ರಾಜ್ಯದ ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿಯೇ ನೇರ ಹೊಣೆ: ಯಡಿಯೂರಪ್ಪ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನರಿಗೆ ಒಳ್ಳೆಯದನ್ನು ಮಾಡಿದ್ದರೆ ಸರ್ಕಾರದ 6 ತಿಂಗಳ ಸಾಧನೆ ಏನು ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

Last Updated : Nov 23, 2018, 07:14 PM IST
ರಾಜ್ಯದ ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿಯೇ ನೇರ ಹೊಣೆ: ಯಡಿಯೂರಪ್ಪ title=

ಬೆಂಗಳೂರು: ರಾಜ್ಯದಲ್ಲಿ  ರೈತರ ಸರಣಿ ಆತ್ಮಹತ್ಯೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಸುಳ್ಳು ಭರವಸೆಗಳನ್ನು ನೀಡುತ್ತಾ ಅಸ್ತಿತ್ವದಲ್ಲಿರುವುದೇ ಸಮ್ಮಿಶ್ರ ಸರ್ಕಾರದ ಸಾಧನೆ. ಕುಮಾರಸ್ವಾಮಿ ಸರ್ಕಾರ ಏನಾದರೂ ಸಹಾಯ ಮಾಡಿದ್ದರೆ ರೈತರು ಏಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದರು? ಇವರು ರೈತರಿಗೆ ನೀಡಿದ್ದ ಭರವಸೆಗಳನ್ನು ಪೂರೈಸಿದ್ದಿದ್ದರೆ ರೈತರೇಕೆ ಸಿಎಂ ಹೆಸರು ಬರೆದಿಟ್ಟು ಆತ್ನಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 

ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಹಗುರವಾಗಿ ಮಾತನಾಡುತ್ತಾರೆ. ರೈತರನ್ನು ಹಿಂಡಲಗಾ, ಬಳ್ಳಾರಿ ಜೈಲಿಗೆ ಕಳುಹಿಸಿ ಅಂತಾ ಸಹನೆ ಕಳೆದುಕೊಂಡು ಸಿಎಂ ಹೇಳ್ತಿದ್ದಾರೆ. ಮಹಿಳೆಯರು ಮತ್ತು ರೈತರಿಗೆ ಅಪಮಾನ ಮಾಡುತ್ತಾ ಮತ್ತು ದರ್ಪದ ಮಾತುಗಳನ್ನು ಆಡುವುದೇ ಈ ಸರ್ಕಾರದ ಸಾಧನೆ. ಮಾತೆತ್ತಿದರೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಾ ಜನರಿಗೆ ಅಪಮಾನ ಮಾಡುತ್ತಿದ್ದಾರೆಂದು ಎಂದು ಸಿಎಂ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಅವರು, ವಿರೋಧ ಪಕ್ಷ, ಮಾಧ್ಯಮದವರು ಅವರ ತಾಳಕ್ಕೆ ತಕ್ಕಂತೆ ಇರಬೇಕು ಎಂದು ಸಿಎಂ ಅಂದುಕೊಂಡಿದ್ದಾರೆ. ಬೇಕಾದರೆ, ಬರೆದುಕೊಳ್ಳಿ ಅಂತಾ ಸೊಕ್ಕಿನ ಮಾತು ಆಡಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಿದರೆ 5 ವರ್ಷ ಸಿಎಂ ಆಗಿರಲಿ. ಆದರೆ, ಅವರು ಏನು ಮಾಡುತ್ತಿದ್ದಾರೆ? ಸಾಂದರ್ಭಿಕ ಕೂಸಿಗೆ ಯಾವುದೇ ಗೊತ್ತು ಗುರಿ ಇಲ್ಲ. ಒಂದು ವೇಳೆ ಅವರು ನಿಜಕ್ಕೂ ಏನಾದರೂ ಜನರಿಗೆ ಒಳ್ಳೆಯದನ್ನು ಮಾಡಿದ್ದರೆ 6 ತಿಂಗಳ ಸಾಧನೆ ಏನು ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.

Trending News