ತೀರ್ಥೋದ್ಭವದ ಶುಭಘಳಿಗೆಗೆ ಸಾಕ್ಷಿಯಾದ ಸಿಎಂ ಕುಮಾರಸ್ವಾಮಿ

ತಲಕಾವೇರಿಯ ತೀರ್ಥಕುಂಡದಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡ ಕಾವೇರಿ ಮಾತೆ.

Last Updated : Oct 18, 2018, 09:52 AM IST
ತೀರ್ಥೋದ್ಭವದ ಶುಭಘಳಿಗೆಗೆ ಸಾಕ್ಷಿಯಾದ ಸಿಎಂ ಕುಮಾರಸ್ವಾಮಿ title=

ಮಡಿಕೇರಿ: ದಕ್ಷಿಣ ಭಾರತದ ಪವಿತ್ರ ನದಿಗಳಲ್ಲೊಂದಾದ ಕಾವೇರಿಯ ತಲಕಾವೇರಿಯಲ್ಲಿ ಬುಧವಾರ ಸಂಜೆ  ಮೇಷ ಲಗ್ನದಲ್ಲಿ  6.43ರ ಶುಭಘಳಿಗೆಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ತೀರ್ಥೋದ್ಭವವಾಯಿತು. ಇದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ನಾಡಿನ ಎಲ್ಲಾ ಭಾಗಗಳಿಂದ ಸಾವಿರಾರು ಭಕ್ತರು ತಲಕಾವೇರಿಗೆ ಆಗಮಿಸಿದ್ದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ತೀರ್ಥೋದ್ಭವದ ಶುಭಘಳಿಗೆಗೆ ರಾಜ್ಯದ ಮುಖ್ಯಮಂತ್ರಿ ಸಾಕ್ಷಿಯಾದರು.

ಗೋಪಾಲಕೃಷ್ಣಾಚಾರ್ ನೇತೃತ್ವದಲ್ಲಿ 15 ಅರ್ಚಕರ ತಂಡ ಸಂಜೆ 4.15ರ ವೇಳೆಗೆ ಬ್ರಹ್ಮಕುಂಡಿಕೆಗೆ ಆಗಮಿಸಿ ಪೂಜಾ ಕಾರ್ಯ ಪ್ರಾರಂಭಿಸಿದರು. ಕುಂಡಿಕೆ ಸುತ್ತ ನೆರೆದಿದ್ದ ಭಕ್ತರು ಜೈ ಜೈ ಮಾತಾ ಕಾವೇರಿ ಮಾತಾ ಎಂದು ಭಜನೆ ಮಾಡುತ್ತ ಕಾವೇರಿ ದರುಶನಕ್ಕಾಗಿ ಕಾದು ಕುಳಿತಿದ್ದರು. ತೀರ್ಥೋದ್ಭವಕ್ಕೆ ಮುನ್ನ ಭಾಗಮಂಡಲದ ಶ್ರೀ ಭಗಂಡೇಶ್ವರನ ಸನ್ನಿಧಾನದಿಂದ ಮಂಗಳವಾದ್ಯಗಳೊಂದಿಗೆ ದೇವತಕ್ಕ ನೇತೃತ್ವದಲ್ಲಿ ತರಲಾದ ಬೆಳ್ಳಿಯ ಬಿಂದಿಗೆ ಹಾಗೂ ಭಂಡಾರವನ್ನು ಅರ್ಚಕರು ಸ್ವೀಕರಿಸಿ, ಮಾತೆ ಕಾವೇರಿಗೆ ಸಾಂಪ್ರದಾಯಿಕ ಆಭರಣಗಳನ್ನು ತೊಡಿಸಿ, ಅಲಂಕರಿಸಿ, ಮಹಾ ಸಂಕಲ್ಪ ಪೂಜೆಗೆ ಅಣಿಯಾದರು. ತಲಕಾವೇರಿ ದೇವಾಲಯದ ತಕ್ಕಮುಖ್ಯಸ್ಥರಾದ ಕೋಡಿ ಕುಟುಂಬದ ಮೋಟಯ್ಯ ಉಪಸ್ಥಿತರಿದ್ದರು. 

ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂಬ ಮಾತನ್ನು ಸಾಬೀತು ಪಡಿಸಿದ ಸಿಎಂ:
ಕೊಡಗಿನ ಕಾವೇರಿ ನದಿ ಉಗಮ ಸ್ಥಳಕ್ಕೆ ಭೇಟಿ ನೀಡಿದರೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿದೆ. ಆ ಕಾರಣಕ್ಕಾಗಿಯೇ ‌ಹಿಂದಿನ ಯಾವ ಮುಖ್ಯಮಂತ್ರಿಗಳೂ ತೀರ್ಥೋದ್ಭವದಲ್ಲಿ ಭಾಗವಹಿಸಿಲ್ಲ ಎಂದೂ ಸಹ ಹೇಳಲಾಗುತ್ತದೆ. ಈ ಹಿಂದೆ 1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್. ಪಟೇಲ್ ತಲಕಾವೇರಿ ಉಗಮ ಸ್ಥಳಕ್ಕೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದ್ದರು. ಜ್ಯೋತಿಷಿಯೊಬ್ಬರ ಭವಿಷ್ಯದಂತೆ ಜೆ.ಹೆಚ್. ಪಟೇಲ್ ನಾಲ್ಕು ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. 

ಇದ್ಯಾವುದನ್ನೂ ಲೆಕ್ಕಿಸದೆ ಕಾವೇರಿ ತೀರ್ಥೋದ್ಭವಕ್ಕೆ ಸಾಕ್ಷಿಯಾದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಸಾಬೀತು ಪಡಿಸಿದರು. 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಹಿರಿಯ ಅರ್ಚಕ ನಾರಾಯಣಾಚಾರ್‌, ಹಿರಿಯ ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಉಪಸ್ಥಿತರಿದ್ದರು.
 

Trending News