸಗಿ ಸೇನೆಯ ಸೈನಿಕರೂ ರೋಸ್ತೊವ್ - ಆನ್ - ಡಾನ್ ನಗರದಿಂದ ತೆರಳುವುದರ ವೀಡಿಯೋ ಚಿತ್ರಣವೂ ಹೊರಬಂದಿದೆ. ಆದರೆ ಪ್ರಿಗೊಝಿನ್ ಹೇಳಿದಂತೆ ಆತನ ಎಲ್ಲ ಸೈನಿಕರೂ ಪೂರ್ವ ಉಕ್ರೇನಿನ ನೆಲೆಗಳಿಗೆ ತೆರಳಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.


ವ್ಯಾಗ್ನರ್ ಪಡೆಗಳ ಮುಂದೊತ್ತುವಿಕೆ 24 ಗಂಟೆಗಳಿಗಿಂತಲೂ ಕಡಿಮೆಯಾಗಿದ್ದರೂ, ಆ ಗುಂಪು ರಷ್ಯನ್ ಸೇನೆಗೆ ಒಂದಷ್ಟು ಹಾನಿ ಉಂಟುಮಾಡಿರುವಂತೆ ಕಂಡುಬರುತ್ತಿದೆ. ರೈಬಾರ್ ಎಂಬ ರಷ್ಯಾದ ಪ್ರಮುಖ ಟೆಲಿಗ್ರಾಮ್ ಚಾನೆಲ್‌ನಲ್ಲಿ ವ್ಯಾಗ್ನರ್ ಸೈನಿಕರು ಏಳು ರಷ್ಯನ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದು, 20 ರಷ್ಯನ್ ಸೈನಿಕರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- ಅಧಿಕಾರಕ್ಕಾಗಿ ರಕ್ಷಣಾ ಸಚಿವಾಲಯದೊಡನೆ ಕದನಕ್ಕಿಳಿದ 'ಪುಟಿನ್ ಅಡುಗೆಯವ' ಪ್ರಿಗೊಝಿನ್


ವ್ಯಾಗ್ನರ್ ಗುಂಪು ಇಲ್ಲಿಗೆ ಕೊನೆಯಾಗಲಿದೆಯೇ?
ಕಳೆದ ಕೆಲ ವರ್ಷಗಳಲ್ಲಿ ಆಫ್ರಿಕಾ, ಮಧ್ಯಪೂರ್ವ ಪ್ರದೇಶ ಹಾಗೂ ಇತ್ತೀಚೆಗೆ ಉಕ್ರೇನ್‌ನಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಪ್ರಿಗೊಝಿನ್ ವ್ಯಾಗ್ನರ್ ಗುಂಪನ್ನು ಅತ್ಯಂತ ಶಕ್ತಿಶಾಲಿ ಪಡೆಯನ್ನಾಗಿ ಬೆಳೆಸಿದ್ದ.


ಆದರೆ ಶನಿವಾರ ಕ್ರೆಮ್ಲಿನ್ ವ್ಯಾಗ್ನರ್ ಗುಂಪನ್ನು ವಿಸರ್ಜಿಸುವ ಕುರಿತು ಸುಳಿವು ನೀಡಿದ್ದು, ರಷ್ಯಾ ವಿರುದ್ಧ ದಂಗೆಯಲ್ಲಿ ಪಾಲ್ಗೊಳ್ಳದ ವ್ಯಾಗ್ನರ್ ಗುಂಪಿನ ಯೋಧರಿಗೆ ರಕ್ಷಣಾ ಸಚಿವಾಲಯದ ಗುತ್ತಿಗೆ ನೀಡುವುದಾಗಿ ಪೆಸ್ಕೋವ್ ಹೇಳಿದ್ದಾರೆ.


ವ್ಲಾಡಿಮಿರ್ ಪುಟಿನ್ ಈ ಮೊದಲೇ ಎಲ್ಲ ಸ್ವಯಂಸೇವಕ ತಂಡಗಳು ಗುತ್ತಿಗೆಗೆ ಸಹಿ ಹಾಕಿ, ಜುಲೈ 1ರ ಮೊದಲೇ ಅವರೆಲ್ಲರನ್ನೂ ರಕ್ಷಣಾ ಸಚಿವ ಸೆರ್ಗೇ ಶೊಯ್ಗು ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಆದೇಶಿಸಿದ್ದರು.


ಈ ಹಿಂದೆ ವ್ಯಾಗ್ನರ್ ಸೈನಿಕರು ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರನ್ನು ಕಾನೂನು ಕ್ರಮಗಳಿಂದ ಹೊರಗಿಡಲಾಗುವುದು ಎಂದು ಪೆಸ್ಕೋವ್ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.