ಟೈಟಾನಿಕ್ ಅವಶೇಷಗಳೆಡೆಗೆ ಪ್ರಯಾಣ: ದುರ್ಘಟನೆಯ ಅನಾವರಣ

Titanic: ಟೈಟಾನ್ ಎನ್ನುವುದು ಅತ್ಯಂತ ಸೂಕ್ಷ್ಮವಾಗಿ ನಿರ್ಮಿಸಿರುವ 6.7 ಮೀಟರ್ ಉದ್ದನೆಯ ಸಬ್‌ಮರೀನ್ ಆಗಿದ್ದು, ಜೂನ್ 18ರಂದು 11 ಗಂಟೆಗಳ ಅವಧಿಯ ಆಳ ಸಮುದ್ರ ಪ್ರಯಾಣ ಆರಂಭಿಸಿದ ಒಂದು ಗಂಟೆ ನಲ್ವತ್ತು ನಿಮಿಷಗಳ ಅವಧಿಯಲ್ಲೇ ರೇಡಾರ್ ಕಣ್ಣಿನಿಂದ ಮರೆಯಾಯಿತು. ಆಳ ಸಮುದ್ರದಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ, 96 ಗಂಟೆಗಳ ಆಮ್ಲಜನಕ ವ್ಯವಸ್ಥೆ ಇದ್ದರೂ, ಟೈಟಾನ್‌ನ ಕೊನೆಯ ಪ್ರಯಾಣ ಅದು ನೋಡಲು ಹೊರಟ ಟೈಟಾನಿಕ್ ಹಡಗಿನಂತೆಯೇ ದುರಂತ ಅಂತ್ಯ ಕಂಡಿತು.

Written by - Girish Linganna | Edited by - Yashaswini V | Last Updated : Jun 26, 2023, 10:55 AM IST
  • ಮುಳುಗಿ ಹೋದ ಪ್ರಖ್ಯಾತ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸುವ ಎಂಟು ದಿನಗಳ ಪ್ರವಾಸಕ್ಕೆ ಈ ಕಂಪನಿ ಪ್ರತಿಯೊಬ್ಬ ಖಾಸಗಿ ಪ್ರವಾಸಿಗನಿಗೂ 2,50,000 ಡಾಲರ್ ಶುಲ್ಕ ವಿಧಿಸುತ್ತದೆ.
  • ಟೈಟಾನಿಕ್ ಹಡಗು ಅಟ್ಲಾಂಟಿಕ್ ಸಮುದ್ರದ ತಳದಲ್ಲಿ, 3,800 ಮೀಟರ್ ಆಳದಲ್ಲಿದೆ.
  • ಇದು ಈಶಾನ್ಯ ಕೆನಡಾದ ನ್ಯೂ ಫೌಂಡ್‌ಲ್ಯಾಂಡ್ ದ್ವೀಪದಿಂದ 600 ಕಿಲೋಮೀಟರ್ ದೂರದಲ್ಲಿದೆ.
ಟೈಟಾನಿಕ್ ಅವಶೇಷಗಳೆಡೆಗೆ ಪ್ರಯಾಣ: ದುರ್ಘಟನೆಯ ಅನಾವರಣ title=
Journey to the Titanic Ruins

Journey to the Titanic Ruins: ಮುಳುಗಿ ಹೋದ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗಾಗಿ ಸಾಗರದಾಳಕ್ಕೆ ಪ್ರಯಾಣ ಬೆಳೆಸಿದ ಟೈಟಾನ್ ಸಬ್‌ಮರೀನ್ ಜೂನ್ 18ರಂದು ಕಣ್ಮರೆಯಾಯಿತು. 11 ಗಂಟೆಯ ಅವಧಿಯ ಮುಳುಗುವಿಕೆ ಆರಂಭಗೊಂಡ ಬಳಿಕ, ಒಂದು ಗಂಟೆ ನಲ್ವತ್ತೈದು ನಿಮಿಷಗಳಲ್ಲೇ 6.7 ಮೀಟರ್ ಉದ್ದದ ಸಬ್‌ಮರೀನ್ ಕಣ್ಮರೆಯಾಯಿತು. ಸಬ್‌ಮರೀನ್ ಒಳಗೆ 96 ಗಂಟೆಗಳಿಗೆ ಬೇಕಾಗುವಷ್ಟು ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಈ ಟೈಟಾನ್ ಸಾಗರದಾಳಕ್ಕೆ ಡೈವಿಂಗ್ ನಡೆಸುವವರಿಗಾಗಿ ನಿರ್ಮಿಸಿರುವ 'ಸಬ್‌ಮರ್ಸಿಬಲ್' ಆಗಿದ್ದು, 4,000 ಮೀಟರ್‌ಗಳ ಆಳಕ್ಕೆ ಇಳಿಯುವ (ಡೈವಿಂಗ್ ಡೆಪ್ತ್) ಮತ್ತು ಗಂಟೆಗೆ 5.5 ಕಿಲೋಮೀಟರ್ ಅಥವಾ 3 ನಾಟ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಡೈವಿಂಗ್ ಡೆಪ್ತ್ ಎನ್ನುವುದು ಒಂದು ಸಬ್‌ಮರೀನ್ ಗರಿಷ್ಠ ಎಷ್ಟು ಆಳದಲ್ಲಿ ಕಾರ್ಯಾಚರಿಸಬಲ್ಲದು ಎನ್ನುವ ಮಿತಿಯಾಗಿದೆ.

ನಿಗೂಢವಾದ ಕಣ್ಮರೆ!
ಟೈಟಾನ್ ಎನ್ನುವುದು ಅತ್ಯಂತ ಸೂಕ್ಷ್ಮವಾಗಿ ನಿರ್ಮಿಸಿರುವ 6.7 ಮೀಟರ್ ಉದ್ದನೆಯ ಸಬ್‌ಮರೀನ್ ಆಗಿದ್ದು, ಜೂನ್ 18ರಂದು 11 ಗಂಟೆಗಳ ಅವಧಿಯ ಆಳ ಸಮುದ್ರ ಪ್ರಯಾಣ ಆರಂಭಿಸಿದ ಒಂದು ಗಂಟೆ ನಲ್ವತ್ತು ನಿಮಿಷಗಳ ಅವಧಿಯಲ್ಲೇ ರೇಡಾರ್ ಕಣ್ಣಿನಿಂದ ಮರೆಯಾಯಿತು. ಆಳ ಸಮುದ್ರದಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ, 96 ಗಂಟೆಗಳ ಆಮ್ಲಜನಕ ವ್ಯವಸ್ಥೆ ಇದ್ದರೂ, ಟೈಟಾನ್‌ನ ಕೊನೆಯ ಪ್ರಯಾಣ ಅದು ನೋಡಲು ಹೊರಟ ಟೈಟಾನಿಕ್ ಹಡಗಿನಂತೆಯೇ ದುರಂತ ಅಂತ್ಯ ಕಂಡಿತು.

ಸಬ್‌ಮರ್ಸಿಬಲ್‌ಗಳನ್ನು ನಿರ್ಮಿಸುವ ಓಶನ್‌ಗೇಟ್ ಎಂಬ ಸಂಸ್ಥೆ ತನ್ನ ಜಾಲತಾಣದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು 2021 ಹಾಗೂ 2022ರಲ್ಲಿ ಯಶಸ್ವಿ ಪಯಣ ನಡೆಸಿದ ಬಳಿಕ, ಇಂತಹ ಡೈವಿಂಗ್ ಅನ್ನು ಪ್ರತಿವರ್ಷವೂ ನಡೆಸುವ ಉದ್ದೇಶ ಹೊಂದಿರುವುದಾಗಿ ಹೇಳಿತ್ತು. ಅಂತಹ ಒಂದು ಪಯಣ 12 ಡೈವಿಂಗ್‌ಗಳನ್ನು ಹೊಂದಿದ್ದು, 2023ರ ಬೇಸಿಗೆಯಲ್ಲಿ ನಡೆಯುತ್ತದೆ ಎನ್ನಲಾಗಿತ್ತು. ಈ ಕಂಪನಿಯ ಮೊದಲ ಕೆಲವು ಡೈವಿಂಗ್‌ಗಳು ಹೇಗೆ ನಡೆದಿವೆ ಎಂಬ ಕುರಿತು ಹಲವು ಟ್ವೀಟ್‌ಗಳು ಲಭ್ಯವಿವೆ. ಮುಳುಗಿ ಹೋದ ಪ್ರಖ್ಯಾತ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸುವ ಎಂಟು ದಿನಗಳ ಪ್ರವಾಸಕ್ಕೆ ಈ ಕಂಪನಿ ಪ್ರತಿಯೊಬ್ಬ ಖಾಸಗಿ ಪ್ರವಾಸಿಗನಿಗೂ 2,50,000 ಡಾಲರ್ ಶುಲ್ಕ ವಿಧಿಸುತ್ತದೆ. ಟೈಟಾನಿಕ್ ಹಡಗು ಅಟ್ಲಾಂಟಿಕ್ ಸಮುದ್ರದ ತಳದಲ್ಲಿ, 3,800 ಮೀಟರ್ ಆಳದಲ್ಲಿದೆ. ಇದು ಈಶಾನ್ಯ ಕೆನಡಾದ ನ್ಯೂ ಫೌಂಡ್‌ಲ್ಯಾಂಡ್ ದ್ವೀಪದಿಂದ 600 ಕಿಲೋಮೀಟರ್ ದೂರದಲ್ಲಿದೆ.

ದುರದೃಷ್ಟಕರ ಸಾಗರ ಯಾತ್ರೆ: 
ಜೂನ್ 22ರಂದು, ಮುಳುಗಿರುವ ಟೈಟಾನಿಕ್ ಹಡಗಿನ ತಲೆಯ ಭಾಗದಿಂದ 500 ಮೀಟರ್ ದೂರದಲ್ಲಿ ಟೈಟಾನಿನ ಐದು ದೊಡ್ಡ ದೊಡ್ಡ ತುಣುಕುಗಳು ಕಾಣಿಸಿದ್ದವು. ಅದರಲ್ಲಿ ಟೈಟಾನಿನ ಹಲ್‌ನ ಎರಡು ಭಾಗಗಳು ಮತ್ತು ಅದರ ಹೊರಮೈಯ ಎರಡು ಭಾಗಗಳು ಸೇರಿವೆ. ಓಶನ್‌ಗೇಟ್ ಈ ಸಬ್‌ಮರೀನ್ ನಲ್ಲಿ ಸಮುದ್ರದಾಳಕ್ಕೆ ತೆರಳಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದೆ.

ಇದನ್ನೂ ಓದಿ- ಅಧಿಕಾರಕ್ಕಾಗಿ ರಕ್ಷಣಾ ಸಚಿವಾಲಯದೊಡನೆ ಕದನಕ್ಕಿಳಿದ 'ಪುಟಿನ್ ಅಡುಗೆಯವ' ಪ್ರಿಗೊಝಿನ್

ವುಡ್ಸ್ ಹೋಲ್ ಓಶನ್‌ಗ್ರಾಫಿಕ್ ಇನ್ಸ್ಟಿಟ್ಯೂಟ್‌ನ ಕಾರ್ಲ್ ಹಾರ್ಟ್ಸ್‌ವಿಲ್ ಅವರು ಈ ಅವಘಡದ ಕುರಿತು ಮಾಹಿತಿ ನೀಡಿದ್ದು, ಟೈಟಾನ್ ಅವಶೇಷಗಳು 1912ರಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನಿಂದ 1,600 ಅಡಿ ದೂರದಲ್ಲಿ ಸಿಕ್ಕಿದ್ದು, ಯಾವುದೇ ಅಪಘಾತ ಸಂಭವಿಸಿರುವ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.

ಸಬ್‌ಮರೀನ್ ಅಂತಿಮ ಪ್ರಯಾಣದಲ್ಲಿ ಮೂವರು ಪ್ರವಾಸಿಗರಿದ್ದು, ಬ್ರಿಟಿಷ್ ಉದ್ಯಮಿ, ಆ್ಯಕ್ಷನ್ ಗ್ರೂಪ್ ಸಂಸ್ಥಾಪಕ ಹಮಿಶ್ ಹಾರ್ಡಿಂಗ್, ಪಾಕಿಸ್ತಾನಿ ಉದ್ಯಮಿ ಶಹಜಾ಼ದಾ ದಾವೂದ್ ಹಾಗೂ ಅವರ 19 ವರ್ಷದ ಮಗ ಸುಲೇಮಾನ್ ಪ್ರವಾಸಕ್ಕೆ ತೆರಳಿದ್ದರು. ಸಬ್‌ಮರೀನ್ ನಲ್ಲಿ ಇಬ್ಬರು ಸಿಬ್ಬಂದಿಗಳಿದ್ದು, ಫ್ರಂಚ್ ಅನ್ವೇಷಕ ಪೌಲ್ ಹೆನ್ರಿ ನಾರ್ಜೊಲೆಟ್ ಹಾಗೂ ಓಶನ್‌ಗೇಟ್ ಸಂಸ್ಥಾಪಕ ಸ್ಟಾಕ್‌ಟನ್ ರಶ್ ಕರ್ತವ್ಯ ನಿರ್ವಹಿಸುತ್ತಿದ್ದರು.

ಕ್ಯಟಾಸ್ಟ್ರಫಿಕ್ ಇಂಪ್ಲೋಷನ್ ಥಿಯರಿ (ಅಂತಃಸ್ಫೋಟ): 
ರಕ್ಷಣಾ ಕಾರ್ಯಾಚರಣೆ ನಡೆಸಿದವರ ಪ್ರಕಾರ, ಸಬ್‌ಮರೀನ್ ಛಿದ್ರವಾದ ದುರಂತ 'ಕ್ಯಟಸ್ಟ್ರಾಫಿಕ್ ಇಂಪ್ಲೋಷನ್' ಅಥವಾ ಸಬ್‌ಮರೀನ್ ಅಂತಃಸ್ಫೋಟದ ಪರಿಣಾಮವಾಗಿ ಸಂಭವಿಸಿದೆ. ಬಹುತೇಕ ನಿಖರವಾಗಿ ಗೋಚರಿಸುವುದೇನೆಂದರೆ, ಈ ನೌಕೆಯ ಹಲ್ (ಕವಚ) 3,800 ಮೀಟರ್‌ಗಳ ಆಳದಲ್ಲಿ ನೀರಿನ ಒತ್ತಡವನ್ನು ತಾಳುವಲ್ಲಿ ವಿಫಲವಾಗಿದೆ. ಅಂತಃಸ್ಫೋಟ ಎಂದರೆ, ಯಾವುದೇ ವಸ್ತುವಿನ ಒಳಗಿನ ಒತ್ತಡಕ್ಕಿಂತಲೂ ಹೊರಮೈ ಒತ್ತಡ ಹೆಚ್ಚಾಗುವುದರಿಂದ ಅದು ಸ್ಫೋಟಿಸಿ, ನಾಶವಾಗುವುದು. ಕೇವಲ ಮಿಲಿಸೆಕೆಂಡುಗಳಲ್ಲಿ ಈ ಒತ್ತಡ ತಡೆಯಲಾಗದೆ ಈ ಅಂತಃಸ್ಫೋಟ ನಡೆಯುತ್ತದೆ. ಇದು ಸ್ಫೋಟಕ್ಕೆ (ಎಕ್ಸ್‌ಪ್ಲೋಶನ್) ವಿರುದ್ಧ ರೀತಿಯಲ್ಲಿ ಜರುಗುತ್ತದೆ. ಕ್ರಶ್ ಡೆಪ್ತ್ ಎಂದರೆ ಒಂದು ಸಬ್‌ಮರೀನ್ ಅಂತಃಸ್ಫೋಟ ಹೊಂದುವ ಆಳವಾಗಿದ್ದು, ಸಾಮಾನ್ಯವಾಗಿ ಅದು ಸಬ್‌ಮರೀನ್ ಕಾರ್ಯಾಚರಣೆ ನಡೆಸಬಲ್ಲ ಆಳಕ್ಕಿಂತ ಸಾಕಷ್ಟು ಹೆಚ್ಚಿರುತ್ತದೆ. ಆದರೆ ಟೈಟಾನ್ ನೌಕೆಯ ಹಲ್‌ನಲ್ಲಿನ ದೋಷದ ಕಾರಣದಿಂದ, ಅದು ಕಾರ್ಯಾಚರಣೆ ನಡೆಸಲು ಸೂಕ್ತವಾದ ಆಳದಲ್ಲೇ (ಡಿಸೈನ್ ಡೆಪ್ತ್) ಅಂತಃಸ್ಫೋಟಗೊಂಡಿದೆ.

ಇದನ್ನೂ ಓದಿ- ಸ್ಫೋಟಕ ಒಳನೋಟಗಳು: ಕೇಂದ್ರ ಸರ್ಕಾರದೊಳಗಿನ ಬಿರುಕು ಬಯಲು ಮಾಡಿದ ಟ್ವಿಟರ್ ಮಾಜಿ ಸಿಇಒ!

ಸಮುದ್ರ ಮಟ್ಟದಲ್ಲಿ ಒತ್ತಡ ಸಾಮಾನ್ಯವಾಗಿ ಪ್ರತಿ ಚದರ ಇಂಚಿಗೆ (ಪಿಎಸ್ಐ) 14.7 ಪೌಂಡ್ ಇರುತ್ತದೆ. ಆದರೆ ಸಾಗರದಾಳಕ್ಕೆ ಇಳಿಯುತ್ತಾ ಹೋದ ಹಾಗೆ, ಈ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಟೈಟಾನಿಕ್ ಅವಶೇಷಗಳಿರುವ ಪ್ರದೇಶದಲ್ಲಿ ನೀರಿನ ಒತ್ತಡ ಬಹುತೇಕ 6,000 ಪಿಎಸ್ಐ ಆಗಿರುತ್ತದೆ.

ಅಮೆರಿಕಾದ ಮಾಜಿ ನೌಕಾದಳದ ಅಧಿಕಾರಿ, ಫ್ಲೋರಿಡಾ ಇಂಟರ್ನ್ಯಾಷನಲ್ ಯುನಿವರ್ಸಿಟಿ ಉಪನ್ಯಾಸಕರಾದ ಈಲೀನ್ ಮಾರ್ಟಿ ಅವರು ಈ ಅಂತಃಸ್ಫೋಟದ ವೇಗ ಪ್ರತಿ ಗಂಟೆಗೆ 2.4 ಸಾವಿರ ಕಿಲೋಮೀಟರ್ ಆಗಿದ್ದು, ಮಾನವರ ಮೆದುಳಿಗೆ ಅಲ್ಲಿ ಏನಾಯಿತು ಎಂದು ಅರ್ಥ ಮಾಡಿಕೊಳ್ಳುವಷ್ಟೂ ಸಮಯವಿರುವುದಿಲ್ಲ ಎಂದಿದ್ದಾರೆ.

ಈ ಅವಘಡದ ನಿಖರ ಕಾರಣ, ಸ್ಫೋಟ ನಡೆದ ಸಮಯವನ್ನು ತನಿಖೆಗಳು ಕಂಡುಹಿಡಿಯಲಿವೆ. ಆದರೆ ಅಮೆರಿಕಾದ ಕೋಸ್ಟ್ ಗಾರ್ಡ್ ತಜ್ಞರು ಈಗಾಗಲೇ ಈ ಸ್ಫೋಟ ಸಬ್‌ಮರೀನ್ ಹುಡುಕಾಟ ಆರಂಭವಾಗುವ ಮೊದಲೇ, ಅಂದರೆ ಅದು ನೀರಿನಾಳಕ್ಕಿಳಿದ ಕೆಲ ಸಮಯದಲ್ಲೇ ನಡೆದಿದೆ ಎಂದು ನಂಬಿದ್ದಾರೆ. ಇಡೀ ಹುಡುಕಾಟದ ಅವಧಿಯಲ್ಲಿ, ಹುಡುಕಾಟದ ಪ್ರದೇಶದಲ್ಲಿ ಅಳವಡಿಸಲಾದ ಸೋನಾರ್ ಸಾಧನಗಳು ಯಾವುದೇ ವಿಚಿತ್ರ ಶಬ್ದಗಳನ್ನು ಗುರುತಿಸಿಲ್ಲ. ಟೈಟಾನ್ ತನ್ನ ಮಾತೃ ಹಡಗು ಪೋಲಾರ್ ಪ್ರಿನ್ಸ್ ಜೊತೆ ಸಂಪರ್ಕ ಕಡಿದುಕೊಂಡ ಕೆಲ ಸಮಯದ ಬಳಿಕ, ಅಮೆರಿಕಾದ ನೌಕಾಪಡೆ ಸಬ್‌ಮರೀನ್ ಸರ್ವಯಲೆನ್ಸ್ ಅಕೌಸ್ಟಿಕ್ ವ್ಯವಸ್ಥೆ ಬಳಸಿಕೊಂಡು, ಒಂದು ಮಿನಿ ಸಬ್‌ಮರೀನ್ ಸ್ಫೋಟಗೊಳ್ಳುವಂತಹ ಶಬ್ದವನ್ನು ಗ್ರಹಿಸಿತ್ತು.

ಸುರಕ್ಷಿತವಲ್ಲದ ಟೈಟಾನ್ ಸಬ್‌ಮರೀನ್: 
ತಜ್ಞರು ಈ ಮೊದಲೇ ಈ ಸಬ್‌ಮರ್ಸಿಬಲ್ ವಿನ್ಯಾಸ ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರದಲ್ಲಿ ಪ್ರಯೋಗ ನಡೆಸುವ ರೀತಿಯಲ್ಲಿದ್ದು, ಇದು ಪ್ರಮಾಣಪತ್ರ ಪಡೆಯಬೇಕೆಂದು ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡಿದ್ದರು. ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಡೇವಿಡ್ ಕ್ಯಾಮರಾನ್ ತನಗೆ ಓಶನ್‌ಗೇಟ್ ಸಂಸ್ಥೆ ಟೈಟಾನ್ ಸಬ್‌ಮರ್ಸಿಬಲ್‌ನ ಹಲ್ ಅನ್ನು ಟೈಟಾನಿಯಂ ಮತ್ತು ಕಾರ್ಬನ್ ಫೈಬರ್‌ಗಳ ಮೂಲಕ ನಿರ್ಮಿಸುತ್ತೇವೆ ಎಂದಿದ್ದೇ ಸಂದೇಹಾಸ್ಪದವಾಗಿ ತೋರಿತ್ತು ಎಂದಿದ್ದಾರೆ.

ಟೈಟಾನ್ ಸಬ್‌ಮರ್ಸಿಬಲ್ ಅನ್ನು ಒಂದು ಮಿಲಿಟರಿ ಸಬ್‌ಮರೀನ್ ಜೊತೆಗೂ ಹೋಲಿಸಲು ಸಾಧ್ಯವಿಲ್ಲ. ಹೆಚ್ಚಿನ ಸಬ್‌ಮರೀನ್‌ಗಳು ಬಹುತೇಕ 300 ಮೀಟರ್‌ಗಳ ಆಳದಲ್ಲಿ ಕಾರ್ಯಾಚರಿಸುತ್ತವೆ. ಯುಎಸ್ ಸೀವಾಲ್ಫ್ ವರ್ಗದ ಸಬ್‌ಮರೀನ್‌ಗಳು 2 ಇಂಚು ದಪ್ಪನೆಯ ಎಚ್‌ವೈ-100 ಉಕ್ಕಿನ ಮಿಶ್ರಲೋಹದಿಂದ ಮಾಡಲ್ಪಟ್ಟಿದ್ದು, 914 ಮೀಟರ್ ಆಳಕ್ಕೆ ಇಳಿಯಬಲ್ಲವು ಎನ್ನಲಾಗಿದೆ. ಆದ್ದರಿಂದ, ಸೀವಾಲ್ಫ್ ವರ್ಗದ ಸಬ್‌ಮರೀನ್ ಸಾಗರ ತಳದಿಂದ 9,500 ಅಡಿಗಳ ಮೇಲೆ ಅಂತಃಸ್ಫೋಟ ಹೊಂದುವ ಸಾಧ್ಯತೆಗಳಿವೆ. ಟೈಟಾನ್ ಇದೇ ಆಳದಲ್ಲಿ ಕಣ್ಮರೆಯಾಗಿತ್ತು.

ಇದನ್ನೂ ಓದಿ- ಅಗ್ನಿ ಪ್ರೈಮ್ ಪಿ: ಚೀನಾದ ಮಿಲಿಟರಿ ವೃದ್ಧಿಗೆ ಭಾರತದ ಉತ್ತರ

ಟೈಟಾನಿನ ದುರಂತ ಅಂತ್ಯ ಆಳ ಸಮುದ್ರದ ವಾತಾವರಣ ಎಷ್ಟು ಪಟ್ಟುಬಿಡದ ರೀತಿಯಲ್ಲಿ ಕಾಡಬಲ್ಲದು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಈ ವಿಫಲವಾದ ಅನ್ವೇಷಣೆ ಕೇವಲ ತನ್ನ ದುರಂತ ಅಂತ್ಯದಲ್ಲಿ ಮಾತ್ರವೇ ಟೈಟಾನಿಕ್ ದುರಂತಕ್ಕೆ ಸಮಾನವಾಗಿರುವುದಲ್ಲದೆ, ಅನ್ವೇಷಣೆಗಳು ಮತ್ತು ಅವುಗಳ ಜೊತೆಗಿನ ಅಪಾಯಗಳೊಡನೆ ಮಾನವರ ಅವಿನಾಭಾವ ಸಂಬಂಧವನ್ನೂ ನೆನಪು ಮಾಡುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಾವು ಆಳ ಸಮುದ್ರದ ಅನ್ವೇಷಣೆಗಳ ಕುರಿತಾದ ನಮ್ಮ ಯೋಚನೆಗಳನ್ನು, ಅದರಲ್ಲೂ ಸುರಕ್ಷತಾ ಕ್ರಮಗಳನ್ನು ಮರು ರೂಪಿಸಿಕೊಳ್ಳುವ ಅವಶ್ಯಕತೆಯಿದೆ. ಈ ದುರಂತದಲ್ಲಿ ದುರ್ಮರಣ ಹೊಂದಿದ ಅನ್ವೇಷಕರು, ಆಸಕ್ತರನ್ನು ನೆನಪಿನಲ್ಲಿಟ್ಟುಕೊಂಡು, ಇಂತಹ ಅನ್ವೇಷಣಾ ವಾಹನಗಳ ಸಮರ್ಪಕ ವಿನ್ಯಾಸ ಮತ್ತು ಸೂಕ್ತ ಪ್ರಮಾಣಪತ್ರಗಳನ್ನು ಹೊಂದುವ ಅವಶ್ಯಕತೆಗಳನ್ನು ಪೂರೈಸಬೇಕಿದೆ. ಆಳ ಸಮುದ್ರ ಎನ್ನುವುದು ಅತ್ಯಂತ ಪ್ರಬಲ ವಿಚಾರವಾಗಿದ್ದು, ಅದನ್ನು ಅತ್ಯಂತ ಗೌರವದಿಂದ, ಜಾಗರೂಕತೆಯಿಂದ ಅನ್ವೇಷಿಸಬೇಕು ಎಂಬ ಪಾಠವನ್ನೂ ಈ ಘಟನೆ ಬೋಧಿಸುತ್ತದೆ. ಇಂತಹ ಒಂದು ದುರಂತ ನಡೆದಿದ್ದರೂ, ಆಳ ಸಮುದ್ರದ ವಿಸ್ಮಯಗಳನ್ನು ತಿಳಿಯುವ ಮಾನವರ ಆಸಕ್ತಿ, ಆಕರ್ಷಣೆ ಕಡಿಮೆಯಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News