ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ: ಜೆಡಿಎಸ್

ಇದರಲ್ಲಿ ಸುಳ್ಳಾಡುವುದೇನಿದೆ? ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ. ಹಾಗಾದ್ರೆ ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎನ್ನುವುದು ತಿಳಿಯಲಿ ಎಂದು ಜೆಡಿಎಸ್ ಟೀಕಿಸಿದೆ.

Written by - Puttaraj K Alur | Last Updated : Nov 12, 2022, 11:58 AM IST
  • ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ
  • ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ! ಆದರೆ ಸಿಎಂ ಪತ್ರ ಬರೆದು HD ದೇವೇಗೌಡರನ್ನು ಆಹ್ವಾನಿಸಿದ್ದಾರೆಂತೆ
  • ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ
ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ: ಜೆಡಿಎಸ್ title=
ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ

ಬೆಂಗಳೂರು: ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ಎಚ್‍.ಡಿ.ದೇವೇಗೌಡರಿಗೆ ಆಹ್ವಾನ ನೀಡುವ ವಿಚಾರವಾಗಿ ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.  

ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ‘ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ! ಆದರೆ; ಮುಖ್ಯಮಂತ್ರಿಗಳೇ ಪತ್ರ ಬರೆದು ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ. ಸಿಎಂ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆಂದು ಬಿಜೆಪಿ ಟ್ವೀಟಿಸಿದೆ. ಸರಿ, ನವೆಂಬರ್‌ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಸಚಿವ ಅಶೋಕ್ ‘ಕೈ’: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

‘ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ? ಮುಖ್ಯಮಂತ್ರಿಗಳು ಬರೆದ ‘ಘನವೇತ್ತ’ ಪತ್ರವನ್ನೊಮ್ಮೆ ‘ಸಂಘಸಂಸ್ಕಾರʼದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ?(ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ? ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ!! ಹಾಗಾದರೆ ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ? ಇಂಥ ಹಿರಿಯರ ವಿಷಯದಲ್ಲಿ ಜಬಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ?’ ಎಂದು ಜೆಡಿಎಸ್ ಪ್ರಶ್ನಿಸಿದೆ.

‘ಇದರಲ್ಲಿ ಸುಳ್ಳಾಡುವುದೇನಿದೆ? ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ. ಹಾಗಾದ್ರೆ ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎನ್ನುವುದು ತಿಳಿಯಲಿ. ಸತ್ಯ ಹೇಳುವ ದಮ್ಮು, ತಾಖತ್ತು ಮುಖ್ಯಮಂತ್ರಿಗಳಿಗೆ ಇದೆ ಎಂದು ನಾವು ಭಾವಿಸುತ್ತೇವೆ. ಇನ್ನು ಕನ್ನಡದ ಆಸ್ಮಿತೆ ಪ್ರಶ್ನೆ. ಬಿಜೆಪಿಗೆ ನಾಚಿಕೆಯಾಗಬೇಕು, ಹಿಂದಿ ಹೇರಿಕೆ ವಾಕರಿಕೆ ಬರುವಷ್ಟಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪಂಗನಾಮ, ಈ ನೆಲದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹತ್ತಿಕ್ಕಿ, ಇಡೀ ದಕ್ಷಿಣ ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿಗರಾ ಕನ್ನಡದ ಮಣ್ಣಿನ ಮಕ್ಕಳನ್ನು ಗುರುತಿಸಿದ್ದು?’ ಅಂತಾ ಜೆಡಿಎಸ್ ಕುಟುಕಿದೆ.

ಇದನ್ನೂ ಓದಿ: ಮೊದಲ ಆಹ್ವಾನವೇ ದೇವೇಗೌಡರಿಗೆ; ಸುಳ್ಳಾಡುವ JDS ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದ ಬಿಜೆಪಿ

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’; ಇದು ಭಾರತ ಕಂಡ ಪರಮ ಢೋಂಗೀ ಘೋಷಣೆ. ಇದಕ್ಕೆ ‘ಸಬ್ ಕಾ ಸರ್ವನಾಶ್ʼ ಎಂದು ಸೇರಿದರೆ ಪರಿಪೂರ್ಣ. ಕರ್ನಾಟಕದಲ್ಲಿ ಶಿಕ್ಷಣ, ಧರ್ಮ, ಜಾತಿ, ಆಚಾರ, ವಿಚಾರ, ಆಹಾರ, ಉಡುಪುಗಳ ವಿಷಯದಲ್ಲೂ ಬಿಜೆಪಿ ಮಾಡಿದ್ದು ಸಾಕ್ಷಾತ್ ಸರ್ವನಾಶವೇ. ಕುಟುಂಬ ರಾಜಕಾರಣ ಅಂತೀರಾ? ಗುಜರಾತಿನಿಂದ ಶುರುವಾಗಿ ದೆಹಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ? ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ?’ ಎಂದು ಜೆಡಿಎಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News