ಜನ್ಮ ದಿನದ ಸಂಭ್ರಮದಲ್ಲಿ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ದನಿ ಪ್ರಕಾಶಿಸುವಂತೆ ಮಾಡಿದ ವಿಜಯ ಪ್ರಕಾಶ್'ಗೆ ಜನ್ಮ ದಿನದ ಶುಭಾಶಯ  

Last Updated : Feb 21, 2019, 03:02 PM IST
ಜನ್ಮ ದಿನದ ಸಂಭ್ರಮದಲ್ಲಿ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ title=
Pic Courtesy: Twitter@ZeemediaKannada

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ದನಿ ಪ್ರಕಾಶಿಸುವಂತೆ ಮಾಡಿದ ಕನ್ನಡದ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.

ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗಾಯಕ ವಿಜಯ್ ಪ್ರಕಾಶ್ ಫೆಬ್ರವರಿ 21, 1976ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರಿನ ವಿದ್ಯಾರಣ್ಯ ಪುರಂ ನಲ್ಲಿರುವ ಸೈಂಟ್ ಥಾಮಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯ್ ಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಅಚ್ಚು-ಮೆಚ್ಚು. 

ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡಿದ್ದ ವಿಜಯ್ ಪ್ರಕಾಶ್, ಪಾಶ್ಚಾತ್ಯ ಸಂಗೀತವನ್ನೂ ಕಲಿತಿದ್ದಾರೆ.
ಇಂಜಿನಿಯರಿಂಗ್ ಸೇರಿದ್ದ ವಿಪಿ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಹೊಂದಿದ್ದರು. ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ವಿದ್ಯಾಭ್ಯಾಸದಲ್ಲಿ ಗಮನ ಹರಿಸಲಾಗದೆ ಬಹಳ ದೊಡ್ಡ ತೀರ್ಮಾನ ತೆಗೆದುಕೊಂಡರು. ಏಕೆ ಹೋಗುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೂ ಗೊತ್ತಿಲ್ಲದೆ, ತಂದೆ-ತಾಯಿಗೆ ಪತ್ರ ಬರೆದಿಟ್ಟು ಕೈಯಲ್ಲಿ 700 ರೂಪಾಯಿ, ಬ್ಯಾಗ್ ನಲ್ಲಿ ಒಂದುಜೊತೆ ಬಟ್ಟೆ ಹಾಕಿಕೊಂಡು ಹೊರಟರು. 

ಮೈಸೂರಿನಿಂದ ಬೆಂಗಳೂರಿಗೆ ಬಂದ ವಿಪಿ, ಅಲ್ಲಿಂದ ತಿರುಪತಿಗೆ ಹೋದರು. ಅಂದಿನಿಂದ ಇಂದಿನವರೆಗೂ ವಿಜಯ್ ಪ್ರತಿವರ್ಷ ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡುತ್ತಾರೆ. ತಿರುಪತಿಯಿಂದ ಬಾಂಬೆಗೆ ಪ್ರಯಾಣ ಬೆಳೆಸಿದ ವಿಪಿ ಜೀವನ ಮುಂದೆ ಬಹಳ ಕಷ್ಟಕರವಾಗಿತ್ತು. ತಿನ್ನಲು ಏನೂ ಇರದ ಅವರಿಗೆ ರೈಲ್ವೇ ನಿಲ್ದಾಣವೇ ಮಲಗುವ ತಾಣವಾಗಿತ್ತು.

ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದ ವಿಜಯ್ ಪ್ರಕಾಶ್ ಜಾಹಿರಾತುಗಳಿಗೆ ಹಾಡುವ ಮುಖಾಂತರ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಮೊದಲು ಪಡೆದ ಸಂಭಾವನೆ 2,700 ರೂಪಾಯಿ. ಬಳಿಕ ರೇಡಿಯೋಗಳಲ್ಲಿ ಹಾಡಲು ಅವರಿಗೆ ಅವಕಾಶಗಳು ದೊರೆತವು. ವಾಯ್ಸ್ ಓವರ್ಗಳಲ್ಲಿ ಹೆಸರುವಾಸಿಯಾಗಿದ್ದ ಮಹಾತಿ ಅವರನ್ನು ವಿಜಯ್ ಪ್ರಕಾಶ್ ಭೇಟಿ ಮಾಡಿದ್ದು 'ರೇಡಿಯೋ ವಾಣಿ' ಸ್ಟುಡಿಯೋದಲ್ಲೇ. 

ತೆಲುಗು ಸೀರಿಯಲ್‍ಗೆ ಹಾಡಿಗಾಗಿ ವಿಪಿ ಮತ್ತು ಮಹಾತಿ ಒಟ್ಟಾಗಿ ಹಾಡಿದರು. ಕೆಲದಿನಗಳ ನಂತರ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತು. ನಂತರ 2001ರಲ್ಲಿ ತಿರುಪತಿಯಲ್ಲಿ ಅವರಿಬ್ಬರು ವಿವಾಹವಾದರೂ. ಈ ದಂಪತಿಗೆ ಕಾವ್ಯ ಪ್ರಕಾಶ್ ಎಂಬ ಮುದ್ದು ಮುಖದ ಮಗಳಿದ್ದಾಳೆ.

ಹಿಂದಿ, ಕನ್ನಡ, ತಮಿಳ್, ತೆಲುಗು, ಮಲೆಯಾಳಂ, ಮರಾಠಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ಹಲವು ಪ್ರಸಿದ್ಧ ಗೀತೆಗಳನ್ನು ಹಾಡಿ ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿರುವ, ಪ್ರತಿಷ್ಠಿತ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿಗೂ ಪಾತ್ರರಾಗಿರುವ ನಮ್ಮ ಕನ್ನಡದ ಹೆಮ್ಮೆಯ ಪುತ್ರ ವಿಜಯ್ ಪ್ರಕಾಶ್ ಅವರಿಗೆ Zee ಕನ್ನಡದ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
 

Trending News