‘ಆಪರೇಷನ್ ಕಮಲ’ಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?: ರಾಹುಲ್ ಗಾಂಧಿಗೆ ಎಚ್‍ಡಿಕೆ ಪ್ರಶ್ನೆ

'ಯುಪಿಎ 1 & 2 ಸರ್ಕಾರಗಳಲ್ಲಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸಂಪುಟದಲ್ಲಿ ಅದೇ ಡಿಎಂಕೆಯ ಜೊತೆ 10 ವರ್ಷ ಅಧಿಕಾರದ ಸೋಪಾನ ಹಂಚಿಕೊಂಡಿದ್ದು ಸೈದ್ಧಾಂತಿಕ ಬದ್ಧತೆಯಾ?'

Written by - Zee Kannada News Desk | Last Updated : May 16, 2022, 03:49 PM IST
  • ಸೈದ್ಧಾಂತಿಕ ಬದ್ಧತೆ ಎಂದರೆ ಏನು? ಎಂದು ರಾಹುಲ್‌ಗಾಂಧಿ ಪ್ರಾದೇಶಿಕ ಪಕ್ಷಗಳಿಗೆ ಬಿಡಿಸಿ ಹೇಳಬೇಕು
  • ಆಪರೇಷನ್‌ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ‘ಕೈʼಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ?
  • ಮಿತ್ರಪಕ್ಷಗಳನ್ನೇ ನುಂಗಿಹಾಕುವುದೂ ಸೈದ್ಧಾಂತಿಕ ರಾಜಕಾರಣವಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ
‘ಆಪರೇಷನ್ ಕಮಲ’ಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?: ರಾಹುಲ್ ಗಾಂಧಿಗೆ ಎಚ್‍ಡಿಕೆ ಪ್ರಶ್ನೆ title=
ರಾಹುಲ್ ಗಾಂಧಿ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

ಬೆಂಗಳೂರು: ‘ಆಪರೇಷನ್‌ ಕಮಲ’ವೆಂಬ ಅನೈತಿಕ ರಾಜಕಾರಣಕ್ಕೆ ‘ಕೈ’ಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

‘ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ..’ ಹೀಗೆಂದು ಕಾಂಗ್ರೆಸ್ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ವ್ಯಾಖ್ಯಾನ ಮಾಡಿದ್ದಾರೆ. ಹಾಗಾದರೆ ಸೈದ್ಧಾಂತಿಕ ಬದ್ಧತೆ ಎಂದರೆ ಏನು? ರಾಹುಲ್‌ಗಾಂಧಿ ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು’ ಎಂದು ಎಚ್‍ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ

‘ಸೈದ್ಧಾಂತಿಕ ಬದ್ಧತೆ ಎಂದರೆ.. ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಹಿನ್ನೆಲೆಯ ನೆಪ ನೀಡಿ, ಡಿಎಂಕೆ-ಎಲ್‌ಟಿಟಿಇ ಸಂಬಂಧವನ್ನು ಮುನ್ನೆಲೆಗೆ ತಂದು ಆ ಪಕ್ಷವನ್ನು ಸಂಪುಟದಿಂದ ಹೊರಗಿಡಬೇಕು ಎಂದ್ಹೇಳಿ ಐ.ಕೆ.ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರವನ್ನು ಉರುಳಿಸಿದ ಕಾಂಗ್ರೆಸ್‌ ಪಕ್ಷವು ಆಮೇಲೆ ಅದೇ ಪಕ್ಷದ ಹೆಗಲ ಮೇಲೆ ಕೈ ಹಾಕಿದ್ದಾ!?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಯುಪಿಎ 1 & 2 ಸರ್ಕಾರಗಳಲ್ಲಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸಂಪುಟದಲ್ಲಿ ಅದೇ ಡಿಎಂಕೆಯ ಜೊತೆ 10 ವರ್ಷ ಅಧಿಕಾರದ ಸೋಪಾನ ಹಂಚಿಕೊಂಡಿದ್ದು ಸೈದ್ಧಾಂತಿಕ ಬದ್ಧತೆಯಾ? ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್‍ಗೆ ಮಾತ್ರ ಇದೆ ಎನ್ನುವ ರಾಹುಲ್‌ ಗಾಂಧಿ ತಮ್ಮ ಪಕ್ಷ 10 ವರ್ಷ ಅಧಿಕಾರದ ಸುಖ ಅನುಭವಿಸಿದ್ದು ಪ್ರಾದೇಶಿಕ ಪಕ್ಷಗಳ ಶಕ್ತಿ ಮತ್ತು ದಾಕ್ಷಿಣ್ಯದಿಂದ ಎನ್ನುವುದನ್ನು ಮರೆಯಬಾರದು’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ನ್ಯಾಯ ಕೋರಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು ..!

‘ಮೈತ್ರಿ ಸರ್ಕಾರ ಮಾಡೋಣವೆಂದು ಮನೆ ಬಾಗಿಲಿಗೆ ಬಂದು, ಸರ್ಕಾರವನ್ನೂ ಮಾಡಿ ಹಿಂಬಾಗಿಲಿನಿಂದ ಆಪರೇಷನ್‌ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ‘ಕೈʼಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ? ಮಿತ್ರಪಕ್ಷಗಳನ್ನೇ ನುಂಗಿಹಾಕುವುದೂ ಸೈದ್ಧಾಂತಿಕ ರಾಜಕಾರಣವಾ?’ ಎಂದು ಎಚ್‍ಡಿಕೆ ಪ್ರಶ್ನಿಸಿದ್ದಾರೆ.

ಪ್ರಾದೇಶಿಕ ಪಕ್ಷಗಳ ಭೀತಿ ಎದುರಿಸುತ್ತಿರುವ ಫೋಬಿಯಾದಲ್ಲಿರುವ ಕಾಂಗ್ರೆಸ್; ಆಂಧ್ರ, ತೆಲಂಗಾಣ‌, ಒಡಿಶಾ ಸೇರಿದಂತೆ ಯಾವ ರಾಜ್ಯಗಳಲ್ಲಿ ಹೇಳಹೆಸರಿಲ್ಲದಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿದೆ. ಇದನ್ನು ರಾಹುಲ್‌ಗಾಂಧಿ ಅರ್ಥ ಮಾಡಿಕೊಂಡರೆ ಒಳ್ಳೆಯದು’ ಎಂದು ವ್ಯಂಗ್ಯವಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News