ಕರೋನಾ ವಿರುದ್ಧ ಹೋರಾಡಲು ಕೇಜ್ರಿವಾಲ್ 5T ಪ್ಲಾನ್

ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ಕರೋನಾವನ್ನು ತಡೆಗಟ್ಟಲು ನಾವು ಮೂರು ಹೆಜ್ಜೆ ಮುಂದಿರಬೇಕು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Last Updated : Apr 7, 2020, 03:05 PM IST
ಕರೋನಾ ವಿರುದ್ಧ ಹೋರಾಡಲು ಕೇಜ್ರಿವಾಲ್ 5T ಪ್ಲಾನ್ title=

ನವದೆಹಲಿ: ಕರೋನಾವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ತಾವು ತಜ್ಞ ವೈದ್ಯರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ Testing, Tracing, Treatment, Team work, Tracking ಹೀಗೆ 5 T ಯೋಜನೆಯನ್ನು  ಸಿದ್ಧಪಡಿಸಿರುವುದಾಗಿ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ (Arvind Kejriwal), ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ಕರೋನಾವನ್ನು ತಡೆಗಟ್ಟಲು ನಾವು ಮೂರು ಹೆಜ್ಜೆ ಮುಂದಿರಬೇಕು. ಅದಕ್ಕಾಗಿ ಸರ್ಕಾರ ಐದು ಅಂಶಗಳ ಯೋಜನೆಯನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದರು.

ಇದು ದೆಹಲಿ ಸರ್ಕಾರದ 5 T ಯೋಜನೆ:

ಟೆಸ್ಟಿಂಗ್ - ಯಾವ ದೇಶಗಳಲ್ಲಿ ಮೊದಲು ಟೆಸ್ಟಿಂಗ್ ನಡೆಸಲಿಲ್ಲವೋ ಅಂತಹ ದೇಶಗಳಲ್ಲಿ ಕೊರೋನಾ ಹೆಚ್ಚಾಗಿ ಹರಡಿತು. ಒಂದೊಮ್ಮೆ ನಾವು ಪರೀಕ್ಷೆ ನಡೆಸದೆ ಹೋದರೆ ಸೋಂಕಿರುವ ಬಗ್ಗೆ ನಮಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಕೆಜ್ರೀವಾಲ್ ದಕ್ಷಿಣ ಕೊರಿಯಾವನ್ನು ನೋಡುವುದಾದರೆ ಅಲ್ಲಿ 1 ಲಕ್ಷ ಜನರನ್ನು ಶೀಘ್ರವಾಗಿ ಪರೀಕ್ಷಿಸಲು ಆದೇಶಿಸಲಾಯಿತು. ಹೀಗಾಗಿ ಅಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿ ಹರಡಲಿಲ್ಲ ಎಂದರು.

ಟ್ರೆಸಿಂಗ್: ವ್ಯಕ್ತಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದ ಕೂಡಲೇ ಆ ವ್ಯಕ್ತಿ ಕಳೆದ 14 ದಿನಗಳಲ್ಲಿ ಭೇಟಿಯಾಗಿದ್ದವರೆಲ್ಲರನ್ನೂ ಪತ್ತೆಹಚ್ಚಿ ಅವರಿಗೂ ಕೊರೋನಾ ಟೆಸ್ಟ್ ಮಾಡಿಸುವುದು ಬಹಳ ಮುಖ್ಯ. ದೆಹಲಿಯಲ್ಲಿ ಉತ್ತಮ ಮಟ್ಟದಲ್ಲಿ ಟ್ರೇಸಿಂಗ್ ನಡೆಯುತ್ತಿದೆ. 27, 702 ಜನರ ಸಂಖ್ಯೆಯನ್ನು ಟ್ರೆಸಿಂಗ್ ಗಾಗಿ ನೀಡಲಾಗಿದೆ. ಇದಕ್ಕಾಗಿ ಪೊಲೀಸರ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಜ್ರೀವಾಲ್ ಮಾಹಿತಿ ನೀಡಿದರು.

ಟ್ರೀಟ್ಮೆಂಟ್: ಅನಾರೋಗ್ಯಕ್ಕೆ ಒಳಗಾಗುವ ವ್ಯಕ್ತಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಅಂತೆಯೇ ಕಾರೋನಾ ವೈರಸ್ ಸೋಂಕಿತ ವ್ಯಕ್ತಿಗೂ ಚಿಕಿತ್ಸೆ ಬಹಳ ಮುಖ್ಯ. ದೆಹಲಿಯಲ್ಲಿ ಪ್ರಸ್ತುತ 525 ಸಕಾರಾತ್ಮಕ ಪ್ರಕರಣಗಳಿವೆ. ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 3 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. ಎಲ್‌ಎನ್‌ಜೆಪಿ, ಜಿಪಿ ಪಂತ್, ರಾಜೀವ್ ಗಾಂಧಿ, ಈ ಎಲ್ಲಾ ಆಸ್ಪತ್ರೆಗಳಲ್ಲಿ ಕರೋನಾಗೆ ಚಿಕಿತ್ಸೆ ಇರುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ 2450 ಹಾಸಿಗೆಗಳಿವೆ ಎಂದು ಸಿಎಂ ಹೇಳಿದರು. ಉಳಿದ ಖಾಸಗಿ ಆಸ್ಪತ್ರೆಗಳಲ್ಲಿ 500 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಕರೋನಾಗೆ 2950 ಹಾಸಿಗೆ ನಿಕ್ಷೇಪಗಳಿವೆ. ಕರೋನದ ಸುಮಾರು 3 ಸಾವಿರ ರೋಗಿಗಳನ್ನು ನಿರ್ವಹಿಸಲು ನಾವು ಸಮರ್ಥರಾಗಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು. ರೋಗಿಗಳ ಸಂಖ್ಯೆ 3 ಸಾವಿರವನ್ನು ದಾಟಿದರೆ, ನಂತರ ಜಿಟಿಬಿಯನ್ನು ಕರೋನಾ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಗುವುದು.

8,000 ಹಾಸಿಗೆ ಹೊಂದಿರುವ ಆಸ್ಪತ್ರೆಗಳು, 12 ಸಾವಿರ ಹೋಟೆಲ್ ಕೊಠಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಇವುಗಳಲ್ಲಿ ಕೊರೋನಾ ಪಾಸಿಟಿವ್ ರೋಗಿಗಳನ್ನು ದಾಖಲಿಸಲಾಗುವುದು.   30 ಸಾವಿರ ರೋಗಿಗಳಿದ್ದರೆ, 400 ವೆಂಟಿಲೇಟರ್‌ಗಳು ಬೇಕಾಗುತ್ತವೆ. ಪಿಪಿಇ ಕಿಟ್‌ನ ಸಮಸ್ಯೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಾಯಕ್ಕೆ ಮನವಿ ಮಾಡಲಾಗಿದೆ. ಕೇಂದ್ರವು ಬುಧವಾರ 27 ಸಾವಿರ ಪಿಪಿಇ ಕಿಟ್‌ಗಳನ್ನು ನೀಡಲಿದೆ ಎಂದು ಅವರು ಸರ್ಕಾರ ಕೈಗೊಂಡಿರುವ ವ್ಯವಸ್ಥೆ ಬಗ್ಗೆ ವಿವರಿಸಿದರು.

ಟೀಮ್ ವರ್ಕ್ - ಕರೋನಾ ವಿರುದ್ದ ಯಾರೂ ಸಹ ಏಕಾಂಗಿಯಾಗಿ ಹೊರಡಲು ಸಾಧ್ಯವಿಲ್ಲ. ಎಲ್ಲಾ ರಾಜ್ಯ ಸರ್ಕಾರಗಳು ಒಂದು ತಂಡದಂತೆ ವರ್ತಿಸುತ್ತಿವೆ. ಈ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಮರೆತು ಕೆಲಸ ಮಾಡುತ್ತಿದ್ದಾರೆ.  ವೈದ್ಯರು ಮತ್ತು ದಾದಿಯರು ಈ ತಂಡದ ಭಾಗವಾಗಿದ್ದಾರೆ ಎಂದರು.

ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆ- ನಾವು ಮಾಡಿದ ಯೋಜನೆಯನ್ನು ಟ್ರ್ಯಾಕ್ ಮಾಡುವುದು ನಮ್ಮ ಜವಾಬ್ದಾರಿ. ನಾವು ಮೂರು ಹೆಜ್ಜೆ ಮುಂದೆ ಇದ್ದರೆ, ನಾವು ತಂಡವಾಗಿ ಕರೋನಾ ಯುದ್ಧವನ್ನು ಗೆಲ್ಲಲು ಸಾಧ್ಯವಾಗುತ್ತದೆ  ಎಂದು ಸಿಎಂ ಹೇಳಿದರು.
 

Trending News